ಯೂನಿಸೆಫ್ ಜಾಗತಿಕ ಶೃಂಗಸಭೆಯಲ್ಲಿ ಪುತ್ತಿಗೆ ಶ್ರೀ
ದರೇಸಲಾಂ, ಜೂ 20: ತಾಂಜಾನಿಯಾ ದೇಶದ ರಾಜಧಾನಿ ದರೇಸಲಾಂ ನಗರದಲ್ಲಿ ಸೋಮವಾರ (ಜೂ 18) ನಡೆದ ಜಾಗತಿಕ ಧಾರ್ಮಿಕ ನಾಯಕರ ಶೃಂಗಸಭೆಯಲ್ಲಿ ಉಡುಪಿ ಪುತ್ತಿಗೆ ಮಠದ ಶ್ರೀ ಸುಗಣೇಂದ್ರ ತೀರ್ಥ ಶ್ರೀಪಾದರು ಪಾಲ್ಗೊಂಡಿದ್ದರು. ಬಡತನ ನಿರ್ಮೂಲನೆ ವಿಚಾರದಲ್ಲಿ ಅವರು ಮುಂದಿಟ್ಟ ವಿಚಾರಧಾರೆ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
ಯೂನಿಸೆಫ್ ಸಂಘಟನೆಯ ಜಾಗತಿಕ ಧಾರ್ಮಿಕ ನಾಯಕರ ಒಕ್ಕೂಟದ ಸಹಕಾರದೊಂದಿಗೆ ಜಿಎನ್ಆರ್ಸಿ ಸಂಸ್ಥೆಯ ಮೂಲಕ ಬಡಮಕ್ಕಳ ಪುನಶ್ಚೇತನಕ್ಕಾಗಿ ಕಾರ್ಯಯೋಜನೆ ರೂಪಿಸಲು ಈ ಸಮ್ಮೇಳನ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಆಶಯ ಭಾಷಣ ಮಾಡಿದ ಪುತ್ತಿಗೆ ಶ್ರೀಗಳು ಬಡತನ ಎಂಬುದು ದೈವಸೃಷ್ಟಿಯಲ್ಲ, ಮಾನವನು ತನ್ನ ಬುದ್ದಿ ದಾರಿದ್ರ್ಯ ಮತ್ತು ಹೃದಯಹೀನತೆಯ ದುರ್ಬಲತೆಯಿಂದ ಜಗತ್ತಿನಲ್ಲಿ ಕಡುಬಡತನ ಸೃಷ್ಟಿಯಾಗಿದೆ ಎಂದು ಹೇಳಿದ್ದಾರೆ.

ಧರ್ಮ ನಿರ್ಮಿತ ಹೃದಯ ಶ್ರೀಮತಿಕೆಯಿಂದ ಮಾತ್ರವೇ ಭೌತಿಕ ಬೌದ್ದಿಕ ಬಡತನ ನಿರ್ಮೂಲನೆ ಸಾಧ್ಯವೇ ಹೊರತು ಧರ್ಮದ ತಿರಸ್ಕಾರದಿಂದಲ್ಲ. ಧರ್ಮವನ್ನು ತಮ್ಮ ನೀಚ ಸ್ವಾರ್ಥಕ್ಕಾಗಿ ದುರ್ಬಳಕೆ ಮಾಡಿಕೊಂಡ ರಾಜನೀತಿಜ್ಞರು ಕೊನೆಗೂ ಧರ್ಮದ ಪಾರಮ್ಯವನ್ನು, ಧರ್ಮದ ಸದ್ಬಳಕೆಯನ್ನು ಒಪ್ಪಿಕೊಳ್ಳುವುದು ಇಂದಲ್ಲ ನಾಳೆ ಅನಿವಾರ್ಯವಾಗಲಿದೆ ಎಂದು ಶ್ರೀಗಳು ಅಭಿಪ್ರಾಯ ಪಟ್ಟಿದ್ದಾರೆ.
ತಾಂಜಾನಿಯಾದ ಅಧ್ಯಕ್ಷ ಜಕಾಯ ಮಿಷೋ ಶೃಂಗಸಭೆಯನ್ನು ಉದ್ಘಾಟಿಸಿ ಜಾಗತಿಕ ಧಾರ್ಮಿಕ ನಾಯಕರ ಅಭಿಯಾನಕ್ಕೆ ತನ್ನ ಪೂರ್ಣ ಬೆಂಬಲ ಸೂಚಿಸಿದ್ದಾರೆ.












Click it and Unblock the Notifications