ಬೇಸಿಗೆ ಆರಂಭದಲ್ಲೇ ಯಾದಗಿರಿಯಲ್ಲಿ ನೀರಿಗಾಗಿ ಹಾಹಾಕಾರ
ಯಾದಗಿರಿ 8: ಮಾರ್ಚ್ ಬೇಸಿಗೆ ಆರಂಭದಲ್ಲೇ ಯಾದಗಿರಿಯಲ್ಲಿ ನೀರಿಗಾಗಿ ಹಾಹಾರಕಾರ ಶುರುವಾಗಿದೆ. ಹನ್ನೆರೆಡು ಹದಿನೈದು ದಿನಗಳಿಗೊಮ್ಮೆ ಕುಡಿಯಲು ನೀರು ಬರುತ್ತಿದ್ದು, ಬೇಸಿಗೆ ಆರಂಭದಲ್ಲೇ ಹೀಗಾದರೆ ಮುಂದಿನ ದಿನಗಳ ಬಗ್ಗೆ ಜನ ಆತಂಕಗೊಂಡಿದ್ದಾರೆ.
ಶಿವರಾತ್ರಿ ಕಳೆದ ಬಳಿಕ ಶಿವ ಶಿವ ಎನ್ನುವಷ್ಟು ಬಿಸಿಲು ನೆತ್ತಿ ಸುಡಲು ಆರಂಭಿಸಿದೆ. ಅದಾಗಲೇ ಯಾದಗಿರಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ನೀರಿಗಾಗಿ ಜನ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕು ಕೇಂದ್ರವಾಗಿ 10 ವರ್ಷಗಳು ಕಳೆದಿದ್ರೂ ಇದುವರೆಗೂ ನೀರಿನ ಸಮಸ್ಯೆ ಮಾತ್ರ ಸರಿ ಹೋಗಿಲ್ಲ.

ತಾಲೂಕಿನ ಬಂದಳ್ಳಿ ಗ್ರಾಮದಲ್ಲೂ ಕುಡಿಯುವ ನೀರಿಗಾಗಿ ಜನ ಸಂಕಷ್ಟ ಎದುರಿಸುತ್ತಿದ್ದಾರೆ. ಅಂತರ್ಜಲ ಕುಸಿತವಾಗಿ ಬೋರವೆಲ್ ಬತ್ತಿ ಹೋಗಿವೆ. ಬೋರವೆಲ್ ಗಳು ಬತ್ತಿ ಹೋಗಿದ್ದಕ್ಕೆ ಜನರಿಗೆ ಕುಡಿಯುವ ನೀರು ಸಿಗುತ್ತಿಲ್ಲ. ಇದರಿಂದಾಗಿ ಪಂಚಾಯಿತಿ ಅಧಿಕಾರಿಗಳು ಟ್ಯಾಂಕರ್ ಮೂಲಕ ಹನ್ನೆರೆಡು ಹದಿನೈದು ದಿನಗಳಿಗೊಮ್ಮೆ ನೀರು ಪೂರೈಸುತ್ತಿದ್ದಾರೆ.
ಖಾಸಗಿ ಬೋರವೆಲ್ ನಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ ಈ ನೀರು ಸಾಕಾಗುತ್ತಿಲ್ಲ ಎಂದು ಜನ ದೂರಿದ್ದಾರೆ. 12-15 ದಿನಗಳಿಗೊಮ್ಮೆ ನೀರು ಬಂದರೆ ಅಷ್ಟು ದಿನಕ್ಕೆ ಬೇಕಾಗುವಷ್ಟು ನೀರನ್ನು ಪೂರೈಸುತ್ತಿಲ್ಲ. ತಲಾ 8-10 ಬಿಂದಿಗೆ ನೀರು ಬಿಟ್ಟರೆ ಹೆಚ್ಚು ಎಂದು ಜನ ಆರೋಪಿಸಿದ್ದಾರೆ. ಕೆಲವೆಡೆ ಗಂಟೆಗಟ್ಟಲೆ ಕಾದರೂ ಕೂಡ ನೀರು ಸಿಗುತ್ತಿಲ್ಲ ಎಂದು ಜನ ಆರೋಪ ಮಾಡಿದ್ದಾರೆ.
ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಜಲಜೀವನ್ ಮಿಷನ್ ಈಗಾಗಲೇ ಜಿಲ್ಲೆಯಲ್ಲಿ ಮುಕ್ತಾಯದ ಹಂತ ತಲುಪಿದ್ರೂ ವಡಗೇರಾ ಜನರಿಗೆ ಮಾತ್ರ ಒಂದು ಹನಿ ನೀರು ಸಿಕ್ಕಿಲ್ಲ. ಇನ್ನೂ ಇದೇ ವಡಗೇರಾ ಗ್ರಾಮಕ್ಕೆ ಕುಡಿಯುವ ನೀರಿಗಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿಯಲ್ಲೂ ನೀರು ಪೂರೈಕೆಗೆ ಯೋಜನೆ ಆರಂಭಗೊಂಡಿದ್ರೂ ಸಹ ಯಾವುದೇ ಪ್ರಯೋಜನವಾಗಿಲ್ಲ.
ಶಾಲೆಗೆ ಹೋಗಬೇಕಾದ ಮಕ್ಕಳು ನಿತ್ಯವೂ, ಶಾಲೆ ಬಿಟ್ಟು ನೀರಿಗಾಗಿ ಕಾಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮದಿಂದಾಚೆ ಎರಡು ಕಿಲೋ ಮೀಟರ್ ದೂರದಲ್ಲಿರುವ ಬೋರ್ ವೆಲ್ಗೆ ಪೋಷಕರೊಟ್ಟಿಗೆ ಹೋಗಿ ಬೈಕ್, ಸೈಕಲ್ ಹಾಗೂ ತಳ್ಳೋ ಬಂಡಿಯಲ್ಲಿ ನೀರು ತರಬೇಕಾದ ಸ್ಥಿತಿ ಇದೆ.












Click it and Unblock the Notifications