ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಯಾದಗಿರಿಯಲ್ಲಿ ಗಿಡ-ಮರಗಳ ಮಾರಣ ಹೋಮ
ಯಾದಗಿರಿ ಮಾರ್ಚ್ 11: ಗಿಡ ಮರಗಳನ್ನು ಉಳಿಸಿ ಅದರ ಬಗ್ಗೆ ಜಾಗೃತಿ ಮೂಡಿಸುವುದು ಎಲ್ಲರ ಕರ್ತವ್ಯ. ಆದರೆ ಈ ಬಗ್ಗೆ ಅರಿವು ಮೂಡಿಸಬೇಕಾದ ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗಿಡ-ಮರಗಳು ಬೆಂಕಿಗೆ ಆಹುತಿಯಾದ ಘಟನೆ ಯಾದಗಿರಿಯಲ್ಲಿ ನಡೆದಿದೆ. ಸಾವಿರಾರು ಗಿಡ-ಮರಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಭಸ್ಮವಾಗಿವೆ.
ಹೌದು... ಯಾದಗಿರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಈ ಘಟನೆ ನಡೆದಿದೆ. ಕ್ರೀಡಾಂಗಣದ ಬಳಿ ಸ್ವಚ್ಚತೆ ಭಾಗವಾಗಿ ಒಣ ಹುಲ್ಲಿಗೆ ಬೆಂಕಿ ಹಾಕಲಾಗಿತ್ತು. ಈ ಬೆಂಕಿ ಕ್ರೀಡಾಂಗಣದ ಸುತ್ತಲೂ ವ್ಯಾಪಿಸಿದೆ. ಬೆಂಕಿಯ ಕೆನ್ನಾಲಿಗೆಗೆ ಸುತ್ತಲು ಇದ್ದ ಗಿಡ ಮರಗಳು ಸುಟ್ಟು ಭಸ್ಮವಾಗಿವೆ. ಒಂದಲ್ಲಾ ಎರಡಲ್ಲಾ ಬೆಂಕಿಯ ಜ್ವಾಲೆಗೆ ಸಿಲುಕಿ ಸಾವಿರಾರು ಗಿಡ ಮರಗಳು ಸುಟ್ಟು ಹೋಗಿವೆ.

ಕ್ರೀಡಾ ಅಧಿಕಾರಿಗಳ ಎಡವಟ್ಟಿಗೆ ಕ್ರೀಡಾಂಗದ ಸುತ್ತಲು ಇದ್ದ ಬೃಹತ್ ಗಾತ್ರದ ಮರ ಗಿಡಗಳು ಸುಟ್ಟು ಕರಕಲಾಗಿ ಹೋಗಿವೆ. ಯಾದಗಿರಿಯಲ್ಲಿ ಬೇಸಿಗೆ ಬಂದರೆ ಕುಡಿಯುವ ನೀರಿನ ಸಮಸ್ಯೆ ಸೃಷ್ಟಿಯಾಗುತ್ತದೆ. ಮರಗಿಡಗಳು ನೀರಿಲ್ಲದೆ ಒಣಗಿ ಹೋಗುತ್ತವೆ. ನೆತ್ತಿ ಸುಡುವ ಬಿಸಿಲಿಗೆ ಜನ ಮನೆ ಬಿಟ್ಟು ಹೊರ ಬಾರದ ಸ್ಥಿತಿ ಇದೆ. ಹೀಗಿರುವಾಗ ಮರ ಗಿಡಗಳನ್ನು ಪೋಷಿಸಿ ಪಾಲನೆ ಮಾಡಬೇಕಾದ ಅಧಿಕಾರಿಗಳಿಂದ ದೊಡ್ಡ ಎಡವಟ್ಟು ನಡೆದು ಹೋಗಿದೆ.
ಒಣ ಹುಲ್ಲಿಗೆ ಹಚ್ಚಿದ ಬೆಂಕಿ ಕೆನ್ನಾಲಿಗೆಗೆ ಬೇವಿನ ಮರ, ಆಲದ ಮರ, ಹುಣಸೆ ಗಿಡ ಸೇರಿದಂತೆ ಹಲವಾರು ಗಿಡಗಳು ಸುಟ್ಟು ಹೋಗಿವೆ. ಇದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಬೇಸಿಗೆಯಲ್ಲಿ ಒಣ ಹುಲ್ಲಿಗೆ ಬೆಂಕಿ ಹಾಕುವಾಗ ಜಾಗರೂಕರಾಗಿರಬೇಕು. ಆದರೆ ಅಧಿಕಾರಿಗಳು ಬೇಜವಬ್ದಾರಿತನದಿಂದ ವರ್ತಿಸಿದ್ದಾರೆಂದು ಸ್ಥಳೀಯರು ದೂರಿದ್ದಾರೆ.
ಯಾದಗಿರಿಯಲ್ಲಿ ಬಿಸಿಲು ಅಧಿಕ. ಬೇಸಿಗೆ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಹಾಗೂ ಪರಿಸರವನ್ನು ಕಾಪಾಡುವ ಉದ್ದೇಶದಿಂದ ಬೇರೆ ಬೇರೆ ತಳಿಯ ಗಿಡಗಳನ್ನು ಬೇರೆ ಬೇರೆ ಜಿಲ್ಲೆಗಳಿಂದ ತಂದು ಕ್ರೀಡಾಂಗಣದ ಸುತ್ತ ನೆಡಲಾಗಿತ್ತು. ಆದರೆ ಇಲ್ಲಿನ ಸಾವಿರಾರು ಮರಗಳು ಸುಟ್ಟು ಹೋಗಿರುವುದರಿಂದ ಕ್ರೀಡಾಪಟುಗಳಿಗೆ ಮಾತ್ರವಲ್ಲದೆ ಈ ಭಾಗದ ಜನರಿಗೆ ಬಿಸಿಲ ಬಿಸಿ ಸಹಿಸಿಕೊಳ್ಳುವುದು ಕಷ್ಟವಾಗಿದೆ.
ಬಿಸಿಲಿನಿಂದ ರಕ್ಷಿಸಿಕೊಳ್ಳಲು ಆಲದ ಮರ ಹಾಗೂ ಬೇವಿನ ಮರಗಳ ಕೆಳಗೆ ಕುಳಿತು ಜನ ವಿಶ್ರಾಂತಿ ಪಡೆಯುತ್ತಿದ್ದರು. ಅಲ್ಲದೆ ಕ್ರೀಡಾಪಟುಗಳು ಆಹಾರವನ್ನು ಸೇವಿಸಲು ಕೂಡ ಈ ಮರಗಳು ಆಸರೆಯಾಗಿದ್ದವು. ಸಂಜೆಯಾದರೆ ತಣ್ಣನೆ ಗಾಳಿಯನ್ನು ಆನಂದಿಸುವ ಸ್ಥಳಿಯರು ವಾಕಿಂಗ್ ಜಾಗಿಂಗ್ ಗಾಗಿ ಇಲ್ಲಿಗೆ ಆಗಮಿಸುತ್ತಾರೆ. ಈ ಮರ ಗಿಡಗಳಿಂದ ಬೀಸುವುದು ಮಾತ್ರವಲ್ಲದೆ, ಗಾಳಿಯ ಗುಣಮಟ್ಟವೂ ಕೂಡ ಉತ್ತಮವಾಗಿತ್ತು. ಆದರೆ ಅಧಿಕಾರಿಗಳ ಎಡವಟ್ಟಿಗೆ ಎಲ್ಲವೂ ನಾಶವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾದಗಿರಿಯಲ್ಲಿ ಬಿಸಿಲು ಹೆಚ್ಚಾಗಿರುವುದರಿಂದ ಒಂದು ಗಿಡ ಬೆಳೆಸುವುದು ಕಷ್ಟವಿದೆ. ನೀರಿಲ್ಲದೆ ಅದರ ಪಾಲನೆ ಪೋಷಣೆ ಮಾಡುವುದು ಅಸಾಧ್ಯ. ಹೀಗಿರುವಾಗ ವರ್ಷಗಳಿಂದ ಇರುವ ಮರ ಗಿಡಗಳನ್ನು ಸುಟ್ಟು ಹಾಕಿರುವುದು ಭಾರೀ ವಿರೋಧಕ್ಕೆ ಕಾರಣವಾಗಿದೆ. ಇದಕ್ಕೆ ಜಿಲ್ಲಾಡಳಿತ ಹಾಗೂ ಕ್ರೀಡಾ ಅಧಿಕಾರಿಗಳೇ ನೇರ ಹೊಣೆ ಎಂದು ಸ್ಥಳೀಯರು ದೂರಿದ್ದಾರೆ.












Click it and Unblock the Notifications