ಯಾದಗಿರಿ: 10 ಸಾವಿರ ಒಂದು ರೂಪಾಯಿ ನಾಣ್ಯಗಳಲ್ಲಿ ಚುನಾವಣಾ ಠೇವಣಿ ಕಟ್ಟಿದ ಸ್ವತಂತ್ರ ಅಭ್ಯರ್ಥಿ!
ಯಾದಗಿರಿ, ಏಪ್ರಿಲ್. 18: ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ವೇಳೆ ಹಲವು ಕುತೂಹಲಕಾರಿ ವಿಷಯಗಳು ಹೊರಬರುತ್ತಿವೆ. ಅಭ್ಯರ್ಥಿಗಳ ಆಸ್ತಿ ಘೋಷಣೆ ಕೇಳಿ ಜನಸಾಮಾನ್ಯರು ತಲೆ ಸುತ್ತಿ ಬಿದ್ದರೇ, ಮತ್ತೆ ಕೆಲವು ಅಭ್ಯರ್ಥಿಗಳು ಚುನಾವಣಾ ಠೇವಣಿ ಹಣ ಕಟ್ಟುವ ಸಮಯದಲ್ಲಿ ವಿಭಿನ್ನ ಪ್ರಯೋಗಗಳ ಮೂಲಕ ಜನರ ಮನಸ್ಸು ಗೆದ್ದಿದ್ದಾರೆ.
ಸೋಮವಾರವಷ್ಟೇ ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಠೇವಣಿ ಇಡಲು ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯೊಬ್ಬರು ಬುಟ್ಟಿಯಲ್ಲಿ ರಾಶಿ ರಾಶಿ ನಾಣ್ಯಗಳನ್ನು ತಂದು ಚುನಾವಣಾ ಅಧಿಕಾರಿಗಳ ಮುಂದಿಟ್ಟಿದ್ದರು. ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ತಂದಿಟ್ಟ ಬುಟ್ಟಿ ನೋಡಿ ಚುನಾವಣಾ ಅಧಿಕಾರಿಗಳು ಸುಸ್ತಾಗಿದ್ದರು. ಈಗ ಇಂತಹದ್ದೇ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.

ಮೇ 10 ಎಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಯಾದಗಿರಿ ಜಿಲ್ಲೆಯಲ್ಲಿ ಯುವ ಸ್ವತಂತ್ರ ಅಭ್ಯರ್ಥಿಯೊಬ್ಬರು ತಮ್ಮ ಠೇವಣಿ ಹಣ 10,000 ರೂಪಾಯಿಗಳನ್ನು ಸಂಪೂರ್ಣವಾಗಿ ಒಂದು ರೂಪಾಯಿ ನಾಣ್ಯಗಳಲ್ಲಿ ಪಾವತಿಸಿದ್ದಾರೆ. ಹತ್ತು ಸಾವಿರ ನಾಣ್ಯಗಳನ್ನು ನೀಡುವ ಮೂಲಕ ಚುನಾವಣಾ ಅಧಿಕಾರಿಗಳಿಗೆ ಚಿಲ್ಲರೆ ಎಣಿಸುವ ಕೆಲಸಕ್ಕೆ ನೂಕಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಪ್ರತಿ ಅಭ್ಯರ್ಥಿಗೆ ಠೇವಣಿ ಶುಲ್ಕ 10,000 ರೂಪಾಯಿಯಾಗಿದೆ. ಯುವ ಸ್ವತಂತ್ರ ಅಭ್ಯರ್ಥಿ ಕಟ್ಟಿದ ಶುಲ್ಕವನ್ನು ಯಾದಗಿರಿಯ ಕಚೇರಿಯಲ್ಲಿ ಮೇಜಿನ ಮೇಲೆ ಹರಡಲಾಗಿತ್ತು. ಈ ನಾಣ್ಯಗಳನ್ನು ಎಣಿಸಲು ಅಧಿಕಾರಿಗಳು ಎರಡು ಗಂಟೆಗಳ ಕಾಲ ತೆಗೆದುಕೊಂಡಿದ್ದಾರೆ. ಯಾದಗಿರಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವ ಸ್ವತಂತ್ರ ಅಭ್ಯರ್ಥಿ ಯಂಕಪ್ಪ ಮಂಗಳವಾರ ಕೊರಳಿಗೆ ಬ್ಯಾನರ್ ಹಾಕಿಕೊಂಡು ತಹಶೀಲ್ದಾರ್ ಕಚೇರಿಗೆ ಆಗಮಿಸಿದ್ದರು.
ತಮ್ಮ ಕೊರಳಿಗೆ ಹಾಕಿಕೊಂಡಿದ್ದ ಪೋಸ್ಟರ್ ನಲ್ಲಿ 12ನೇ ಶತಮಾನದ ಸಮಾಜ ಸುಧಾರಕರಾದ ಜ್ಞಾನಜ್ಯೋತಿ ಬಸವೇಶ್ವರ, ಸಂತ ಕವಿ ಕನಕದಾಸ, ಸ್ವಾಮಿ ವಿವೇಕಾನಂದ, ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಚಿತ್ರಗಳು ಮತ್ತು ಸಂವಿಧಾನದ ಪೀಠಿಕೆ ಇತ್ತು. ಇದು ಜನರನ್ನು ಆಕರ್ಷಿಸಿದ್ದು, ಹಲವು ಮಂದಿ ಸ್ವತಂತ್ರ ಅಭ್ಯರ್ಥಿಯನ್ನು ಮೆಚ್ಚಿಕೊಂಡಿದ್ದಾರೆ.

ಇದಲ್ಲದೇ ಈ ಚಿತ್ರಗಳ ಕೆಳಗೆ ಕನ್ನಡದಲ್ಲಿ ಬರೆಯಲಾದ ಸಂದೇಶ ಹೀಗಿದೆ. "ಕೇವಲ ಒಂದು ರೂಪಾಯಿ ಅಲ್ಲ, ನಿಮ್ಮ ಒಂದು ಮತ, ನೀವು ಒಂದು ದಿನ ನನಗೆ ಮತ ನೀಡಿ, ನಾನು ನಿಮಗೆ ಬಡತನದಿಂದ ಮುಕ್ತಿ ನೀಡುತ್ತೇನೆ." ಎಂದಿತ್ತು. ಚುನಾವಣಾ ಠೇವಣಿ ಶುಲ್ಕವನ್ನು ಪಾದಯಾತ್ರೆ ಮೂಲಕ ಕ್ಷೇತ್ರದಾದ್ಯಂತ ಸಂಚರಿಸಿ ಮತದಾರರಿಂದ ನಾಣ್ಯಗಳನ್ನು ಸಂಗ್ರಹಿಸಿದ್ದೇನೆ ಎಂದು ಸ್ವತಂತ್ರ ಅಭ್ಯರ್ಥಿ ಯಂಕಪ್ಪ ಹೇಳಿದ್ದಾರೆ.
ಕಲಬುರಗಿ ಜಿಲ್ಲೆಯ ಗುಲ್ಬರ್ಗ ವಿಶ್ವವಿದ್ಯಾನಿಲಯದಿಂದ ಕಲಾ ಪದವೀಧರರಾಗಿರುವ ಅವರು ಒಟ್ಟು 60,000 ರೂಪಾಯಿಯ ಆಸ್ತಿಯನ್ನು ಹೊಂದಿರುವುದಾಗಿ ಘೋಷಿಸಿದ್ದಾರೆ. ಅವರ ತಂದೆ ದೇವಿಂದ್ರಪ್ಪ ಅವರು ಒಂದು ಎಕರೆ 16 ಗುಂಟೆ (40 ಗುಂಟೆಗಳು ಒಂದು ಎಕರೆಗೆ ಸಮಾನ) ಜಮೀನು ಹೊಂದಿದ್ದಾರೆ.
ಸೋಮವಾರ ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಹನುಮಂತಪ್ಪ ಕಬ್ಬಾರ ಎನ್ನುವವರು ಚುನಾವಣೆಗೆ ನಾಮಪತ್ರ ಸಲ್ಲಿಸಿದರು. ಈ ವೇಳೆ ಠೇವಣಿ ಇಡಲು ಹನುಮಂತಪ್ಪ ಕಬ್ಬಾರ ತಾವು ಕೂಡಿಟ್ಟ ನಾಣ್ಯಗಳನ್ನು ತೆಗೆದುಕೊಂಡು ಬಂದಿದ್ದಾರೆ. ಸುಮಾರು 10 ಸಾವಿರ ರೂಪಾಯಿ ನಾಣ್ಯಗಳನ್ನು ಬುಟ್ಟಿಯಲ್ಲಿ ತುಂಬಿಕೊಂಡು ಬಂದು ಚುನಾವಣಾ ಅಧಿಕಾರಿಗಳಿಗೆ ನೀಡಿದ್ದರು.












Click it and Unblock the Notifications