Nrega: ನರೇಗಾ ಜಾಬ್ ಕಾರ್ಡ್ ಪಡೆಯಲು ಸೀರೆ ಉಟ್ಟ ಪುರುಷರು- ಭಾರೀ ಭ್ರಷ್ಟಾಚಾರದ ಆರೋಪ
ಯಾದಗಿರಿ ಏಪ್ರಿಲ್ 8: ಮಹಿಳೆಯರ ಹೆಸರಿನಲ್ಲಿ ನರೇಗಾ ಜಾಬ್ ಕಾರ್ಡ್ ಮಾಡಿಸಿ ಹಣ ದೋಚಿದ ಆರೋಪ ಯಾದಗಿರಿಯಲ್ಲಿ ಕೇಳಿ ಬಂದಿದೆ. ಯಾದಗಿರಿಯಲ್ಲಿ ವಂಚಕರು ಜಾಬ್ ಕಾರ್ಡ್ ಪಡೆದು ಕೂಲಿ ಹಣ ಎಗರಿಸಿದ್ದಾರೆ. ಇದರಿಂದ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ.
ಹೌದು ಯಾದಗಿರಿ ಜಿಲ್ಲೆಯ ಮಲ್ಹಾರ ಗ್ರಾಮದಲ್ಲಿ ಇಂತಹದೊಂದು ಗೋಲ್‌ಮಾಲ್ ನಡೆದಿದೆ. ಪಂಚಾಯಿತ್ ಇಲಾಖೆಯ ಬಿಎಫ್‌ಟಿ (BFT) ಅಧಿಕಾರಿ ವೀರೇಶ್ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ. ಇಲ್ಲಿನ ಪುರುಷರು ಹೆಂಗಸರ ಸೋಗಿನಲ್ಲಿ ಹಣ ಲೂಟಿ ಮಾಡಲು ಸೀರೆ ಉಟ್ಟುಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಅಧಿಕಾರಿಗಳಿಂದಲೇ ಖದೀಮರಿಗೆ ನೆರವು ಸಿಗುತ್ತಿರುವ ಆರೋಪ ಕೇಳಿ ಬಂದಿದೆ.

ನರೇಗಾ ಗ್ರಾಮದ ಭಾಗದ ಜನರು ಗೂಳೆ ಹೋಗದಂತೆ ಕೂಲಿ ಕೆಲಸ ನೀಡಿ ಹಣ ನೀಡುವ ಸದುದ್ದೇಶದಿಂದ ಸರ್ಕಾರ ಮಾಡಿದ ಯೋಜನೆಯಾಗಿದೆ. ಆದರೆ ಅಧಿಕಾರಿಗಳು, ಜನಪ್ರತಿನಿಧಿಗಳು ಸರ್ಕಾರದ ಕಣ್ಣಿಗೆ ಮಣ್ಣೆರೆಚುವಂತಹ ಕೆಲಸ ಮಾಡಿದ್ದಾರೆ. ಪುರುಷರಿಗೆ ಸೀರೆ ಉಡಿಸಿ ಪೋಟೋ ತೆಗೆಸಿ ನರೇಗಾ ಜಾಬ್ ಕಾರ್ಡ್ (NMMS) ಪಡೆಯಲಾಗಿದೆ. ಫೋಟೋದಿಂದ ಸ್ಥಳೀಯ ಕೆಲ ಪುರುಷರು ನರೇಗಾ ಜಾಬ್ ಕಾರ್ಡ್ ಪಡೆದು ಹಣ ಲಪಟಾಯಿಸಿದ್ದಾರೆ.
ಈ ಫೋಟೋದಲ್ಲಿ ಸೀರೆ ಹಾಕಿಕೊಂಡು ನಿಂತಿರುವವರು ಪುರುಷರೇ. ಸೀರೆ ಹಾಕಿಕೊಂಡು ಹೋಗಿ ಪುರುಷರ ಜೊತೆಗೆ ನಿಂತು ಫೋಟೋ ತೆಗೆಸಿಕೊಂಡು ಅದರಿಂದ ನರೇಗಾ ಜಾಬ್ ಕಾರ್ಡ್ ಪಡೆದು ಅದರಿಂದ ಬರುವ ಹಣವನ್ನು ಮೋಸದಿಂದ ತೆಗೆದುಕೊಂಡಿದ್ದಾರೆ.
ಕೆಲವು ಭ್ರಷ್ಟ ಅಧಿಕಾರಿಗಳು ಕೂಡ ಇದರಲ್ಲಿ ಶಾಮೀಲಾಗಿದ್ದಾರೆಂದು ತಿಳಿದು ಬಂದಿದೆ. ಕಳೆದ ಕೆಲ ತಿಂಗಳಿನಿಂದ ಈ ಲೂಟಿ ಮಾಡುವ ಕೆಲಸವನ್ನು ವಂಚಕರು ಮಾಡುತ್ತಿದ್ದಾರೆ.
ಪ್ರತಿಯೊಂದು ಹಳ್ಳಿಯಲ್ಲಿ ಜನ ಬೇರೆ ಊರುಗಳಿಗೆ ಗೂಳೆ ಹೋಗಬಾರದು ಎನ್ನುವ ಕಾರಣಕ್ಕೆ ನರೇಗಾ ಯೋಜನೆಯಲ್ಲಿ ಮಹಿಳೆಯರಿಗೆ ಕೂಲಿ ಕೆಲಸವನ್ನು ಕೊಡಲಾಗುತ್ತದೆ. ಆದರೆ ಸ್ಥಳೀಯ ಪುರುಷರು ನೇರವಾಗಿ ಹಣವನ್ನು ಲಪಟಾಯಿಸುವ ಉದ್ದೇಶದಿಂದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ನರೇಗಾ ಯೋಜನೆಯ ಸುಪ್ರವೈಸರ್ ಸೇರಿಕೊಂಡು ಹಣ ಲಪಟಾಯಿಸಲು ಈ ರೀತಿ ಪ್ಲ್ಯಾನ್ ಮಾಡಿದ್ದಾರೆ.
ಮಹಿಳೆಯರ ಹೆಸರಿನಲ್ಲಿ ಜಾಬ್ ಕಾರ್ಡ್ ಸೃಷ್ಟಿ ಮಾಡಿ ಮಹಿಳೆಯರ ರೀತಿ ಸೀರೆ ತೊಟ್ಟು ಕೆಲಸ ಮಾಡುವ ರೀತಿ ಫೋಟೋಗಳನ್ನು ಸೃಷ್ಟಿ ಮಾಡಿದ್ದಾರೆ. ಅಂದರೆ ಪುರುಷರೇ ಮಹಿಳೆಯರಂತೆ ಸೀರೆ ತೊಟ್ಟು ಪೋಟೋಗಳನ್ನು ತೆಗೆಸಿಕೊಂಡಿದ್ದಾರೆ. ಇವರು ಪೂಜಾರಿ ಎಂಬಾತನ ಹೊಲದ ಬಳಿಯ ನಾಲೆ ಕಾಮಗಾರಿ ಮಾಡುವಂತೆ ಫೋಟೋ ಫೋಸ್ ಕೊಟ್ಟಿದ್ದಾರೆ.
ನರೇಗಾ ಜಾಬ್ ಕಾರ್ಡ್ ಪಡೆಯಲು ಆನ್‌ಲೈನ್‌ನಲ್ಲಿ ಫೋಟೋ ಅಪ್ಲೋಡ್ ಮಾಡಬೇಕು. ಈ ಫೋಟೋ ಅಪ್ಲೋಡ್ ಮಾಡಿದರೆ ಮಾತ್ರ ಅವರ ಖಾತೆಗೆ ಹಣ ಜಮಾ ಆಗುತ್ತದೆ. ಕಾರ್ಮಿಕರ ಕೆಲಸದ ಹಾಜರಾತಿನಂತೆ ಫೋಟೋ ಅಪ್ಲೋಡ್ ಮಾಡಬೇಕು. ಬಡವರಿಗೆ ಕಾರ್ಮಿಕರಿಗೆ ಕೂಲಿ ಕೊಡುವ ಉದ್ದೇಶದಿಂದ ಸರ್ಕಾರ ನರೇಗಾ ಎನ್ನುವ ಯೋಜನೆಯನ್ನು ಜಾರಿಗೆ ತಂದಿದೆ.
ಆದರೆ ಈ ಯೋಜನೆ ಸಂಪೂರ್ಣವಾಗಿ ಯಾದಗಿರಿ ಜಿಲ್ಲೆಯಲ್ಲಿ ವಿಫಲ ಆಗುತ್ತಿದೆ. ಇದರಲ್ಲಿ ಜನಪ್ರತಿನಿಧಿಗಳು, ಸ್ಥಳೀಯ ಅಧಿಕಾರಿಗಳು, ಸ್ಥಳೀಯ ಶಾಸಕರು ಶಾಮೀಲಾಗಿ ಹಣ ದೋಚುವ ಕೆಲಸ ಮಾಡಿದ್ದಾರೆ. ಈ ಪ್ರಕರಣ ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ಬಂದ ನಂತರ ಬೆಳಕಿಗೆ ಬಂದಿದೆ. ತಪ್ಪು ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.












Click it and Unblock the Notifications