ಕೊವಿಡ್ 19: 'ಡೆಕ್ಸಾಮೆಥಸಾನ್' ಫಲಿತಾಂಶ ಸ್ವಾಗತಿಸಿದ ವಿಶ್ವ ಆರೋಗ್ಯ ಸಂಸ್ಥೆ
ವಾಷಿಂಗ್ಟನ್, ಜೂನ್ 17: ಕೊವಿಡ್ 19 ರೋಗಿಗಳಿಗೆ ನೀಡಲಾಗಿದ್ದ 'ಡೆಕ್ಸಾಮೆಥಸಾನ್' ಔಷಧ ಪ್ರಯೋಗದ ಮೊದಲ ಫಲಿತಾಂಶವನ್ನು ವಿಶ್ವ ಆರೋಗ್ಯ ಸಂಸ್ಥೆ ಸ್ವಾಗತಿಸಿದೆ.
ಕೊವಿಡ್ 19 ರೋಗದಿಂದ ತೀವ್ರವಾಗಿ ಅನಾರೋಗ್ಯಕ್ಕೆ ತುತ್ತಾಗಿರುವವರ ಮೇಲೆ ಪ್ರಯೋಗ ಮಾಡಲಾಯಿತು ಉತ್ತಮ ಫಲಿತಾಂಶ ಬಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
2019ರ ಆಗಸ್ಟ್‌ನಲ್ಲೇ ಕೊರೊನಾ ಸೋಂಕು: ಹಾಸ್ಯಾಸ್ಪದ ಎಂದ ಚೀನಾ
ಇದರಿಂದ ವೆಂಟಿಲೇಟರ್‌ನಲ್ಲಿರುವ ರೋಗಿಗಳ ಮರಣ ಪ್ರಮಾಣ ಮೂರನೇ ಒಂದು ಭಾಗದಷ್ಟು ಕಡಿಮೆಯಾಗಿದೆ.ಇದನ್ನು ತೀವ್ರ ನಿಗಾಘಟಕದಲ್ಲಿ ಕೃತಕ ಉಸಿರಾಟ ವ್ಯವಸ್ಥೆಯಲ್ಲಿ ಇರಿಸಿದವರ ಮೇಲೆ ಮಾತ್ರ ಪ್ರಯೋಗ ಮಾಡಲಾಗಿದೆ. ಇದರಿಂದ ರೋಗಿಗಳಿಗೆ ಪ್ರಯೋಜನವಾಗಿದೆ.

ಮರಣ ಪ್ರಮಾಣ ಕಡಿಮೆ
ಡೆಕ್ಸಾಮೆಥಸಾನ್ ಬಳಕೆಯಿಂದ ವೆಂಟಿಲೇಟರ್‌ನಲ್ಲಿರುವ ಕೊರೊನಾ ಸೋಂಕಿತರ ಮರಣ ಪ್ರಮಾಣ ಕಡಿಮೆಯಾಗಿದೆ. ಇದು ಉತ್ತಮ ಬೆಳವಣಿಗೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ನಿರ್ದೇಶಕ ಡಾ. ಟೆಡ್ರೋಸ್ ಆಂಡೊನೊಮ್ ತಿಳಿಸಿದ್ದಾರೆ. ಹಾಗೆಯೇ ಯುಕೆ ಹಾಗೂ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಡೆಕ್ಸಾಮೆಥಸಾನ್ ಎಂದರೆ ಏನು?
ಡೆಕ್ಸಾಮೆಥಸಾನ್ ಹೊಸ ಔಷಧವೇನೂ ಅಲ್ಲ 1960ರಿಂದಲೂ ಇದರ ಬಳಕೆ ಇದೆ, ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆಗಳಲ್ಲಿ ರೋಗಿಗಳಿಗೆ ಉಂಟಾಗುವ ಉರಿಯೂತವನ್ನು ಕಡಿಮೆ ಮಾಡಲು ಈ ಔಷಧವನ್ನು ಬಳಕೆ ಮಾಡುತ್ತಿದ್ದರು.

ಡೆಕ್ಸಾಮೆಥಸಾನ್ ಬಳಕೆ ಯಾವಾಗ ಮಾಡಬೇಕು?
ಡೆಕ್ಸಾಮೆಥಸಾನ್ ಪ್ರಯೋಗದ ಕುರಿತು ಸಂಶೋಧಕರು ಆರಂಭಿಕ ಅಭಿಪ್ರಾಯವನ್ನು ತಿಳಿಸಿದ್ದಾರೆ.ಮುಂಬರುವ ದಿನಗಳಲ್ಲಿ ದತ್ತಾಂಶವನ್ನು ವಿಶ್ಲೇಷಣೆ ಮಾಡಬೇಕಿದೆ. ಕೊವಿಡ್ 19 ರೋಗಿಗಳಿಗೆ ಈ ಔಷಧವನ್ನು ಯಾವಾಗ, ಎಂತಹ ಸಂದರ್ಭದಲ್ಲಿ ನೀಡಬೇಕು ಎಂಬುದರ ಕುರಿತು ಸಂಶೋಧನೆ ನಡೆಯುತ್ತಿದೆ.

ಸ್ಟೀರಾಯ್ಡ್‌ಗಳ ಬಳಕೆ ಕುರಿತು ಸಂಶೋಧನೆ
ಕೊರೊನಾ ವೈರಸ್ ವಿರುದ್ಧ ಹೋರಾಡುವ ಔಷಧ ಸಂಶೋಧನೆಗೆ ವೇಗ ನೀಡಲು ಫೆಬ್ರವರಿಯಲ್ಲಿ ಜಿನೇವಾದಲ್ಲಿ ನಡೆದ ವಿಶ್ವ ಆರೋಗ್ಯ ಸಂಸ್ಥೆ ರಿಸರ್ಚ್ ಆಂಡ್ ಡೆವಲಾಪ್‌ಮೆಂಟ್ ಸಭೆಯಲ್ಲಿ ಸ್ಟೀರಾಯ್ಡ್‌ಗಳ ಬಳಕೆಯ ಕುರಿತು ಹೆಚ್ಚಿನ ಸಂಶೋಧನೆಗಳಿಗೆ ಆದ್ಯತೆ ನೀಡಲಾಗಿದೆ. ಕೊವಿಡ್ ರೋಗವನ್ನು ನಿಭಾಯಿಸುವ ಜೀವ ಉಳಿಸುವ ಚಿಕಿತ್ಸಕ ಮತ್ತು ಲಸಿಕೆಗಳನ್ನು ಅಭಿವೃದ್ಧಿಪಡಿಸಲು ವಿಶ್ವ ಆರೋಗ್ಯ ಸಂಸ್ಥೆ ಜೊತೆಗೆ ಎಲ್ಲರು ಒಟ್ಟಾಗಿ ಸೇರಿ ಕೆಲಸ ಮಾಡಬೇಕು ಎಂದು ಮನವಿ ಮಾಡಲಾಗಿತ್ತು.