ಫ್ರಿಜ್‌ನಲ್ಲಿ 1 ರೂಪಾಯಿ ನಾಣ್ಯ ಇಟ್ಟರೆ ಏನಾಗುತ್ತದೆ ಗೊತ್ತಾ? ಈ ವೈರಲ್ ಟ್ರಿಕ್ ಹಿಂದಿದೆ ಅಚ್ಚರಿ ಕಾರಣ
ಬೇಸಿಗೆ, ಚಳಿ, ಮಳೆ ಯಾವ ಕಾಲವೇ ಆಗಿರಲಿ ಫ್ರಿಜ್‌ನ ಅವಶ್ಯಕತೆ ಇದ್ದೇ ಇರುತ್ತದೆ. ಆಹಾರ ಪದಾರ್ಥಗಳನ್ನು ಸಂಗ್ರಹಿಸಲು, ನೀರು, ಜ್ಯೂಸ್ ಅನ್ನು ತಂಪಾಗಿರಿಸಲು, ಹಣ್ಳು ಮತ್ತು ತರಕಾರಿಗಳನ್ನು ತಾಜಾವಾಗಿಡಲು ಇದು ಸಹಾಯ ಮಾಡುತ್ತದೆ. ರೆಫ್ರಿಜರೇಟರ್‌ನಲ್ಲಿ ನಾವು ಬಹಳ ಕಾಲದವರೆಗೆ ಆಹಾರ ಪದಾರ್ಥಗಳನ್ನು ಶೇಖರಿಸಿ ಇಡುತ್ತೇವೆ. ಫ್ರಿಜ್‌ನಲ್ಲಿದೆ ಹಾಗಾಗಿ ಇದು ತಿನ್ನಲು ಯೋಗ್ಯ ಎನ್ನುವ ನಂಬಿಕೆ ನಮ್ಮದು. ಆದರೆ ಫ್ರಿಜ್‌ನಲ್ಲಿ ಇಟ್ಟಿರುವ ಆಹಾರ ಪದಾರ್ಥಗಳನ್ನು ಯಾವುದೇ ಭಯ ಇಲ್ಲದೆ ತಿನ್ನಬಹುದೇ? ಅದು ನಿಜಕ್ಕೂ ತಿನ್ನಲು ಯೋಗ್ಯವಾಗಿರುವುದೇ? ಇದನ್ನು ಕಂಡು ಹಿಡಿಯುವ ಟ್ರಿಕ್ ವೊಂದಿದೆ. ಹೌದು, ರೆಫ್ರಿಜರೇಟರ್ ಬಳಸುವಾಗ ಕೆಲವು ಟ್ರಿಕ್ಸ್ ಗಳನ್ನು ತಿಳಿದುಕೊಂಡಿದ್ದರೆ ಒಳ್ಳೆಯದು.
ನಮ್ಮ ನಿತ್ಯ ಬದುಕಿಗೆ ಸಂಬಂಧಪಟ್ಟಿರುವಂಥಹ ಅನೇಕ ತಂತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುತ್ತದೆ. ಇವುಗಳಲ್ಲಿ ಕೆಲವು ಕೇಳಲು ವಿಚಿತ್ರವೆನಿಸಬಹುದು. ಆದರೆ, ಕೆಲವೊಮ್ಮೆ ಆ ಹ್ಯಾಕ್‌ಗಳು ಬಹಳ ಪ್ರಯೋಜನಕಾರಿಯಾಗಿರುತ್ತದೆ. ಇಂಥಹ ಹ್ಯಾಕ್‌ಗಳಲ್ಲಿ ಒಂದು ಫ್ರಿಜ್‌ನಲ್ಲಿ ಇಡುವ ಒಂದು ರೂಪಾಯಿ ನಾಣ್ಯ.

ಒಂದು ರೂಪಾಯಿ ನಾಣ್ಯವನ್ನು ಫ್ರೀಜರ್‌ನಲ್ಲಿ ಇಡುವುದರಿಂದ ಉತ್ತಮ ಪ್ರಯೋಜನಗಳಿವೆ. ಆ ಪ್ರಯೋಜನ ನಿಖರವಾಗಿರುತ್ತದೆ ಎಂದು ತಿಳಿದುಕೊಳ್ಳುವುದು ಹೇಗೆ ಎಂದು ನೋಡುವುದಾದರೆ..
ವಿದ್ಯುತ್ ಕಡಿತಗೊಂಡರೆ ಆಫ್ ಆಗುವುದು ಫ್ರಿಜ್:
ಅನೇಕ ಪ್ರದೇಶಗಳಲ್ಲಿ, ಬೇಸಿಗೆ ಮತ್ತು ಮಳೆಗಾಲದ ದಿನಗಳಲ್ಲಿ ಹಲವಾರು ಬಾರಿ ವಿದ್ಯುತ್ ಕಡಿತಗೊಳ್ಳುತ್ತದೆ. ಆ ಸಮಯದಲ್ಲಿ, ಮನೆಯಲ್ಲಿರುವ ರೆಫ್ರಿಜರೇಟರ್ ಆಫ್ ಆಗುತ್ತದೆ. ಮನೆಯಲ್ಲಿ ಇನ್ವರ್ಟರ್ ಇದ್ದರೂ ಕರೆಂಟ್ ಇಲ್ಲದೆ ಹೋದಾಗ ರೆಫ್ರಿಜರೇಟರ್ ಕಾರ್ಯ ನಿರ್ವಹಿಸುವುದಿಲ್ಲ. ಹೀಗಿರುವಾಗ ನಾವು ಮನೆಯಿಂದ ಹೊರಗೆ ಹೋದರೆ, ಎಷ್ಟು ಬಾರಿ ವಿದ್ಯುತ್ ಕಡಿತಗೊಂಡಿದೆ ಎನ್ನುವ ಅರಿವು ನಮಗಿರುವುದಿಲ್ಲ. ಆ ಸಮಯದಲ್ಲಿ, ಆಹಾರವು ಕೆಟ್ಟುಹೋಗಿದೆಯೇ ಅಥವಾ ಇಲ್ಲವೇ ಎಂದು ತಿಳಿಯುವುದು ಕಷ್ಟ. ಇದನ್ನು ತಿಳಿಯಲು, ಒಂದು ರೂಪಾಯಿ ನಾಣ್ಯದ ತಂತ್ರವು ತುಂಬಾ ಉಪಯುಕ್ತವಾಗಿದೆ.
ಒಂದು ಲೋಟ ನೀರಿನ ಮೇಲೆ ನಾಣ್ಯ:
ಮೊದಲು ಒಂದು ಲೋಟಕ್ಕೆ ನೀರು ತುಂಬಿಸಿ. ಈ ಲೋಟವನ್ನು ಫ್ರೀಜರ್‌ನಲ್ಲಿ ಇರಿಸಿ. ಅದನ್ನು ಸಂಪೂರ್ಣವಾಗಿ ಫ್ರೀಜ್ ಆಗಲು ಬಿಡಿ. ನಂತರ, ಒಂದು ರೂಪಾಯಿ ನಾಣ್ಯವನ್ನು ಲೋಟದ ಐಸ್ ಮೇಲೆ, ಅಂದರೆ ನೀರಿನ ಲೋಟದ ಮೇಲೆ ಇರಿಸಿ. ನೀವು ಇಡೀ ದಿನ ಹೊರಗೆ ಹೋಗುತ್ತಿದ್ದರೆ ಅಥವಾ ಒಂದು ಅಥವಾ ಎರಡು ದಿನ ಹೊರಗೆ ಹೋಗುತ್ತಿದ್ದರೆ ಈ ಟ್ರಿಕ್ ತುಂಬಾ ಸಹಕಾರಿಯಾಗುತ್ತದೆ.
ನಾಣ್ಯ ನೀಡುವುದು ಒಂದು ಅಂದಾಜು:
ನೀವು ಗಾಜಿನ ಮೇಲೆ ಇಟ್ಟ ಒಂದು ರೂಪಾಯಿ ನಾಣ್ಯ ಸ್ವಲ್ಪ ಮುಳುಗಿದ್ದರೆ ಮಂಜುಗಡ್ಡೆ ಕರಗಿದೆ ಎಂದರ್ಥ. ನಾಣ್ಯ ಎಷ್ಟು ಕೆಳಗೆ ಇದೆ ಎಂಬುದರ ಮೂಲಕ, ಕರೆಂಟ್ ಎಷ್ಟು ಹೊತ್ತು ಇರಲಿಲ್ಲ ಎನ್ನುವುದನ್ನು ಊಹಿಸಿಕೊಳ್ಳಬಹುದು. ಇದರರ್ಥ ಫ್ರಿಡ್ಜ್ ಎಷ್ಟು ಹೊತ್ತು ಆಫ್ ಆಗಿತ್ತು ಮತ್ತು ಫ್ರಿಡ್ಜ್‌ನಲ್ಲಿರುವ ಆಹಾರದ ಮೇಲೆ ಇದು ಯಾವ ಪರಿಣಾಮ ಬೀರಿರಬಹುದು ಎಂಬುದನ್ನು ಅಂದಾಜು ಮಾಡಬಹುದು.
ಕೆಟ್ಟ ಆಹಾರ ಅಪಾಯಕಾರಿಯಾಗಬಹುದು:
ಮೇಲೆ ತಿಳಿಸಲಾದ ರೂಪಾಯಿ ನಾಣ್ಯದ ಸಲಹೆಯ ಮೂಲಕ ನಿಮಗೆ ಆಹಾರ ತಿನ್ನಲು ಯೋಗ್ಯವಾಗಿದೆಯೇ ಅಥವಾ ಕೆಟ್ಟು ಹೋಗಿದೆಯೇ ಎನ್ನುವುದನ್ನು ಸ್ಪಷ್ಟವಾಗಿ ಹೇಳಬಹುದು. ಹೊಟ್ಟೆಯ ಸೋಂಕು ಮುಖ್ಯವಾಗಿ ಕಲುಷಿತ ಆಹಾರ ಅಥವಾ ನೀರಿನಿಂದ ಉಂಟಾಗುವ ಸಾಮಾನ್ಯ ಸಮಸ್ಯೆಯಾಗಿದೆ. ಹೊಟ್ಟೆಯ ಸೋಂಕಿನಲ್ಲಿ ಬ್ಯಾಕ್ಟೀರಿಯಾ, ವೈರಸ್‌ಗಳಿಂದ ಕರುಳುಗಳು ಉಬ್ಬಿಕೊಳ್ಳುತ್ತವೆ. ಇದು ನಿಮ್ಮ ಆರೋಗ್ಯಕ್ಕೆ ತುಂಬಾ ಅಪಾಯಕಾರಿ. ಆದ್ದರಿಂದ, ಸರಿಯಾದ ಕಾಳಜಿಯೊಂದಿಗೆ ಆಹಾರವನ್ನು ಸೇವಿಸುವುದು ಪ್ರಯೋಜನಕಾರಿ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications