ಭಾಗ್ಯಲಕ್ಷ್ಮೀ ಸೀರಿಯಲ್ ಮುಕ್ತಾಯ: ಸೆಟ್‌ನಲ್ಲಿ ಬಿಕ್ಕಿಬಿಕ್ಕಿ ಅತ್ತ ಸುಷ್ಮಾ, ಕೊನೇ ದಿನ ತಾಂಡವ್ ಎಲ್ಲಿ ಹೋದ್ರು? ಎಂದ ವೀಕ್ಷಕರು
ಕನ್ನಡ ಕಿರುತೆರೆಯ ಇತಿಹಾಸದಲ್ಲಿ ಸುದೀರ್ಘ ಕಾಲ ಕನ್ನಡಿಗರ ಮನೆಮನ ಬೆಳಗಿದ್ದ ಪ್ರೀತಿಯ ಕುಟುಂಬವೊಂದು ಈಗ ವೀಕ್ಷಕರಿಗೆ ವಿದಾಯ ಹೇಳಿದೆ. ಕಳೆದ ಮೂರೂವರೆ ವರ್ಷಗಳಿಂದ ಪ್ರೇಕ್ಷಕರನ್ನು ಅಳಿಸಿ, ನಗಿಸಿ, ಕೌಟುಂಬಿಕ ಮೌಲ್ಯಗಳನ್ನು ಸಾರಿದ್ದ ಜನಪ್ರಿಯ ಮೆಗಾ ಸೀರಿಯಲ್ 'ಭಾಗ್ಯಲಕ್ಷ್ಮೀ' ಕೊನೆಗೂ ಮುಕ್ತಾಯದ ಹಂತ ತಲುಪಿದೆ. ಶೂಟಿಂಗ್‌ನ ಕೊನೆಯ ದಿನ ಇಡೀ ಚಿತ್ರತಂಡ ಒಂದೆಡೆ ಸೇರಿ ಹಂಚಿಕೊಂಡಿರುವ ಕ್ಷಣಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಕಲಾವಿದರು ಸೆಟ್‌ನಲ್ಲಿ ಕಣ್ಣೀರಿಟ್ಟಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯ ಹೆಮ್ಮೆಯ ಪ್ರಸ್ತುತಿ, ಟಿಆರ್‌ಪಿ ರೇಟಿಂಗ್‌ನಲ್ಲಿ ಸದಾ ಮುಂಚೂಣಿಯಲ್ಲಿದ್ದ 'ಭಾಗ್ಯಲಕ್ಷ್ಮೀ' ಧಾರಾವಾಹಿ ಬರೋಬ್ಬರಿ 1159 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿ, ಕೊನೆಗೂ ಹ್ಯಾಪಿ ಎಂಡಿಂಗ್ ಕಂಡಿದೆ. ಇಡೀ ಕುಟುಂಬವನ್ನು ಒಂದು ಮಾಡುವ ಮೂಲಕ ಕಥೆಗೆ ಸುಖಾಂತ್ಯ ಹಾಡಲಾಗಿದ್ದರೂ, ಮೂರೂವರೆ ವರ್ಷಗಳ ಕಾಲ ಜೊತೆಯಾಗಿ ಬಾಳಿ ಬದುಕಿದ್ದ ಇಡೀ ತಂಡಕ್ಕೆ ಮಾತ್ರ ಈ ವಿದಾಯ ಅಷ್ಟು ಸುಲಭವಾಗಿರಲಿಲ್ಲ. ಕೊನೆಯ ದಿನದ ಚಿತ್ರೀಕರಣದ ವೇಳೆ ಇಡೀ ಸೆಟ್ ಕಣ್ಣೀರಿನಲ್ಲಿ ಮುಳುಗಿತ್ತು.

ಕಣ್ಣೀರಿಟ್ಟ ಭಾಗ್ಯ
ಧಾರಾವಾಹಿಯಲ್ಲಿ ಮುಖ್ಯ ಭೂಮಿಕೆಯಾದ 'ಭಾಗ್ಯ' ಪಾತ್ರದ ಮೂಲಕ ಇಡೀ ಕರ್ನಾಟಕದ ಮಹಿಳೆಯರ ಮನಗೆದ್ದಿದ್ದ ನಟಿ ಸುಷ್ಮಾ ಕೆ.ರಾವ್ ಕೊನೆಯ ದಿನದ ಶೂಟಿಂಗ್ ಮುಗಿಯುತ್ತಿದ್ದಂತೆ ಭಾವುಕರಾಗಿದ್ದಾರೆ. "ಇಷ್ಟು ದಿನಗಳ ಕಾಲ ನಮ್ಮನ್ನು ಕುಟುಂಬದಂತೆ ಮುನ್ನಡೆಸಿದ ಎಲ್ಲರನ್ನೂ ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ" ಎಂದು ಭಾವುಕರಾಗಿದ್ದಾರೆ. ಇವರ ಜೊತೆಗೆ ಹಿರಿಯ ನಟಿ ಪದ್ಮಜಾ ರಾವ್ ಹಾಗೂ ಸೀರಿಯಲ್‌ನ ನಿರ್ದೇಶಕರು ಕೂಡ ಕಣ್ಣೀರು ತಡೆಯಲಾಗದೆ ಭಾವುಕರಾದ ದೃಶ್ಯಗಳು ಕಲಾವಿದರು ಹಂಚಿಕೊಂಡಿರುವ ಫೋಟೋ ಹಾಗೂ ವಿಡಿಯೋಗಳಲ್ಲಿ ಕಾಣಿಸಿವೆ.
ಇಡೀ ವಿಡಿಯೋದಲ್ಲಿ 'ತಾಂಡವ್' ನಾಪತ್ತೆ: ಫ್ಯಾನ್ಸ್ ಪ್ರಶ್ನೆ
ಆದರೆ, ಈ ಇಡೀ ಭಾವುಕ ವಿದಾಯದ ವಿಡಿಯೋ ಹಾಗೂ ಫೋಟೋಗಳಲ್ಲಿ ಧಾರಾವಾಹಿಯ ಪ್ರಮುಖ ನೆಗೆಟಿವ್ ಪಾತ್ರಧಾರಿಯಾಗಿದ್ದ 'ತಾಂಡವ್' (ಸುದರ್ಶನ್ ರಂಗಪ್ರಸಾದ್) ಎಲ್ಲಿಯೂ ಕಾಣಿಸಿಕೊಂಡಿಲ್ಲ. ಇದು ಸದ್ಯ ವೀಕ್ಷಕರಲ್ಲಿ ಭಾರಿ ಕುತೂಹಲ ಹಾಗೂ ಆತಂಕ ಮೂಡಿಸಿದೆ.

ಸೀರಿಯಲ್‌ನ ಇಡೀ ಕಥೆ ನಿಂತಿರುವುದೇ ಭಾಗ್ಯ ಮತ್ತು ತಾಂಡವ್ ಜೋಡಿಯ ಸುತ್ತ. ಹಾಗಿರುವಾಗ ಇಡೀ ಟೀಮ್ ಕಣ್ಣೀರು ಹಾಕುತ್ತಾ ಕೇಕ್ ಕತ್ತರಿಸಿ ವಿದಾಯ ಹೇಳುವಾಗ ತಾಂಡವ್ ಎಲ್ಲಿ ಹೋದ್ರು? ಎಂಬ ಪ್ರಶ್ನೆ ಎದ್ದಿದೆ. ಇದೇ ಕಾರಣಕ್ಕೆ ಕಲಾವಿದರ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳಿಗೆ "ಎಲ್ಲರೂ ಇದ್ದಾರೆ, ಆದ್ರೆ ನಮ್ಮ ತಾಂಡವ್ ಎಲ್ಲಿ?", "ಕೊನೆ ದಿನ ತಾಂಡವ್ ಯಾಕೆ ಬಂದಿಲ್ಲ?" ಎಂದು ಸಾಲು ಸಾಲಾಗಿ ಕಮೆಂಟ್ ಮಾಡಿ ಪ್ರಶ್ನಿಸುತ್ತಿದ್ದಾರೆ. ಶತ್ರುಗಳನ್ನೆಲ್ಲಾ ಮಿತ್ರರನ್ನಾಗಿಸಿ, ಮುರಿದು ಬಿದ್ದಿದ್ದ ಸಂಸಾರವನ್ನು ಮತ್ತೆ ಒಂದು ಮಾಡಿ ಒಟ್ಟಾರೆಯಾಗಿ 'ಭಾಗ್ಯಲಕ್ಷ್ಮೀ' ಧಾರಾವಾಹಿ ಪ್ರೇಕ್ಷಕರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದು ಬೀಳ್ಕೊಟ್ಟಿದೆ.













Click it and Unblock the Notifications