ಹೆಂಡತಿಯಲ್ಲಿ ಈ ಗುಣವಿದ್ದರೆ ಗಂಡಂದಿರಿಗೆ ಇಷ್ಟವಂತೆ: ಮಹಿಳೆಯರು ತಿಳಿದುಕೊಳ್ಳಬೇಕಾದ ಸಂಗತಿ
ಮದುವೆ ಎಂದರೆ ಕೇವಲ ಇಬ್ಬರು ವ್ಯಕ್ತಿಗಳ ಮಿಲನ ಅಲ್ಲ. ವಿಭಿನ್ನ ಆಲೋಚನೆ, ಅಭ್ಯಾಸ ಮತ್ತು ಭಾವನೆಗಳು ಒಂದಾಗುವ ಸುಂದರ ಪಯಣ. ಮದುವೆಯಾಗಿದ್ದಾರೆ ಎಂದ ಮಾತ್ರಕ್ಕೆ ಎಲ್ಲರೂ ಒಳ್ಳೆಯ ಹೆಂಡತಿ ಅಥವಾ ಒಳ್ಳೆಯ ಗಂಡನಾಗಲು ಸಾಧ್ಯವಿಲ್ಲ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ, ಅವರು ಪರಸ್ಪರರನ್ನು ಅರ್ಥಮಾಡಿಕೊಂಡಾಗ, ಅಗತ್ಯವಿರುವಲ್ಲಿ ಬದಲಾವಣೆಗಳನ್ನು ಮಾಡಿಕೊಂಡಾಗ ಮತ್ತು ಹೊಂದಿಕೊಂಡು ಮುಂದುವರಿಯುವಾಗ ಮಾತ್ರ ಉತ್ತಮ ಜೀವನ ಸಂಗಾತಿಗಳಾಗಬಹುದು. ಹೀಗಾಗಬೇಕಾದರೆ ವೈವಾಹಿಕ ಬದುಕಿನಲ್ಲಿ ಪ್ರೀತಿ, ತಾಳ್ಮೆ, ತಿಳುವಳಿಕೆ ಮತ್ತು ಪರಸ್ಪರ ಗೌರವ ಮುಖ್ಯವಾಗಿರುತ್ತದೆ.
ಇಲ್ಲಿ ತಮ್ಮ ಸಂಗಾತಿಯ ಬಗ್ಗೆ ಪ್ರತಿಯೊಬ್ಬ ಪತಿಗೂ ಕೆಲವು ನಿರೀಕ್ಷೆಗಳಿರುತ್ತವೆ. ಆ ನಿರೀಕ್ಷೆಗಳು ಪ್ರಣಯ ಸಂದರ್ಭಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ತನ್ನ ಪತ್ನಿ ಹೇಗಿದ್ದರೆ ನಮ್ಮಿಬ್ಬರ ಬದುಕು ಬಂಗಾರವಾಗಬಹುದು ಎನ್ನುವ ಲೆಕ್ಕಾಚಾರ ಆತನ ಮನದಲ್ಲಿಯೂ ಇರುತ್ತದೆ. ಅದು ಎಲ್ಲಾ ವಿಚಾರಗಳಲ್ಲಿಯೂ ಆಗಿರುತ್ತದೆ. ಮಾತು, ನಡೆ, ನುಡಿ, ವರ್ತನೆ ಹೀಗೆ ಅನೇಕ ವಿಚಾರಗಳಲ್ಲಿ ಹೆಂಡತಿ ಹೀಗಿದ್ದರೆ ಚಂದ ಎನ್ನುವ ಬಯಕೆ ಪತಿಯಲ್ಲಿರುತ್ತದೆ.

ಮಾತಿನಿಂದ ನೋಯಿಸಬಾರದು:
ಮನಶ್ಶಾಸ್ತ್ರಜ್ಞರ ಪ್ರಕಾರ, ನಾವು ನಮ್ಮ ಸ್ನೇಹಿತರು ಅಥವಾ ಸಂಬಂಧಿಕರೊಂದಿಗೆ ಮಾತನಾಡುವಾಗ ಅವರ ಮನಸ್ಸಿಗೆ ನೋವಾಗದಂತೆ ಅತಿಯಾದ ಕಾಳಜಿ ವಹಿಸುತ್ತೇವೆ. ಅಂದರೆ ಅಳೆದು ತೂಗಿ ಪದಗಳನ್ನು ಬಳಸುತ್ತೇವೆ. ಯಾಕೆಂದರೆ ಎದುರಿನವರಿಗೆ ನೋವಾದರೆ ಸಂಬಂಧ ಮುರಿಯಬಹುದು ಎನ್ನುವ ಭಯ ಇರುತ್ತದೆ. ಹಾಗೆಯೇ ಗಂಡ ಮತ್ತು ಹೆಂಡತಿ ಕೂಡಾ ಪರಸ್ಪರರನ್ನು ನೋಯಿಸದಂತೆ ನೋಡಿಕೊಳ್ಳಬೇಕು. ಸಂಗಾತಿಗೆ ಇಷ್ಟವಾಗದ ಯಾವುದೇ ಮಾತುಗಳು, ಅಭ್ಯಾಸಗಳು ಅಥವಾ ನಡವಳಿಕೆಗಳು ಇದ್ದರೆ, ಅವುಗಳನ್ನು ಗುರುತಿಸಿ ಬದಲಾಯಿಸಲು ಪ್ರಯತ್ನಿಸಬೇಕು. ಸಣ್ಣ ವಿಷಯಗಳಲ್ಲಿ ರಾಜಿ ಮಾಡಿಕೊಳ್ಳುವುದರಿಂದ ಮತ್ತು ಪರಸ್ಪರರ ಭಾವನೆಗಳನ್ನು ಗೌರವಿಸುವುದರಿಂದ ಸಂಬಂಧವನ್ನು ಬಲಪಡಿಸಬಹುದು.
ಉತ್ತಮ ಗುಣಗಳನ್ನು ಪ್ರೋತ್ಸಾಹಿಸಿ:
ಮದುವೆಯ ನಂತರ ತಮ್ಮ ಸಂಗಾತಿ ತಮ್ಮ ನಿರೀಕ್ಷೆಗಳಿಗೆ ತಕ್ಕಂತೆ ಬದುಕಬೇಕೆಂದು ಅನೇಕ ಜನರು ಬಯಸುತ್ತಾರೆ. ಆದರೆ, ಪ್ರತಿಯೊಬ್ಬ ವ್ಯಕ್ತಿಯ ಪಾಲನೆ, ಕುಟುಂಬದ ಹಿನ್ನೆಲೆ, ಶಿಕ್ಷಣ, ಮನಸ್ಥಿತಿ ಮತ್ತು ಅನುಭವಗಳು ಬೇರೆ ಬೇರೆಯಾಗಿರುತ್ತದೆ. ಆದ್ದರಿಂದ, ಇಲ್ಲಿ ಸಂಗಾತಿಯನ್ನು ಸಂಪೂರ್ಣವಾಗಿ ಬದಲಾಯಿಸಲು ಪ್ರಯತ್ನಿಸುವುದರ ಬದಲು ಅವರ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳುವುದು ಹೆಚ್ಚು ಮುಖ್ಯವಾಗುತ್ತದೆ. ಸಂಗಾತಿಯ ನ್ಯೂನತೆಗಳನ್ನು ಮಾತ್ರವಲ್ಲದೆ, ಅವರ ಉತ್ತಮ ಗುಣಗಳನ್ನು ಸಹ ಗುರುತಿಸಿ ಪ್ರೋತ್ಸಾಹಿಸಬೇಕು.
ನಂಬಿಕೆ ಕಳೆದುಕೊಳ್ಳಬಾರದು:
ಉತ್ತಮ ದಾಂಪತ್ಯಕ್ಕೆ ಪರಸ್ಪರ ನಂಬಿಕೆ ಅತ್ಯಂತ ಮುಖ್ಯ. ಗಂಡ ಹೆಂಡತಿ ಪರಸ್ಪರರ ಭಾವನೆಗಳನ್ನು ಅರ್ಥಮಾಡಿಕೊಂಡು ಕಷ್ಟದ ಸಮಯದಲ್ಲಿ ಬೆಂಬಲವಾಗಿ ನಿಂತರೆ ಅವರ ಬಾಂಧವ್ಯ ಇನ್ನಷ್ಟು ಬಲಗೊಳ್ಳುತ್ತದೆ. ಪರಸ್ಪರರ ಯಶಸ್ಸನ್ನು ಸಂತೋಷದಿಂದ ಸ್ವೀಕರಿಸುವುದು, ಸಮಸ್ಯೆಗಳು ಎದುರಾದಾಗ ಪರಸ್ಪರ ಪ್ರೋತ್ಸಾಹಿಸುವುದು ಮತ್ತು ನಿರ್ಧಾರಗಳಲ್ಲಿ ಪರಸ್ಪರ ತೊಡಗಿಸಿಕೊಳ್ಳುವುದು ಉತ್ತಮ ಕುಟುಂಬಕ್ಕೆ ಅಡಿಪಾಯ ಹಾಕುತ್ತದೆ.
ಕಷ್ಟದಲ್ಲಿ ಜೊತೆಯಾಗಬೇಕು:
ನಿನ್ನೊಂದಿಗೆ ನಾನಿದ್ದೇನೆ, ಏನೇ ಬರಲಿ ಜೊತೆಯಾಗಿ ಹೆಜ್ಜೆ ಹಾಕೋಣ ಎನ್ನುವ ಪತ್ನಿ ಇದ್ದರೆ ಪತಿ ಅರ್ಧ ಗೆದ್ದಂತೆಯೇ. ಏರುಪೇರುಗಳು ಎದುರಾದಾಗ ಇಬ್ಬರೂ ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಸಂತೋಷದ ಜೀವನ ಸಾಧ್ಯ. ಒಳ್ಳೆಯ ಹೆಂಡತಿ ಎಂದರೆ ಪತಿಯ ನಿರೀಕ್ಷೆಗಳನ್ನು ಪೂರೈಸುವುದಲ್ಲ. ಅರ್ಥಮಾಡಿಕೊಳ್ಳುವುದು, ಗೌರವಿಸುವುದು, ಪರಸ್ಪರ ಪ್ರೀತಿಸುವುದು, ಅಗತ್ಯವಿದ್ದಾಗ ಬದಲಾವಣೆಗಳನ್ನು ಮಾಡುವುದು ಮತ್ತು ಒಟ್ಟಿಗೆ ಬೆಳೆಯುವುದು. ಇವೇ ಯಶಸ್ವಿ ವೈವಾಹಿಕ ಜೀವನದ ಹಿಂದಿರುವ ಗುಟ್ಟು.
ಯಶಸ್ವಿ ದಾಂಪತ್ಯ ದ ರಹಸ್ಯ
ಪರಸ್ಪರ ತಿಳುವಳಿಕೆ, ಪ್ರೀತಿ, ಗೌರವ ಮತ್ತು ಜವಾಬ್ದಾರಿಯೊಂದಿಗೆ ಬದುಕುವ ದಂಪತಿ ತಮ್ಮ ಮಕ್ಕಳಿಗೆ ಮತ್ತು ಸಮಾಜಕ್ಕೆ ಮಾದರಿಯಾಗುತ್ತಾರೆ. ಅವರ ಜೀವನವು ಭವಿಷ್ಯದ ಪೀಳಿಗೆಗೆ ಮಾರ್ಗದರ್ಶಿಯಾಗುತ್ತದೆ. ಅದಕ್ಕಾಗಿಯೇ ದಾಂಪತ್ಯದಲ್ಲಿ ಗೆಲ್ಲಬೇಕಾದರೆ ಒಬದಬರು ಇನ್ನೊಬ್ಬರ ಮೇಲೆ ಪ್ರಾಬಲ್ಯ ಸಾಧಿಸಬಾರದು. ಪರಸ್ಪರ ಒಟ್ಟಿಗೆ ನಡೆಯಲು ಕಲಿಯಬೇಕು. ಅದು ಯಶಸ್ವಿ ದಾಂಪತ್ಯ ಜೀವನದ ನಿಜವಾದ ರಹಸ್ಯ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications