'ನನ್ನ ರೆಸ್ಟೋರೆಂಟ್‌ನಲ್ಲಿ ಭಾರತೀಯರಿಗೆ ಕೆಲಸವಿಲ್ಲ': ಅಮೆರಿಕ ಹೋಟೆಲ್ ಮಾಲಕಿಯ ಅಚ್ಚರಿ ಹೇಳಿಕೆ Viral
ಅಮೆರಿಕದ ಟೆಕ್ಸಾಸ್‌ನಲ್ಲಿರುವ ಭಾರತೀಯ ರೆಸ್ಟೋರೆಂಟ್ ಒಂದರ ಮಾಲಿಕಿ, ತಮ್ಮ ಹೋಟೆಲ್‌ನಲ್ಲಿ ಭಾರತೀಯರಿಗೆ ಕೆಲಸ ನೀಡುವುದಿಲ್ಲ ಎಂದು ಹೇಳುವ ಮೂಲಕ ಹೊಸ ಚರ್ಚೆಯೊಂದನ್ನು ಹುಟ್ಟುಹಾಕಿದ್ದಾರೆ. ಟೆಕ್ಸಾಸ್‌ನ ನ್ಯೂ ಬ್ರೌನ್‌ಫೆಲ್ಸ್‌ನಲ್ಲಿ '7 ಮಂಕ್ಸ್ ಕೆಫೆ' ಎಂಬ ರೆಸ್ಟೋರೆಂಟ್ ನಡೆಸುತ್ತಿರುವ ರಶ್ಮಿ ಭಟ್ ಅವರು ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು.
ಆ ವಿಡಿಯೋದ ಆರಂಭದಲ್ಲಿಯೇ, "ನಾನು ನನ್ನ ಭಾರತೀಯ ರೆಸ್ಟೋರೆಂಟ್‌ನಲ್ಲಿ ಭಾರತೀಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ" ಎಂಬ ಪ್ರಚೋದನಕಾರಿ ಹೇಳಿಕೆ ನೀಡಿದ್ದರು. ಇದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗಳಿಗೆ ವೇದಿಕೆಯಾಗಿದೆ.

ಕೋವಿಡ್ ಸಮಯದಲ್ಲಿ ಆರಂಭವಾದ ಕೆಫೆ
ಭಾರತೀಯ ಹಾಗೂ ಮೆಡಿಟರೇನಿಯನ್ ಖಾದ್ಯಗಳನ್ನು ಉಣಬಡಿಸುವ '7 ಮಂಕ್ಸ್ ಕೆಫೆ'ಯನ್ನು ರಶ್ಮಿ ಭಟ್ ಅವರು ತಮ್ಮ ತಾಯಿಯೊಂದಿಗೆ ಸೇರಿ 2019ರಲ್ಲಿ ಪ್ರಾರಂಭಿಸಿದ್ದರು. ಹೋಟೆಲ್ ಉದ್ಯಮಕ್ಕೆ ಅತ್ಯಂತ ಸಂಕಷ್ಟದ ಹಾಗೂ ಸವಾಲಿನ ಸಮಯವಾಗಿದ್ದ ಕೋವಿಡ್ ಸಾಂಕ್ರಾಮಿಕ ರೋಗದ ಅವಧಿಯಲ್ಲಿ ಈ ರೆಸ್ಟೋರೆಂಟ್ ಆರಂಭವಾದರೂ, ಎಲ್ಲಾ ಕಷ್ಟಗಳನ್ನು ಯಶಸ್ವಿಯಾಗಿ ಎದುರಿಸಿ ನಿಂತಿದೆ. ಪ್ರಸ್ತುತ ಈ ಹೋಟೆಲ್ ಸ್ಥಳೀಯ ನಿವಾಸಿಗಳ ನೆಚ್ಚಿನ ತಾಣವಾಗಿ ಮಾರ್ಪಟ್ಟಿದೆ. ರುಚಿಕರವಾದ ಊಟಕ್ಕಾಗಿ ಜನರು ಇಲ್ಲಿಗೆ ಭೇಟಿ ನೀಡಲು ಇಷ್ಟಪಡುತ್ತಾರೆ.
ಭಾರತೀಯರನ್ನೇಕೆ ನೇಮಿಸಿಕೊಳ್ಳುವುದಿಲ್ಲ?
ಮುಂಬೈ ಮೂಲದವರಾದ ರಶ್ಮಿ ಭಟ್ ಅವರು ಇನ್‌ಸ್ಟಾಗ್ರಾಮ್ ವಿಡಿಯೋದಲ್ಲಿ ತಮ್ಮ ಈ ನೇಮಕಾತಿ ನಿರ್ಧಾರಕ್ಕೆ ನಿಖರವಾದ ಕಾರಣವನ್ನು ವಿವರಿಸಿದ್ದಾರೆ. "ನಾನು ನನ್ನ ರೆಸ್ಟೋರೆಂಟ್‌ನಲ್ಲಿ ಭಾರತೀಯರನ್ನು ನೇಮಿಸಿಕೊಳ್ಳುವುದಿಲ್ಲ ಎಂಬ ವಿಚಾರ ಜನರಿಗೆ ಸಾಮಾನ್ಯವಾಗಿ ಆಶ್ಚರ್ಯವನ್ನುಂಟು ಮಾಡುತ್ತದೆ" ಎಂದು ಅವರು ಹೇಳಿದ್ದು. ಸಾಂಪ್ರದಾಯಿಕ ಅಥವಾ ಜನಾಂಗೀಯ ರೆಸ್ಟೋರೆಂಟ್‌ಗಳಿಗೆ ಭೇಟಿ ನೀಡುವ ಗ್ರಾಹಕರು, ಅಲ್ಲಿನ ಸಿಬ್ಬಂದಿ ಕೂಡ ಅದೇ ಸಂಸ್ಕೃತಿ ಅಥವಾ ದೇಶದವರಾಗಿರಬೇಕು ಎಂದು ನಿರೀಕ್ಷಿಸುತ್ತಾರೆ. "ಹೆಚ್ಚಿನ ಜನರು ಭಾರತೀಯ ರೆಸ್ಟೋರೆಂಟ್‌ಗೆ ಕಾಲಿಟ್ಟಾಗ, ಅಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಸಹಜವಾಗಿ ಭಾರತೀಯರಾಗಿರಬೇಕು ಎಂದು ಭಾವಿಸುತ್ತಾರೆ. ಆದರೆ ನಾವು ಆ ರೀತಿ ಸಿಬ್ಬಂದಿಯನ್ನು ನೇಮಿಸಿಕೊಂಡಿಲ್ಲ" ಎಂದು ರಶ್ಮಿ ಸ್ಪಷ್ಟಪಡಿಸಿದ್ದಾರೆ.
ಜನಾಂಗಕ್ಕಿಂತ ವರ್ತನೆಗೆ ಹೆಚ್ಚಿನ ಆದ್ಯತೆ
ತಮ್ಮ ನೇಮಕಾತಿ ಪ್ರಕ್ರಿಯೆಯ ಬಗ್ಗೆ ಮತ್ತಷ್ಟು ವಿವರಣೆ ನೀಡಿರುವ ಅವರು, "ನಾನು ಮತ್ತು ನನ್ನ ತಾಯಿ ಆರಂಭದಿಂದಲೂ ಸಿಬ್ಬಂದಿಯ ಜನಾಂಗ ಅಥವಾ ಸಾಂಸ್ಕೃತಿಕ ಹಿನ್ನೆಲೆಗಿಂತ ಅವರ ವರ್ತನೆ, ವಿಶ್ವಾಸಾರ್ಹತೆ ಮತ್ತು ಕಲಿಯುವ ಇಚ್ಛಾಶಕ್ತಿಗೆ ಹೆಚ್ಚಿನ ಆದ್ಯತೆ ನೀಡಿದ್ದೇವೆ. ನಮ್ಮ ವ್ಯಾಪಾರವನ್ನು ಬೆಳೆಸುವುದರ ಜೊತೆಗೆ, ಸ್ಥಳೀಯ ಸಮುದಾಯದ ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ನಮ್ಮ ಪ್ರಮುಖ ಗುರಿಯಾಗಿತ್ತು" ಎಂದಿದ್ದಾರೆ.
"ನಾವು 7 ಮಂಕ್ಸ್ ಕೆಫೆ ತೆರೆದಾಗ, ಕೇವಲ ಭಾರತೀಯರನ್ನೇ ಒಳಗೊಂಡ ತಂಡವನ್ನು ಕಟ್ಟಲು ಹೊರಡಲಿಲ್ಲ. ಅವರ ಚರ್ಮದ ಬಣ್ಣವನ್ನು ಲೆಕ್ಕಿಸದೆ ಒಂದು ಅತ್ಯುತ್ತಮ ತಂಡವನ್ನು ಕಟ್ಟಲು ಮುಂದಾದೆವು. ಹಾಗಾಗಿ ನಾವು ಹೈಸ್ಕೂಲ್ ವಿದ್ಯಾರ್ಥಿಗಳು, ಕಾಲೇಜು ಓದುತ್ತಿರುವ ಯುವಕರು, ಸಿಂಗಲ್ ಮದರ್ಸ್ ಮತ್ತು ಬದುಕಿನಲ್ಲಿ ಎರಡನೇ ಅವಕಾಶದ ನಿರೀಕ್ಷೆಯಲ್ಲಿದ್ದ ನಿವೃತ್ತರನ್ನು ಕೆಲಸಕ್ಕೆ ತೆಗೆದುಕೊಂಡೆವು" ಎಂದು ವಿವರಿಸಿದ್ದಾರೆ.
ಈ ಕೆಫೆಯಲ್ಲಿ ಕೆಲಸಕ್ಕೆ ಸೇರುವ ಮುನ್ನ ಕೆಲವರು ಭಾರತೀಯ ಆಹಾರವನ್ನು ಒಮ್ಮೆಯೂ ತಿಂದಿರಲಿಲ್ಲವಂತೆ. ಆದರೆ ಇಂದು ಅವರು ಗ್ರಾಹಕರಿಗೆ ಅತ್ಯುತ್ತಮ ಭಾರತೀಯ ಖಾದ್ಯಗಳನ್ನು ವಿವರಿಸಿ ಶಿಫಾರಸು ಮಾಡುವಷ್ಟು ಪರಿಣತರಾಗಿದ್ದಾರೆ ಎಂದು ರಶ್ಮಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ
ರಶ್ಮಿ ಅವರ ಈ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ಬಿಡುಗಡೆಯಾದ ಕೇವಲ ಆರು ಗಂಟೆಗಳಲ್ಲಿ 1 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ದೃಢೀಕರಣ ಹಾಗೂ ವೈವಿಧ್ಯತೆಯ ಕುರಿತು ಭಾರಿ ಚರ್ಚೆ ಹುಟ್ಟುಹಾಕಿದೆ. ಕೆಲವರು ಇವರ ನೇಮಕಾತಿ ನೀತಿಯನ್ನು ಶ್ಲಾಘಿಸಿದರೆ, ಮತ್ತೆ ಕೆಲವರು ಕಟುವಾಗಿ ಟೀಕಿಸಿದ್ದಾರೆ. ಕಮೆಂಟ್ ವಿಭಾಗದಲ್ಲಿ ಪ್ರತಿಕ್ರಿಯಿಸಿರುವ ಓರ್ವ ಗ್ರಾಹಕ, "ನಿಮ್ಮ ನೇಮಕಾತಿ ನೀತಿಗಳು ಚನ್ನಾಗಿದೆ, ಆದರೆ ನಾವು ರೆಸ್ಟೋರೆಂಟ್‌ಗೆ ಬರುವುದು ಅಧಿಕೃತ ರುಚಿಯ ಆಹಾರವನ್ನು ತಿನ್ನಲು. ಭಾರತೀಯ ಅಡುಗೆಯವರು ಇಲ್ಲದಿದ್ದರೆ ನಾನು ಅಲ್ಲಿ ಖಂಡಿತ ತಿನ್ನುವುದಿಲ್ಲ" ಎಂದಿದ್ದಾರೆ.
ಮತ್ತೊಬ್ಬರು ಪ್ರತಿಕ್ರಿಯಿಸುತ್ತಾ, "ನಾನು ಹೋದ ಭಾರತೀಯ ರೆಸ್ಟೋರೆಂಟ್ ಒಂದರಲ್ಲಿ ಸಿಬ್ಬಂದಿ ಹಿಸ್ಪಾನಿಕ್ ಸಮುದಾಯದವರಾಗಿದ್ದರು. ಅವರಿಗೆ ಮೆನುವಿನಲ್ಲಿದ್ದ ಯಾವ ಪದಾರ್ಥದ ಬಗ್ಗೆಯೂ ತಿಳುವಳಿಕೆ ಇರಲಿಲ್ಲ. ನಾನು ಚಾಟ್ ಕೇಳಿದರೆ ಅವರು ನನಗೆ ಚಾಯ್ ತಂದುಕೊಟ್ಟರು" ಎಂದು ತಮ್ಮ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಒಟ್ಟಾರೆಯಾಗಿ, ರಶ್ಮಿ ಅವರ ಈ ಹೇಳಿಕೆ ಭಾರತೀಯ ಸಮುದಾಯದಲ್ಲಿ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ.












Click it and Unblock the Notifications