'ಅದು ಮೋದಿಗೆ ಬಿಟ್ಟಿದ್ದು', ಕಾಶ್ಮೀರದಲ್ಲಿ ಮತ್ತೆ ಮೂಗುತೂರಿಸಿದ ಡೊನಾಲ್ಡ್ ಟ್ರಂಪ್
Recommended Video
ವಾಷಿಂಗ್ಟನ್, ಆಗಸ್ಟ್ 02: 'ಪ್ರಧಾನಿ ನರೇಂದ್ರ ಮೋದಿ ಅವರು ಬಯಸಿದರೆ ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ವಹಿಸಲು ತಾನು ಸಿದ್ಧ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಇತ್ತೀಚೆಗಷ್ಟೇ, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅಮೆರಿಕಕ್ಕೆ ಭೇಟಿ ಮಾಡಿದ ನಂತರ ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಅಮೆರಿಕ ಪದೇ ಪದೇ ಮೂಗುತೂರಿಸುತ್ತಿದ್ದು, ಇಮ್ರಾನ್ ಖಾನ್ ಮತ್ತು ಡೊನಾಲ್ಡ್ ಟ್ರಂಪ್ ನಡುವೆ ಈ ಕುರಿತು ಚರ್ಚೆ ನಡೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಡೊನಾಲ್ಡ್ ಟ್ರಂಪ್, "ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಇಬ್ಬರೂ ಅತ್ಯುತ್ತಮ ವ್ಯಕ್ತಿಗಳು. ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಈ ಎರಡು ದೇಶಗಳ ನಡುವೆ ಮಧ್ಯಸ್ಥಿಕೆ ವಹಿಸಲು ನಾನು ಸಿದ್ಧನಿದ್ದೇನೆ. ಮಧ್ಯಸ್ಥಿಕೆ ಬೇಕೋ, ಬೇಡವೋ ಎಂಬುದನ್ನು ನಿರ್ಧರಿಸುವುದು ಪ್ರಧಾನಿ ಮೋದಿ ಅವರಿಗೆ ಬಿಟ್ಟಿದ್ದು" ಎಂದಿದ್ದರು.

ಸಂಭಾಷಣೆಯ ಪೂರ್ಣಪಾಠ
ಟ್ರಂಪ್ ಮತ್ತು ಪತ್ರಕರ್ತರ ಸಂಭಾಷಣೆಯ ವಿವರ ಇಲ್ಲಿದೆ.
* ಪ್ರಶ್ನೆ: ಕಾಶ್ಮೀರಕ್ಕೆ ಸಂಬಂಧಿಸಿದಂತೆ ಮಧ್ಯಸ್ಥಿಕೆ ವಹಿಸುವ ನಿಮ್ಮ ಆಫರ್ ಅನ್ನು ಭಾರತ ತಿರಸ್ಕರಿಸಿದೆ. ಕಾಶ್ಮೀರವು ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ವಿಷಯ ಎಂದು ಅದು ಹೇಳಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?
* ಡೊನಾಲ್ಡ್ ಟ್ರಂಪ್: ಅವರು ನಮ್ಮ ಆಫರ್ ಅನ್ನು ಒಪ್ಪಿಕೊಂಡಿದ್ದಾರೋ, ಇಲ್ಲವೋ?
* ಪತ್ರಕರ್ತ: ಇಲ್ಲ, ಅವರು ಒಪ್ಪಿಕೊಂಡಿಲ್ಲ.
* ಡೊನಾಲ್ಡ್ ಟ್ರಂಪ್: "ಒಳ್ಳೆಯದು, ಅದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಟ್ಟಿದ್ದು. ನಾನು ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಭೇಟಿಯಾಗಿದ್ದೆ. ಹಾಗೆಯೇ ಇಬ್ಬರು ಪ್ರಧಾನಿಗಳೂ ನನಗೆ ಗೊತ್ತು. ಅವರಿಬ್ಬರೂ ಉತ್ತಮ ವ್ಯಕ್ತಿಗಳು. ಅವರಿಬ್ಬರೂ ಒಂದಾಗಿ ಹೋದರೆ ಬಹಳ ಒಳ್ಳೆಯದಾಗುತ್ತದೆ"
ಆದರೆ ಅವರಿಗೆ ಮಧ್ಯಸ್ಥಿಕೆ ವಹಿಸಲು ಯಾರಾದರೂ ಅಗತ್ಯ ಎನ್ನಿಸಿದರೆ, ಅದಕ್ಕೆ ನಾನು ಸಿದ್ಧ. ನಾನು ಪಾಕಿಸ್ತಾನ ಮತ್ತು ಭಾರತ ಎರಡು ದೇಶಗಳೊಂದಿಗೂ ಈ ಬಗ್ಗೆ ಮಾತನಾಡಿದ್ದೇನೆ. ಈ ಎರಡೂ ದೇಶಗಳ ನಡುವಿನ ಯುದ್ಧ ಎಷ್ಟು ದಿನ ಮುಂದುವರಿಯಬೇಕು. ಅದು ನಿಲ್ಲಬೇಕು"
* ಪ್ರಶ್ನೆ: ನೀವು ಕಾಶ್ಮೀರ ವಿವಾದವನ್ನು ಹೇಗೆ ಬಗೆಹರಿಸುತ್ತೀರಿ?
* ಟ್ರಂಪ್: ನನ್ನಿಂದ ಸಾಧ್ಯ ಎಂಬುದಾದರೆ ಅವರು ನನ್ನನ್ನು ಕೇಳಬಹುದು. ನಾನು ಖಂಡಿತವಾಗಿಯೂ ಮಧ್ಯಸ್ಥಿಕೆ ವಹಿಸುತ್ತೇನೆ...

ಭಾರತದ ಉತ್ತರವೇನು?
ಟ್ರಂಪ್ ಮಾತಿಗೆ ತಕ್ಷಣವೇ ಪ್ರತಿಕ್ರಿಯೆ ನೀಡಿದ ಭಾರತ, "ಕಾಶ್ಮೀರ ವಿವಾದ ಭಾರತ ಮತ್ತು ಪಾಕಿಸ್ತಾನ ಎರಡು ದೇಶಗಳಿಗೆ ಸಂಬಂಧಿಸಿದ ದ್ವಿಪಕ್ಷೀಯ ವಿಷಯ. ಮತ್ತು ಅದನ್ನು ದ್ವಿಪಕ್ಷೀಯವಾಗಿಯೇ ಸರಿಪಡಿಸಿಕೊಳ್ಳುತ್ತೇವೆ. ಕಾಶ್ಮೀರದ ಕುರಿತು ಭಾರತದ ಮಾತುಕತೆಯೇನಿದ್ದರೂ ಅದು ಪಾಕಿಸ್ತಾನದ ಜೊತೆ ಮಾತ್ರ" ಎಂದು ಭಾರತ ಸ್ಪಷ್ಟಪಡಿಸಿದೆ. ವಿದೇಶಾಂಗ ಸಚಿವ ಜೈಶಂಕರ್ ಅವರು ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಮೂಲಕ 'ನಿಮ್ಮ ಮಧ್ಯಸ್ಥಿಕೆಯ ಅಗತ್ಯವಿಲ್ಲ' ಎಂದು ಪರೋಕ್ಷವಾಗಿ ಭಾರತ ಟ್ರಂಪ್ ಗೆ ಬಿಸಿಮುಟ್ಟಿಸಿದೆ.

ವಿವಾದ ಸೃಷ್ಟಿಸಿದ್ದ ಟ್ರಂಪ್
ಇತ್ತೀಚೆಗಷ್ಟೇ, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅಮೆರಿಕಕ್ಕೆ ತೆರಳಿದ್ದ ಸಂದರ್ಭದಲ್ಲಿ, "ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಲು ಭಾರತ ತನ್ನ ನೆರವು ಕೇಳಿತ್ತು" ಎಂಬ ಹೇಳಿಕೆಯನ್ನು ನೀಡುವ ಮೂಲಕ ಡೊನಾಲ್ಡ್ ಟ್ರಂಪ್ ವಿವಾದ ಸೃಷ್ಟಿಸಿದ್ದರು. ಆದರೆ ತಾನು ಎಂದಿಗೂ ಟ್ರಂಪ್ ಅವರೊಂದಿಗೆ ಈ ಬಗ್ಗೆ ಮಾತನಾಡಿಲ್ಲ ಎಂದು ಭಾರತ ಸ್ಪಷ್ಟನೆ ನೀಡಿತ್ತು.

ಸಂಸತ್ತಿನಲ್ಲೂ ಕೋಲಾಹಲ
ಟ್ರಂಪ್ ಅವರನ್ನು ಮಧ್ಯಸ್ಥಿಕೆಗಾಗಿ ಭಾರತ ಆಹ್ವಾನಿಸಿತ್ತು ಎಂದು ಸುದ್ದಿಯಾಗುತ್ತಿದ್ದಂತೆಯೇ ಸಂಸತ್ತಿನಲ್ಲಿ ಪ್ರತಿಪಕ್ಷಗಳು ಎನ್ ಡಿಎ ಸರ್ಕಾರದ ಮೇಲೆ ಹರಿಹಾಯ್ದಿದ್ದವು. ಆದರೆ ನಂತರ ಅಮೆರಿಕವೇ ಭಾರತ ಅಂಥ ಯಾವುದೇ ಪ್ರಸ್ತಾಪವನ್ನು ತನ್ನ ಮುಂದಿಟ್ಟಿರಲಿಲ್ಲ ಎಂದು ಒಪ್ಪಿಕೊಂಡಿತ್ತು. ಜಪಾನಿನಲ್ಲಿ ನಡೆದ ಜಿ-20 ಶೃಂಗ ಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಶ್ಮೀರ ವಿವಾದದ ಬಗ್ಗೆ ತಮ್ಮಲ್ಲಿ ಪ್ರಸ್ತಾಪಿಸಿದ್ದರು ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದರು.












Click it and Unblock the Notifications