ಅಮೆರಿಕ ಚುನಾವಣೆ: 60 ವರ್ಷದ ಸಂಪ್ರದಾಯ ಮುಂದುವರಿಸಿದ ನ್ಯೂ ಹ್ಯಾಂಪ್‌ಶೈರ್
ವಾಷಿಂಗ್ಟನ್, ನವೆಂಬರ್ 3: ಅಮೆರಿಕದ ಬಹುನಿರೀಕ್ಷಿತ ಅಧ್ಯಕ್ಷೀಯ ಚುನಾವಣೆಯ ಚುನಾವಣೆ ಮಂಗಳವಾರ ಶುರುವಾಗಿದೆ. ಈಶಾನ್ಯ ರಾಜ್ಯ ನ್ಯೂ ಹ್ಯಾಂಪ್‌ಶೈರ್‌ನ ಡಿಕ್ಸ್‌ವಿಲ್ಲೆ ನಾಚ್ ಮತ್ತು ಮಿಲ್ಸ್‌ಫೀಲ್ಡ್ ಪಟ್ಟಣಗಳಲ್ಲಿ ಮೊದಲ ಮತದಾನ ನಡೆಯಿತು. ನ್ಯೂ ಹ್ಯಾಂಪ್‌ಶೈರ್‌ನ ಗವರ್ನರ್ ಮತ್ತು ಅಮೆರಿಕದ ಅಧ್ಯಕ್ಷರ ತಮ್ಮ ಆಯ್ಕೆಯ ಅಭ್ಯರ್ಥಿಗಳ ಆಯ್ಕೆ ಹಾಗೂ ಫೆಡರಲ್ ಮತ್ತು ರಾಜ್ಯ ವಿಧಾನಸಭೆ ಸೀಟುಗಳಿಗೆ ಜನರು ಮಧ್ಯರಾತ್ರಿ ಮತದಾನ ಆರಂಭಿಸಿದರು.
ಡಿಕ್ಸ್‌ವಿಲ್ಲೆ ನಾಚ್‌ನ ಬಲ್ಸಾಮ್ ರೆಸಾರ್ಟ್ ಲೆಸ್ ಒಟ್ಟೆನ್‌ನಲ್ಲಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಮತಗಟ್ಟೆಯಲ್ಲಿ ಐವರು ನೋಂದಾಯಿತ ಮತದಾರರ ಪೈಕಿ ಒಬ್ಬರು ಮೊದಲ ಮತಪತ್ರ ಚಲಾಯಿಸಿದರು. ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಆಡಳಿತ ಮುಂದುವರಿಸಬೇಕೇ ಅಥವಾ ಅವರ ಜಾಗಕ್ಕೆ ಜೋ ಬೈಡನ್ ಅವರನ್ನು ಆರಿಸಬೇಕೇ ಎಂಬುದನ್ನು ಅಮೆರಿಕದ ಮತದಾರರು ನಿರ್ಧರಿಸುತ್ತಿದ್ದಾರೆ.
ಅಮೆರಿಕ ಚುನಾವಣೆಯಲ್ಲಿ ಕಳೆದ 60 ವರ್ಷಗಳಿಂದ ಸಂಪ್ರದಾಯದಂತೆ ಈ ಎರಡು ಪಟ್ಟಣಗಳಲ್ಲಿ ಮೊದಲ ಮತಪತ್ರ ಚಲಾವಣೆ ನಡೆಯುತ್ತದೆ. ಕೆನಡಾದ ಗಡಿಭಾಗದ ಸಮೀಪ ಇರುವ ಡಿಕ್ಸ್‌ವಿಲ್ಲೆ ನಾಚ್‌ನಲ್ಲಿ ಎಲ್ಲ ಐದು ಮತಗಳನ್ನು ಜೋ ಬೈಡೆನ್ ಗೆದ್ದಿದ್ದಾರೆ. ಇನ್ನು ಅಲ್ಲಿಂದ 20 ಕಿ.ಮೀ ದೂರದ ಮಿಲ್ಸ್‌ಫೀಲ್ಡ್‌ನಲ್ಲಿ ಡೊನಾಲ್ಡ್ ಟ್ರಂಪ್ ಪರ 16 ಮತಗಳು ಬಿದ್ದರೆ, ಬೈಡನ್‌ಗೆ ಐದು ಮತಗಳು ದೊರೆತವು.

ಸಾಮಾನ್ಯವಾಗಿ ನ್ಯೂ ಹ್ಯಾಂಪ್‌ಶೈರ್‌ನ ಮೊದಲ ಮತದಾನವನ್ನು ವೀಕ್ಷಿಸಲು ಪ್ರತಿ ವರ್ಷ ಅಪಾರ ಸಂಖ್ಯೆಯಲ್ಲಿ ಮಾಧ್ಯಮದ ಪ್ರತಿನಿಧಿಗಳು ನೆರೆದಿರುತ್ತಿದ್ದರು. ಆದರೆ ಈ ಬಾರಿ ಕೋವಿಡ್ ಭೀತಿಯ ಕಾರಣದಿಂದ ಮತಗಟ್ಟೆಗಳು ಖಾಲಿ ಹೊಡೆಯುತ್ತಿದ್ದವು. 1960ರ ನವೆಂಬರ್‌ನಲ್ಲಿ ಶುರುವಾಗಿದ್ದ ಈ ಸಂಪ್ರದಾಯದ 60ನೇ ವರ್ಷದ ಸಂಭ್ರಮಾಚರಣೆ ಸಾಧ್ಯವಾಗದೆ ಕಳೆಗುಂದಿತ್ತು.
ಅಧ್ಯಕ್ಷಗಿರಿಯನ್ನು ಗೆಲ್ಲಲು ಟ್ರಂಪ್ ಅಥವಾ ಬೈಡನ್ ಅವರು 538 ಮತಗಳಿರುವ ಎಲೆಕ್ಟೊರೆಲ್ ಕಾಲೇಜ್‌ನ ಶೇ 50ರಷ್ಟು ಮತಗಳನ್ನು ಪಡೆದುಕೊಳ್ಳಬೇಕು. ಅಂದರೆ, ಪ್ರತಿ ಅಭ್ಯರ್ಥಿ ಕನಿಷ್ಠ 270 ಮತಗಳನ್ನು ಗೆದ್ದರೆ ಮಾತ್ರ ಅಧ್ಯಕ್ಷ ಸ್ಥಾನ ಪಡೆಯುವ ಅರ್ಹತೆ ಗಳಿಸಲಿದ್ದಾರೆ.












Click it and Unblock the Notifications