'ಅಬ್ ಕಿ ಬಾರ್ ಟ್ರಂಪ್ ಸರ್ಕಾರ್' ಎಂಬ ಘೋಷಣೆ ಮಾಡಿದ್ದ ವ್ಯಕ್ತಿ ಈಗ ಹೇಳುವುದೇನು?
ವಾಷಿಂಗ್ಟನ್, ನವೆಂಬರ್ 3: 'ಕೋವಿಡ್ 19 ಇಲ್ಲದೇ ಹೋಗಿದ್ದರೆ ಈ ಬಾರಿ ಡೊನಾಲ್ಡ್ ಟ್ರಂಪ್ ಪ್ರಚಂಡ ವಿಜಯ ಗಳಿಸುತ್ತಿದ್ದರು'- ಇದು ಡೊನಾಲ್ಡ್ ಟ್ರಂಪ್ ಪರ ಅಮೆರಿಕದಲ್ಲಿ ಪ್ರಚಾರ ಮಾಡಿರುವ ಭಾರತ ಮೂಲದ ಶಲಭ್ ಕುಮಾರ್ ಹೇಳಿಕೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಎಷ್ಟರಮಟ್ಟಿಗೆ ಮತಗಳನ್ನು ಪಡೆದುಕೊಳ್ಳುತ್ತಾರೆ ಎಂಬ ಬಗ್ಗೆ ಅವರಿಗೆ ಖಾತರಿಯಿಲ್ಲ.
ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷ ಹ್ಯೂಸ್ಟನ್‌ನಲ್ಲಿ 'ಹೌಡಿ ಮೋದಿ' ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದಾಗ ಬಳಸಿದ್ದ ಜನಪ್ರಿಯ ಘೋಷಣೆ, 'ಅಬ್ ಕಿ ಬಾರ್ ಟ್ರಂಪ್ ಸರ್ಕಾರ್'ಅನ್ನು ರೂಪಿಸಿದ್ದವರು ಶಲಭ್ ಕುಮಾರ್.
ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ಮೋದಿ ಅವರ ಅಭಿಮಾನಿಯಾಗಿರುವ ಶಲಭ್, ಈ ಬಾರಿಯ ಚುನಾವಣೆಯ ಅತ್ಯಂತ ಕಷ್ಟಕರವಾಗಿರಲಿದೆ ಎಂದು ಒಪ್ಪಿಕೊಂಡಿದ್ದಾರೆ. ಇದಕ್ಕೆ ಕೋವಿಡ್ 19 ಪಿಡುಗು ಕಾರಣ ಎಂದು ಅವರು ದೂಷಿಸಿದ್ದಾರೆ. ಕೋವಿಡ್ 19 ಬಾರದೆ ಹೋಗಿದ್ದರೆ ಆರ್ಥಿಕತೆಯು ಉನ್ನತಿಯಲ್ಲಿರುತ್ತಿತ್ತು. ಷೇರು ಮಾರುಕಟ್ಟೆ ಉತ್ತಮ ಸ್ಥಿತಿಯಲ್ಲಿರುತ್ತಿತ್ತು. ಇತಿಹಾಸದಲ್ಲಿಯೇ ನಿರುದ್ಯೋಗ ಅತಿ ಕಡಿಮೆ ಇರುತ್ತಿತ್ತು ಎಂದು ಹೇಳಿದ್ದಾರೆ. ಮುಂದೆ ಓದಿ.

ಟ್ರಂಪ್ ಅವರಂತಹ ಅಧ್ಯಕ್ಷರನ್ನು ನೋಡಿಲ್ಲ
ಎವಿಜಿ ಸಮೂಹದ ಮುಖ್ಯ ಕಾರ್ಯನಿರ್ವಾಹಕ ಮತ್ತು ರಿಪಬ್ಲಿಕನ್ ಹಿಂದೂ ಮೈತ್ರಿಯ (ಆರ್‌ಎಚ್‌ಸಿ) ಸಂಸ್ಥಾಪಕರಾಗಿರುವ ಶಲಭ್ ಕುಮಾರ್, ದೇಶದ ಆರ್ಥಿಕ ಸಮೃದ್ಧತೆ ವಿಚಾರದಲ್ಲಿ ಡೊನಾಲ್ಡ್ ಟ್ರಂಪ್ ಅವರಿಗಿಂತ ಉತ್ತಮ ಅಧ್ಯಕ್ಷರನ್ನು ಇತಿಹಾಸದಲ್ಲಿಯೇ ಅಮೆರಿಕ ಕಂಡಿಲ್ಲ ಎಂದು ಶ್ಲಾಘಿಸಿದ್ದಾರೆ.

ಹಿಂದೂಗಳು-ನಾಯಕರ ನಡುವೆ ಸೇತುವೆ
ಶಲಭ್ ಅವರ ಆರ್‌ಎಚ್‌ಸಿ ಸಂಘಟನೆಯು ಹಿಂದೂ-ಅಮೆರಿಕ್ ಸಮುದಾಯ ಮತ್ತು ರಿಪಬ್ಲಿಕನ್ ನೀತಿ ನಿರೂಪಕರು ಹಾಗೂ ನಾಯಕರ ಮಧ್ಯೆ ವಿಶಿಷ್ಟ ಸೇತುವಾಗಿರುವುದಾಗಿ ಹೇಳಿಕೊಂಡಿದ್ದಾರೆ. ಡೊನಾಲ್ಡ್ ಟ್ರಂಪ್ ಮತ್ತು ಅವರ ನೀತಿಗಳನ್ನು ಅವರು ಈ ಗುಂಪಿನ ಮೂಲಕ ಬೆಂಬಲಿಸುತ್ತಾ ಬಂದಿದ್ದಾರೆ.

ಭಾರತದ ಪರ ಇದ್ದಾರೆ ಟ್ರಂಪ್
'ಟ್ರಂಪ್ ಅವರು ಭಾರತೀಯ-ಅಮೆರಿಕನ್ನರು ಅಥವಾ ಹಿಂದೂ-ಅಮೆರಿಕನ್ ಸಮುದಾಯಕ್ಕೆ ಏನನ್ನೂ ಮಾಡಿಲ್ಲ ಎನ್ನುವುದು ಸುಳ್ಳು ಸುದ್ದಿ. ಅದು ವಿಚಾರವೇ ಅಲ್ಲ. ಭಾರತ-ಅಮೆರಿಕ ಸಂಬಂಧದ ಕುರಿತಾದ ತಮ್ಮ ಎಲ್ಲ ಮಾತುಗಳನ್ನು ಉಳಿಸಿಕೊಂಡಿದ್ದಕ್ಕಾಗಿ, ಮೋದಿ ಅವರೊಂದಿಗಿನ ಗಟ್ಟಿಯಾದ ಬಾಂಧವ್ಯಕ್ಕಾಗಿ ಹಿಂದೂ-ಅಮೆರಿಕನ್ ಮತಗಳು ಅವರಿಗೆ ಸಿಗಬಹುದು' ಎಂದು ಶಲಭ್ ಹೇಳಿದ್ದಾರೆ.

ಹಿಂದೂ ಅಭಿಮಾನಿ, ಭಾರತದ ಅಭಿಮಾನಿ
'ನಾನು ಹಿಂದೂಗಳ ದೊಡ್ಡ ಅಭಿಮಾನಿ. ನಾನು ಭಾರತದ ದೊಡ್ಡ ಅಭಿಮಾನಿ' ಎಂದು ನ್ಯೂಜೆರ್ಸಿಯಲ್ಲಿ ಆರ್‌ಎಚ್‌ಸಿ ಆಯೋಜಿಸಿದ್ದ ದೇಣಿಗೆ ಸಂಗ್ರಹ ಕಾರ್ಯಕ್ರಮದಲ್ಲಿ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಮರುದಿನ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಶಲಭ್ ಕುಮಾರ್ ಮತ್ತು ಅವರ ಮಗಳು ಪೋಸ್ ನೀಡಿದ ಫೋಟೊಗಳು ಅಮೆರಿಕದ ಪತ್ರಿಕೆಗಳಲ್ಲಿ ಮಿಂಚಿದ್ದವು.












Click it and Unblock the Notifications