ಪುಟಿನ್ ಒಡ್ಡಿದ ಸವಾಲನ್ನು ನಾವು ನಿಭಾಯಿಸಲು ಸಿದ್ದ: ಜೋ ಬೈಡೆನ್
ವಾಷಿಂಗ್ಟನ್, ಮಾರ್ಚ್ 02: ಉಕ್ರೇನ್ ವಿರುದ್ಧ "ಪೂರ್ವಯೋಜಿತ ಮತ್ತು ಅಪ್ರಚೋದಿತ" ಯುದ್ಧವನ್ನು ನಡೆಸುತ್ತಿದ್ದಾರೆ ಎಂದು ರಷ್ಯಾದ ವ್ಲಾಡಿಮಿರ್ ಪುಟಿನ್ ಮೇಲೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಆರೋಪ ಮಾಡಿದ್ದಾರೆ. ತನ್ನ ಚೊಚ್ಚಲ ಸ್ಟೇಟ್ ಆಫ್ ದಿ ಯೂನಿಯನ್ ಭಾಷಣದಲ್ಲಿ ಜೋ ಬೈಡೆನ್, ಪುಟಿನ್ ಒಡ್ಡಿದ ಸವಾಲನ್ನು ನಾವು ನಿಭಾಯಿಸಲು ಸಿದ್ದವಾಗಿದ್ದೇವೆ ಎಂದು ತಿಳಿಸಿದ್ದಾರೆ.
"ನಮ್ಮ ಇತಿಹಾಸದುದ್ದಕ್ಕೂ ಸರ್ವಾಧಿಕಾರಿಗಳು ತಮ್ಮ ಆಕ್ರಮಣದ ವಿಚಾರದಲ್ಲಿ ಸರಿಯಾಗಿ ನಡೆದುಕೊಳ್ಳದಿದ್ದಾಗ ಭವಿಷ್ಯದಲ್ಲಿ ಬೆಲೆ ತೆರೆಯುವುರದ ಪಾಠವನ್ನು ಕಲಿತಿದ್ದೇವೆ. ಸರ್ವಾಧಿಕಾರಿಗಳು ಚಲಿಸುತ್ತಲೇ ಇರುತ್ತಾರೆ. ಅಮೆರಿಕ ಮತ್ತು ಜಗತ್ತಿಗೆ ವೆಚ್ಚಗಳು ಮತ್ತು ಬೆದರಿಕೆಗಳು ಹೆಚ್ಚುತ್ತಲೇ ಇರುತ್ತವೆ," ಎಂದು ಮೊದಲ ರಾಜ್ಯ ಒಕ್ಕೂಟದ ಜಂಟಿ ಕಾಂಗ್ರೆಸ್ ಅಧಿವೇಶನದಲ್ಲಿ ಹೇಳಿದ್ದಾರೆ.
"ಈ ಸರ್ವಾಧಿಕಾರಿಗಳ ಮನೋಭಾವವನ್ನು ನೋಡಿಯೇ ಎರಡನೇ ಮಹಾಯುದ್ಧದ ನಂತರ ಯುರೋಪಿನಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಭದ್ರಪಡಿಸಲು ನ್ಯಾಟೋ ಒಕ್ಕೂಟವನ್ನು ರಚಿಸಲಾಗಿದೆ. ಯುನೈಟೆಡ್ ಸ್ಟೇಟ್ಸ್ ಇತರ 29 ರಾಷ್ಟ್ರಗಳೊಂದಿಗೆ ಸದಸ್ಯತ್ವ ಹೊಂದಿದೆ. ಇದು ಮುಖ್ಯವಾಗುತ್ತದೆ. ಅಮೆರಿಕದ ರಾಜತಾಂತ್ರಿಕತೆ ಮುಖ್ಯವೇ?," ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಬಿರುಸಿನ ವಾಗ್ದಾಳಿ ನಡೆಸಿದ್ದಾರೆ.

ಪೂರ್ವಯೋಜಿತ ಯುದ್ಧ ಇದು ಎಂದ ಜೋ ಬೈಡೆನ್
"ಉಕ್ರೇನ್ ಮೇಲೆ ರಷ್ಯಾದ ಪುಟಿನ್ ಆಡಳಿತ ನಡೆಸುತ್ತಿರುವ ಯುದ್ಧವು ಪೂರ್ವಯೋಜಿತ ಮತ್ತು ಅಪ್ರಚೋದಿತವಾಗಿದೆ. ಪುಟಿನ್ ರಾಜತಾಂತ್ರಿಕತೆಯ ಪ್ರಯತ್ನಗಳನ್ನು ತಿರಸ್ಕರಿಸಿದರು. ಅವರು ಪಶ್ಚಿಮ ಮತ್ತು ನ್ಯಾಟೋಗೆ ಪ್ರತಿಕ್ರಿಯೆ ನೀಡಲ್ಲ. ನಮ್ಮನ್ನು ವಿಭಜಿಸಬಹುದು ಎಂದು ಅವರು ಭಾವಿಸಿದರು. ಆದರ ಪುಟಿನ್ ತಪ್ಪು. ನಾವು ಸಿದ್ಧರಿದ್ದೇವೆ," ಎಂದು ಅಮೆರಿಕ ಅಧ್ಯಕ್ಷ ಬೈಡೆನ್ ಸವಾಲು ಹಾಕಿದ್ದಾರೆ.
ರಷ್ಯಾ ವಿರುದ್ಧದ ಯುದ್ಧದ್ದಲ್ಲಿ ಯುಎಸ್ ಭಾಗಿಯಾಗದು ಎಂದ ಬೈಡೆನ್
ಉಕ್ರೇನ್‌ಗೆ ತಮ್ಮ ಬೆಂಬಲವನ್ನು ಬಲಪಡಿಸಿದ ಅಮೆರಿಕೆ ಅಧ್ಯಕ್ಷ ಜೋ ಬೈಡೆನ್ ಇದೇ ಸಂದರ್ಭದಲ್ಲಿ ರಷ್ಯಾ ವಿರುದ್ಧದ ಹೋರಾಟದಲ್ಲಿ ಯುಎಸ್ ಭಾಗಿಯಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ ತನ್ನ ದೇಶವು ತನ್ನ ಮಿತ್ರರಾಷ್ಟ್ರಗಳೊಂದಿಗೆ ನ್ಯಾಟೋ ಪ್ರದೇಶಗಳನ್ನು ರಕ್ಷಿಸುತ್ತದೆ ಎಂದು ಭರವಸೆ ನೀಡಿದ್ದಾರೆ.
"ಯುಎಸ್ ಮತ್ತು ನಮ್ಮ ಮಿತ್ರರಾಷ್ಟ್ರಗಳು ನಮ್ಮ ಸಾಮೂಹಿಕ ಶಕ್ತಿಯ ಸಂಪೂರ್ಣ ಬಲದಿಂದ ನ್ಯಾಟೋ ಪ್ರದೇಶದ ಪ್ರತಿ ಇಂಚಿಚನ್ನೂ ರಕ್ಷಿಸುತ್ತವೆ. ಉಕ್ರೇನಿಯನ್ನರು ಧೈರ್ಯದಿಂದ ಹೋರಾಡುತ್ತಿದ್ದಾರೆ. ಪುಟಿನ್ ಯುದ್ಧಭೂಮಿಯಲ್ಲಿ ಲಾಭವನ್ನು ಗಳಿಸಬಹುದು. ಆದರೆ ಅದರಿಂದಾಗಿ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ," ಎಂದು ಎಚ್ಚರಿಕೆ ನೀಡಿದ್ದಾರೆ. ಆದರೆ ಉಕ್ರೇನ್ ನೆಲದಲ್ಲಿ ಅಮೆರಿಕದ ಪಡೆಗಳು ರಷ್ಯಾದೊಂದಿಗೆ ತೊಡಗಿಸಿಕೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. "ನಮ್ಮ ಪಡೆಗಳು ಉಕ್ರೇನ್‌ಗಾಗಿ ಹೋರಾಡಲು ಹೋಗುತ್ತಿಲ್ಲ, ಆದರೆ ನಮ್ಮ ನ್ಯಾಟೋ ಮಿತ್ರರಾಷ್ಟ್ರಗಳನ್ನು ರಕ್ಷಿಸುವ ವಿಚಾರದಲ್ಲಿ ನಾವು ದೃಢವಾಗಿದ್ದೇವೆ. ಪೋಲೆಂಡ್, ರೊಮೇನಿಯಾ, ಲಾಟ್ವಿಯಾ, ಲಿಥುವೇನಿಯಾ ಮತ್ತು ಎಸ್ಟೋನಿಯಾ ಸೇರಿದಂತೆ ನ್ಯಾಟೋ ದೇಶಗಳನ್ನು ರಕ್ಷಿಸಲು ನಾವು ಅಮೇರಿಕನ್ ಗ್ರೌಂಡ್ ಫೋರ್ಸ್, ಏರ್ ಸ್ಕ್ವಾಡ್ರನ್, ಹಡಗುಗಳನ್ನು ಸಜ್ಜುಗೊಳಿಸಿದ್ದೇವೆ," ಎಂದು ತಿಳಿಸಿದ್ದಾರೆ.
"ಉಕ್ರೇನಿಯನ್ನರು ಧೈರ್ಯದಿಂದ ಹೋರಾಡುತ್ತಿದ್ದಾರೆ, ಆದರೆ ಮುಂದಿನ ಕೆಲವು ದಿನಗಳು, ವಾರಗಳು ಮತ್ತು ತಿಂಗಳುಗಳು ಅವರಿಗೆ ಕಠಿಣವಾಗಿರುತ್ತವೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಟ್ಯಾಂಕ್‌ಗಳೊಂದಿಗೆ ಸುತ್ತುವರಿಯಬಹುದು. ಆದರೆ ಎಂದಿಗೂ ಉಕ್ರೇನ್ ಜನರ ಹೃದಯ, ಆತ್ಮಗಳನ್ನು ಗೆಲ್ಲಲಾರರು," ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ. ಇನ್ನು ಅಮೆರಿಕ ಪ್ರಜೆಗಳಿಗೆ ಹಲವಾರು ಯೋಜನೆಗಳನ್ನು ಕೂಡಾ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಘೋಷಣೆ ಮಾಡಿದ್ದಾರೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications