ಡೈವೋರ್ಸ್ ಕೇಳಿದ್ದಕ್ಕೆ ಪತ್ನಿಯನ್ನು ಬಾತ್‌ಟಬ್‌ನಲ್ಲಿ ಮುಳುಗಿಸಿ ಕೊಂದ
ನ್ಯೂಯಾರ್ಕ್, ಜುಲೈ 16: ಭಾರತ ಮೂಲದ ವ್ಯಕ್ತಿಯೊಬ್ಬ 12 ವರ್ಷಗಳ ಹಿಂದೆ ತನ್ನಿಂದ ದೂರವಾಗಿದ್ದ ಪತ್ನಿ ವಿಚ್ಛೇದನ ಕೇಳಿದ್ದಕ್ಕಾಗಿ ಕೊಲೆ ಮಾಡಿದ ಪ್ರಕರಣದಲ್ಲಿ ಅಮೆರಿಕದ ನ್ಯಾಯಾಲಯವೊಂದರಿಂದ ಶಿಕ್ಷೆಗೆ ಗುರಿಯಾಗಿದ್ದಾನೆ.
ಅವತಾರ್ ಗ್ರೇವಲ್ (44) ಎಂಬಾತನನ್ನು 2011ರಲ್ಲಿ ಭಾರತದಿಂದ ಅಮೆರಿಕಕ್ಕೆ ಗಡಿಪಾರು ಮಾಡಲಾಗಿತ್ತು. ಈತ 2007ರಲ್ಲಿ ಅಹ್ವಾಟುಕೀಯಲ್ಲಿನ ಫೀನಿಕ್ಸ್ ಎಂಬಲ್ಲಿ 30 ವರ್ಷದ ಪತ್ನಿ ನವನೀತ್ ಕೌರ್‌ಳನ್ನು ಬಾತ್ ಟಬ್‌ನಲ್ಲಿ ಮುಳುಗಿಸಿ ಕೊಲೆ ಮಾಡಿದ್ದ. ಈ ಪ್ರಕರಣದಲ್ಲಿ ಆತ ತಪ್ಪಿತಸ್ಥ ಎಂಬುದು ದೃಢಪಟ್ಟಿದೆ. ಶಿಕ್ಷೆಯ ಪ್ರಮಾಣವನ್ನು ಆಗಸ್ಟ್ 23ರಂದು ಪ್ರಕಟಿಸಲಾಗುತ್ತದೆ.
ಇವರಿಬ್ಬರೂ 2005ರಲ್ಲಿ ಭಾರತದಲ್ಲಿ ಮದುವೆಯಾಗಿದ್ದರು. ಆದರೆ, ಕೆಲವೇ ಸಮಯದಲ್ಲಿ ಬೇರ್ಪಟ್ಟಿದ್ದರು. ಅವತಾರ್ ಕೆನಡಾದಲ್ಲಿ ನೆಲೆಸಿದ್ದರೆ, ನವನೀತ್ ಕೌರ್ ಅಮೆರಿಕದಲ್ಲಿ ವೀಸಾದಡಿ ವಾಸಿಸುತ್ತಿದ್ದರು.

ಮದುವೆಯಾದಾಗಿನಿಂದಲೂ ಅವತಾರ್, ಹೆಂಡತಿಯ ಬಗ್ಗೆ ಅನುಮಾನ ಹೊಂದಿದ್ದ. ಆಕೆ ಎಲ್ಲಿದ್ದಾಳೆ ಎಂದು ತಿಳಿಯಲು ಪದೇ ಪದೇ ಕರೆ ಮಾಡುತ್ತಿದ್ದ. ಆಕೆ ರಿಸೀವ್ ಮಾಡದೆ ಇದ್ದರೆ ಕಚೇರಿ ಮತ್ತು ಇತರೆ ವ್ಯಕ್ತಿಗಳಿಗೆ ಕರೆ ಮಾಡುತ್ತಿದ್ದ. ಮದುವೆ ವೇಳೆ ನವನೀತ್ ಕೌರ್ ಅವರಿಗೆ ಹೃದಯ ಚಿಕಿತ್ಸೆಯ ಅಗತ್ಯವಿತ್ತು. ಅವರು ಅಮೆರಿಕದಲ್ಲಿ ಚಿಕಿತ್ಸೆ ಪಡೆಯಲು ಬಯಸಿದ್ದರೆ, ಅವತಾರ್ ಕೆನಡಾದಲ್ಲಿ ಚಿಕಿತ್ಸೆ ನೀಡಲು ಬಯಸಿದ್ದ.
ಕೆಲವು ಸಮಯದ ಬಳಿಕ ನವನೀತ್ ತಮಗೆ ವಿಚ್ಛೇದನ ಬೇಕೆಂದು ಹೇಳಿದ್ದರು. ಅದರ ಬಗ್ಗೆ ಮಾತನಾಡಲು ಅವತಾರ್ ಕೆನಡಾದಿಂದ ಬಂದಿದ್ದ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಹೊಡೆದಾಡಿಕೊಂಡಿದ್ದರು. ಬಳಿಕ ಅವತಾರ್ ಆಕೆಯ ಕತ್ತು ಹಿಸುಕಿ ಬಾತ್‌ಟಬ್‌ನಲ್ಲಿ ಮುಳುಗಿಸಿದ್ದ ಎಂದು ಆರೋಪಿಸಲಾಗಿತ್ತು.












Click it and Unblock the Notifications