ಕ್ಯಾಲಿಫೋರ್ನಿಯಾ: 800 ಅಡಿ ಎತ್ತರದಿಂದ ಬಿದ್ದು ಸಾವಿಗೀಡಾದ ಭಾರತೀಯ ದಂಪತಿ
ಕ್ಯಾಲಿಫೋರ್ನಿಯಾ, ಅಕ್ಟೋಬರ್ 30: ಅಮೆರಿಕದ ಕ್ಯಾಲಿಫೋರ್ನಿಯಾದ ಯೂಸೆಮೈಟ್ ನ್ಯಾಶ್ನಲ್ ಪಾರ್ಕ್ ಎಂಬಲ್ಲಿ 800 ಅಡಿ ಎತ್ತರದಿಂದ ಬಿದ್ದು ಭಾರತೀಯ ದಂಪತಿ ಸಾವನ್ನಪ್ಪಿದ ಘಟನೆ ಅ.25 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ದಂಪತಿಗಳ ಶವ ಮೊದಲೇ ಸಿಕ್ಕಿದ್ದರೂ ಅವರನ್ನು ಗುರುತಿಸುವುದಕ್ಕೆ ಬಹಳ ಸಮಯ ಹಿಡಿದಿತ್ತು. ತಮಿಳುನಾಡಿನ ತಿರುಚಿಯ ವಿಷ್ಣು ವಿಶ್ವನಾಥ್(29) ಮತ್ತು ಮೀನಾಕ್ಷಿ ಮೂರ್ತಿ(30) ಎಂಬ ದಂಪತಿ ಕಳೆದ ನಾಲ್ಕು ವರ್ಷಗಳಿಂದ ಕ್ಯಾಲಿಫೋರ್ನಿಯಾದಲ್ಲಿ ವಾಸವಿದ್ದರು.
ಪ್ರವಾಸ ಅದರಲ್ಲೂ ಸಾಹಸಮಯ ಪ್ರವಾಸವೆಂದರೆ ಎಲ್ಲಿಲ್ಲದ ಆಸಕ್ತಿ ಹೊಂದಿದ್ದ ಈ ದಂಪತಿ ತಮ್ಮ ಪ್ರವಾಸೀ ಅನುಭವಗಳನ್ನು ಹಂಚಿಕೊಳ್ಳುವುದಕ್ಕೆಂದೇ ಬ್ಲಾಗ್ ವೊಂದನ್ನೂ ಆರಂಭಿಸಿದ್ದರು.

ಇತ್ತೀಚೆಗೆ ಯೊಸೆಮೈಟ್ ನ್ಯಾಶ್ನಲ್ ಪಾರ್ಕ್ ಗೆ ಪ್ರವಾಸಕ್ಕೆಂದು ಹೋಗಿದ್ದ ಈ ದಂಪತಿ ಮೇಲಿನಿಂದ ಬಿದ್ದಿದ್ದು ಹೇಗೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಎಲ್ಲರೀತಿಯ ಸುರಕ್ಷತಾ ಕ್ರಮಗಳೂ ಇದ್ದು, ಯಾವುದೇ ಕಾರಣಕ್ಕೂ ಅವರು ಅಲ್ಲಿಂದ ಬೀಳುವುದಕ್ಕೆ ಸಾಧ್ಯವೇ ಇರಲಿಲ್ಲ. ಆದರೂ ಈ ಅವಘಡ ಹೇಗೆ ಸಂಭವಿಸಿತು ಎಂಬುದು ತಿಳಿಯುತ್ತಿಲ್ಲ ಎಂದು ಯೊಸೆಟೈಮ್ ನ್ಯಾಶ್ನಲ್ ಪಾರ್ಕ್ ಆಡಳಿತ ಮಂಡಳಿ ತಿಳಿಸಿದೆ.
ವಿಷ್ಣು ವಿಶ್ವನಾಥ್ ಅವರು ಸಿಸ್ಕೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಪತಿ-ಪತ್ನಿ ಇಬ್ಬರೂ ಒಂದೇ ಕಾಲೇಜಿನಲ್ಲಿ ಓದಿ ಸಾಫ್ಟ್ ವೇರ್ ಎಂಜಿನಿಯರ್ ಗಳಾಗಿದ್ದರು. ದಂಪತಿಯ ಸಾವಿಗೆ ಅವರು ಓದುತ್ತಿದ್ದ ಚೆಂಗನ್ನೂರ್ ಕಾಲೇಜ್ ಆಫ್ ಇಂಜಿನಿಯರಿಂಗ್ ವಿಷಾದ ವ್ಯಕ್ತಪಡಿಸಿದ್ದು, ಅವರ ಆತ್ಮಕ್ಕೆ ಶಾಂತಿ ಕೋರಿದೆ.












Click it and Unblock the Notifications