ಜಾರ್ಜ್ ಫ್ಲಾಯ್ಡ್ ಹತ್ಯೆ: ಜನಾಂಗೀಯ ತಾರತಮ್ಯದ ವಿರುದ್ಧ ದನಿಯೆತ್ತಿದ ಆಪಲ್, ಗೂಗಲ್, ಮೈಕ್ರೋಸಾಫ್ಟ್
ವಾಷಿಂಗ್ಟನ್, ಜೂನ್ 2: ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಹತ್ಯೆಯ ಬಳಿಕ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿ ಜನಾಂಗೀಯ ತಾರತಮ್ಯದ ವಿರುದ್ಧ ಹೋರಾಟ ಭುಗಿಲೆದ್ದಿದೆ. 'ಬಿಳಿ' ಪೊಲೀಸರ ಅಟ್ಟಹಾಸದ ವಿರುದ್ಧ ಮೊದಲು ಶಾಂತವಾಗಿ ಆರಂಭವಾದ ಪ್ರತಿಭಟನೆ ಬಳಿಕ ಹಿಂಸಾಚಾರದ ಸ್ವರೂಪ ಪಡೆದುಕೊಂಡಿತು.
ಯು.ಎಸ್ ನ ಹಲವು ನಗರಗಳಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಯಿಂದ ಅನೇಕ ವಾಣಿಜ್ಯ ಮಳಿಗೆಗಳು, ಕಟ್ಟಡಗಳು, ಕಾರ್ ಗಳು, ಚರ್ಚ್ ಬೆಂಕಿಗೆ ಆಹುತಿಯಾಗಿವೆ.
ಪ್ರತಿಭಟನೆಯಿಂದಾಗಿ ತನ್ನ ಎಲ್ಲಾ ರೀಟೇಲ್ ಸ್ಟೋರ್ ಗಳಿಗೆ ಬೀಗ ಹಾಕಿರುವ ಆಪಲ್ ಜನಾಂಗೀಯ ತಾರತಮ್ಯದ ವಿರುದ್ಧ ದನಿಯೆತ್ತಿದೆ. ಆಪಲ್ ಮಾತ್ರ ಅಲ್ಲ, ಮೈಕ್ರೋಸಾಫ್ಟ್, ಗೂಗಲ್ ಕೂಡ ಜನಾಂಗೀಯ ಸಮಾನತೆಗಾಗಿ ಪಟ್ಟು ಹಿಡಿದಿದೆ.

ಆಪಲ್ ಸಿಇಒ ಹೇಳಿದ್ದೇನು.?
''ಹಿಂಸೆಯ ರೂಪದಲ್ಲಿ ಮಾತ್ರವಲ್ಲದೆ, ಜನಾಂಗೀಯ ತಾರತಮ್ಯ ಆಳವಾಗಿ ಬೇರೂರಿರುವ ದೈನಂದಿನ ಅನುಭವದಲ್ಲಿ ಆ ನೋವಿನ ಕ್ಷಣ ಇನ್ನೂ ಕಣ್ಣ ಮುಂದಿದೆ. ಕಾನೂನು ಬದಲಾಗಿದ್ದರೂ, ಅದರಿಂದ ರಕ್ಷಣೆ ಮಾತ್ರ ಸಾಧ್ಯವಾಗಿಲ್ಲ ಎಂಬುದು ವಾಸ್ತವ. ಒಗ್ಗಟ್ಟು ಪ್ರದರ್ಶಿಸಲು ನಾವು ಒಬ್ಬರಿಗೊಬ್ಬರು ನಿಲ್ಲಬೇಕಿದೆ. ಜಾರ್ಜ್ ಫ್ಲಾಯ್ಡ್ ಹತ್ಯೆ ಮತ್ತು ವರ್ಣಭೇದ ನೀತಿಯ ದೀರ್ಘ ಇತಿಹಾಸದ ವಿರುದ್ಧದ ಭಯ, ನೋವು, ಆಕ್ರೋಶವನ್ನು ಪರಿಗಣಿಸಬೇಕಿದೆ'' ಎಂದು ತಮ್ಮ ಉದ್ಯೋಗಿಗಳಿಗೆ ನೀಡಿದ ಮೆಮೋದಲ್ಲಿ ಆಪಲ್ ಸಿಇಒ ಟಿಮ್ ಕುಕ್ ತಿಳಿಸಿದ್ದಾರೆ.

ಚರ್ಮದ ಮೇಲೆ ಹಲವರಿಗೆ ಭಯವಿದೆ
ಜನಾಂಗೀಯ ತಾರತಮ್ಯದ ವಿರುದ್ಧ ಆಪಲ್ ನ ಹಲವು ಉದ್ಯೋಗಿಗಳು ಕಳವಳ ವ್ಯಕ್ತಪಡಿಸಿದ ಬೆನ್ನಲ್ಲೇ, ''ಜನಾಂಗೀಯ ತಾರತಮ್ಯದ ಕುರಿತು ಸಮುದಾಯಗಳಲ್ಲಿ, ದೈನಂದಿನ ಜೀವನದಲ್ಲಿ ಭಯ ಪಟ್ಟಿರುವ ಬಗ್ಗೆ ಹಲವರು ನನಗೆ ಹೇಳಿದ್ದಾರೆ. ತಮ್ಮ ಸ್ವಂತ ಚರ್ಮದ ಮೇಲೆ ಹಲವರಿಗೆ ಭಯವಿದೆ. ಆದರೆ, ಎಲ್ಲರನ್ನೂ ಒಳಗೊಂಡ ಆಪಲ್ ಅನ್ನು ನಾವು ನಿರ್ಮಿಸಿದ್ದೇವೆ'' ಎಂದು ಟಿಮ್ ಕುಕ್ ಹೇಳಿದ್ದಾರೆ.

ಮೈಕ್ರೋಸಾಫ್ಟ್ ಸಿಇಒ ಏನಂತಾರೆ.?
''ದೈನಂದಿನ ವರ್ಣಭೇದ ನೀತಿ ಮತ್ತು ದ್ವೇಷ ಹೊಸದಲ್ಲ. ಆದರೆ, ಇತರರು ಅನುಭವಿಸುವ ಯಾತನೆ ಬಗ್ಗೆ ಅನುಭೂತಿ ಹೊಂದಿರಬೇಕು'' ಎಂದು ತಮ್ಮ ಕಂಪನಿಯ ಆಂತರಿಕ ಸಭೆಯಲ್ಲಿ ಜನಾಂಗೀಯ ತಾರತಮ್ಯದ ವಿರುದ್ಧ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ದನಿಯೆತ್ತಿದ್ದಾರೆ.

ಗೂಗಲ್ ಸಿಇಒ ಏನಂದ್ರು.?
''ಯು.ಎಸ್ ನಲ್ಲಿ ಗೂಗಲ್ ಮತ್ತು ಯೂಟ್ಯೂಬ್ ಮುಖಪುಟಗಳಲ್ಲಿ ಕಪ್ಪು ವರ್ಣೀಯ ಜನಾಂಗದ ಪರವಾಗಿ ಜನಾಂಗೀಯ ಸಮಾನತೆಗಾಗಿ ತಮ್ಮ ಬೆಂಬಲ ಹಂಚಿಕೊಳ್ಳಲು ಕಂಪನಿ ನಿರ್ಧರಿಸಿದೆ'' ಎಂದು ಗೂಗಲ್ ಸಿಇಒ ಸುಂದರ್ ಪಿಚೈ ತಿಳಿಸಿದ್ದಾರೆ.

ಜಾರ್ಜ್ ಫ್ಲಾಯ್ಡ್ ಸತ್ತಿದ್ದು ಹೇಗೆ.?
ಮೇ 27 ರಂದು ರಾತ್ರಿ 8 ಗಂಟೆ ಸುಮಾರಿಗೆ 46 ವರ್ಷ ವಯಸ್ಸಿನ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಮೇಲೆ 'ಬಿಳಿ' ಪೊಲೀಸರು ಅಟ್ಟಹಾಸ ಮೆರೆದಿದ್ದರು. ರಸ್ತೆ ಮೇಲೆ ಬಿದ್ದ 'ಬ್ಲಾಕ್' ಜಾರ್ಜ್ ಫ್ಲಾಯ್ಡ್ ಕುತ್ತಿಗೆಯ ಮೇಲೆ 'ಬಿಳಿ' ಪೊಲೀಸ್ ಹಲವು ನಿಮಿಷಗಳ ಕಾಲ ಬಲವಾಗಿ ಮಂಡಿಯೂರಿದ್ದ ಪರಿಣಾಮ, ಜಾರ್ಜ್ ಫ್ಲಾಯ್ಡ್ ಸಾವನ್ನಪ್ಪಿದ್ದರು.
''ಉಸಿರಾಡಲು ಸಾಧ್ಯವಾಗುತ್ತಿಲ್ಲ'', ''ನನ್ನನ್ನು ಕೊಲ್ಲಬೇಡಿ'' ಎಂದು ಪದೇ ಪದೇ ಜಾರ್ಜ್ ಫ್ಲಾಯ್ಡ್ ಹೇಳುತ್ತಿದ್ದರೂ, ಆತನ ಕುತ್ತಿಗೆಯ ಮೇಲಿಂದ 'ವೈಟ್' ಪೊಲೀಸ್ ಕಾಲು ತೆಗೆಯಲಿಲ್ಲ.
ಜಾರ್ಜ್ ಫ್ಲಾಯ್ಡ್ ಮೇಲೆ ಪೊಲೀಸರು ತೋರಿದ ಮೃಗೀಯ ವರ್ತನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ವಿಡಿಯೋ ನೋಡಿದ ಜನತೆ ಬಿಳಿ ಪೊಲೀಸರ ಅಟ್ಟಹಾಸವನ್ನು ಖಂಡಿಸಿ ಪ್ರತಿಭಟನೆ ಆರಂಭಿಸಿದರು.
ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಕುತ್ತಿಗೆ ಮೇಲೆ ಬಲವಾಗಿ ಮಂಡಿಯೂರಿ ಕ್ರೌರ್ಯ ಮೆರೆದಿದ್ದ 'ಬಿಳಿ' ಪೊಲೀಸ್ ಡೆರೆಕ್ ಚೌವಿನ್ ವಿರುದ್ಧ ಮರ್ಡರ್ ಕೇಸ್ ಹಾಕಿ ಬಂಧಿಸಲಾಗಿದೆ. ಹಾಗೇ, ಆತನನ್ನು ಕೆಲಸದಿಂದ ವಜಾಗೊಳಿಸಲಾಗಿದೆ.












Click it and Unblock the Notifications