ಪಾರ್ಟಿ ಮಾಡಲು ಹೋಗಿ ಕಾಡಿಗೆ ಬೆಂಕಿ ಇಟ್ಟರು..!
'ಜೆಂಡರ್ ರಿವೀಲ್ ಪಾರ್ಟಿ' ಮಾಡಲು ಹೋದವರಿಂದ ಸುಮಾರು 7000 ಸಾವಿರ ಎಕರೆ ಕಾಡು ಭಸ್ಮವಾದ ಘಟನೆ ಅಮೆರಿಕದ ಕ್ಯಾಲಿಫೋರ್ನಿಯದಲ್ಲಿ ನಡೆದಿದೆ. ಪಾರ್ಟಿಯಲ್ಲಿ ಸಿಡಿಸಿದ ಪಟಾಕಿಯಿಂದ ಹೊತ್ತಿಕೊಂಡ ಬೆಂಕಿಯನ್ನು ನಂದಿಸಲು 10 ಸಾವಿರಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ಹೋರಾಡುತ್ತಿದ್ದಾರೆ. ಇಂತಹ ಪಾರ್ಟಿಗಳು ಅಮೆರಿಕದಲ್ಲಿ ಮಾಮೂಲಿ.
Recommended Video
'ಜೆಂಡರ್ ರಿವೀಲ್ ಪಾರ್ಟಿ' ಎಂದರೆ ಮುಂದೆ ಹುಟ್ಟುವ ಮಗುವಿನ ಲಿಂಗದ ಬಗ್ಗೆ ಅಧಿಕೃತ ಮಾಹಿತಿ ನೀಡಿ ಸಂಭ್ರಮಿಸುವುದೇ ಆಗಿದೆ. ಅಂದರೆ ಭ್ರೂಣದ ಪೋಷಕರು ತಮ್ಮ ಮಗುವಿನ ಲಿಂಗದ ಬಗ್ಗೆ ತಮ್ಮವರಿಗೆ ತಿಳಿಸಿ ಸಂಭ್ರಮಿಸುತ್ತಾರೆ. ಅಮೆರಿಕದಲ್ಲಿ ಇಂತಹ ವಿಚಿತ್ರ ಸಂಪ್ರದಾಯ ಶುರುವಾಗಿದ್ದು 2000ನೇ ಇಸವಿ ಹೊತ್ತಿಗೆ.
ಇಂತಹದ್ದೇ ಪಾರ್ಟಿ ಮಾಡಲು ಹೋದವರು ಒಣ ಹುಲ್ಲಿನಲ್ಲಿ ಪಟಾಕಿ ಸಿಡಿಸಿ ಬೆಂಕಿ ಹೊತ್ತಿಸಿದ್ದಾರೆ. ಇದೇ ಬೆಂಕಿ ಸುಮಾರು 7 ಸಾವಿರ ಎಕರೆ ಅರಣ್ಯ ಪ್ರದೇಶವನ್ನು ಸುಟ್ಟು ಭಸ್ಮಮಾಡಿದೆ. ಅಮೆರಿಕದಲ್ಲಿ ಈಗ ಬೇಸಿಗೆ ಕಾಲ. ಅಲ್ಲಿನ ಕಾಡುಗಳಿಲ್ಲಿ ಈಗ ಸಣ್ಣ ಕಿಡಿ ಬಿದ್ದರೂ ಧಗಧಗನೆ ಹೊತ್ತಿ ಉರಿಯುತ್ತವೆ. ಇದು ಗೊತ್ತಿದ್ದೂ ಪಾರ್ಟಿ ಮಾಡಲು ಹೋದ ಕೆಲವರು ಕಾಡನ್ನೇ ಭಸ್ಮ ಮಾಡಿದ್ದಾರೆ.

8 ಮಿಲಿಯನ್ ಡಾಲರ್ ದಂಡ..!
ಪಾರ್ಟಿ ಆಯೋಜನೆ ಮಾಡಿದ್ದ ವ್ಯಕ್ತಿಯನ್ನು ಬಂಧಿಸಿರುವ ಕ್ಯಾಲಿಫೋರ್ನಿಯ ಪೊಲೀಸರು ಜೈಲಿಗೆ ಅಟ್ಟಿದ್ದಾರೆ. ಬಂಧಿತನಿಗೆ ಅಮೆರಿಕದ ಕೋರ್ಟ್ ಸುಮಾರು 8 ಮಿಲಿಯನ್ ಡಾಲರ್ ದಂಡ ವಿಧಿಸಿದೆ. ಅಲ್ಲದೆ ಜೈಲುಶಿಕ್ಷೆ ಕೂಡ ನೀಡಿದೆ. ಆದರೆ ಈತ ಮಾಡಿದ ಎಡವಟ್ಟಿನಿಂದ ನೂರಾರು ಮಿಲಿಯನ್ ಡಾಲರ್ ನಷ್ಟ ಸಂಭವಿಸಿದೆ. ಹತ್ತಾರು ಮನೆಗಳು ಬೆಂಕಿಗೆ ಆಹುತಿಯಾಗಿದ್ದರೆ, 500ಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ.
ಹೊತ್ತಿ ಉರಿಯುತ್ತಿದೆ ಕ್ಯಾಲಿಫೋರ್ನಿಯ
ಬೇಸಿಗೆ ಕಾಲ ಬಂತೆಂದರೆ ಸಾಕು ಕ್ಯಾಲಿಫೋರ್ನಿಯ ಧಗಧಗಿಸುತ್ತದೆ. ಈಗಲೂ ಅಷ್ಟೇ ಕಾಡ್ಗಿಚ್ಚಿನ ಅಬ್ಬರಕ್ಕೆ ಸಿಲುಕಿರುವ ಕ್ಯಾಲಿಫೋರ್ನಿಯ ಹೊತ್ತಿ ಉರಿಯುತ್ತಿದೆ. ಕ್ಯಾಲಿಪೋರ್ನಿಯದ 24ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಬೆಂಕಿ ಹಬ್ಬಿದೆ. ಇದನ್ನು ತಣ್ಣಗಾಗಿಸಲು ಸುಮಾರು 15 ಸಾವಿರಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ತಮ್ಮ ಜೀವ ಒತ್ತೆಯಿಟ್ಟು ಹೋರಾಟ ನಡೆಸುತ್ತಿದ್ದಾರೆ. ಕ್ಯಾಲಿಫೋರ್ನಿಯ ಒಂದರಲ್ಲೇ ಬರೋಬ್ಬರಿ 4 ಸಾವಿರ ಕಟ್ಟಡಗಳು ಬೆಂಕಿಗೆ ಆಹುತಿಯಾಗಿ 800 ಮಿಲಿಯನ್ ಡಾಲರ್‌ಗೂ ಹೆಚ್ಚು ನಷ್ಟವಾಗಿದೆ. ಹತ್ತಾರು ಮಂದಿ ಅವಘಡದಲ್ಲಿ ಜೀವ ಕಳೆದುಕೊಂಡಿದ್ದಾರೆ. ಲಕ್ಷಾಂತರ ಎಕರೆ ಕಾಡು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸುಟ್ಟು ಕರಕಲಾಗಿದೆ.












Click it and Unblock the Notifications