ಬೈಡನ್ ಗೆದ್ದರೆ ಅದೇ ಇತಿಹಾಸ, ಟ್ರಂಪ್ ಗೆದ್ದರೆ ಬೈಡನ್ ನಿರಾಶೆ..!
ಅಮೆರಿಕ ಅಧ್ಯಕ್ಷೀಯ ಚುನಾವಣೆ ಭರ್ಜರಿಯಾಗಿ ಆರಂಭವಾಗಿದ್ದು, ಅಮೆರಿಕದ ಬಹುಪಾಲು ರಾಜ್ಯಗಳಲ್ಲಿ ಈಗಾಗಲೇ ಮತದಾನ ಆರಂಭವಾಗಿದೆ. ಈ ಸಂದರ್ಭದಲ್ಲೇ ಗೆಲುವು, ಸೋಲಿನ ಲೆಕ್ಕಾಚಾರ ಶುರುವಾಗಿದೆ. ಏಕೆಂದರೆ ಕೊರೊನಾ ಸಂಕಷ್ಟದ ಹಿನ್ನೆಲೆಯಲ್ಲಿ 2020ರ ಚುನಾವಣೆಯಲ್ಲಿ ಬರೋಬ್ಬರಿ 10 ಕೋಟಿ ಅಮೆರಿಕ ಪ್ರಜೆಗಳು ಅವಧಿಪೂರ್ವ ಮತದಾನ ಮಾಡಿದ್ದಾರೆ. ಹೀಗಾಗಿ ಯಾರು ಗೆಲ್ಲಬಹುದು ಮತ್ತು ಯಾರು ಸೋಲು ಕಾಣಬಹುದು ಎಂಬುದು ನಿರ್ಧಾರವಾಗಿದೆ. ಆ ನಿರ್ಧಾರ ಮತಪೆಟ್ಟಿಗೆಯಲ್ಲಿ ಜೋಪಾನವಾಗಿದೆ.
ಆದರೆ ಈ ಬಗ್ಗೆ ಹೊರಬಿದ್ದಿರುವ ಸಮೀಕ್ಷೆಗಳ ಪ್ರಕಾರ ಜೋ ಬೈಡನ್ ಗೆದ್ದು ಬೀಗುವುದು ಖಚಿತವಾಗಿದೆ. ಅಕಸ್ಮಾತ್ ಸಮೀಕ್ಷೆಗಳ ವರದಿ ನಿಜವೇ ಆದರೆ, ಇದು ಅಮೆರಿಕದ ಇತಿಹಾಸದಲ್ಲೇ ಬಹುದೊಡ್ಡ ದಾಖಲೆ ಬರೆಯಲಿದೆ. 1996ರಲ್ಲಿ ಬಿಲ್ ಕ್ಲಿಂಟನ್ ನಿರ್ಮಿಸಿದ್ದ ದಾಖಲೆಗಳು ಕೂಡ ಈಗ ಛಿದ್ರವಾಗಲಿವೆ. 1996ರಲ್ಲಿ ಕ್ಲಿಂಟನ್ 379 ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಆದರೆ ಸದ್ಯದ ಸಮೀಕ್ಷೆಗಳು ಹೇಳುವಂತೆ ಬೈಡನ್ 308 ಸ್ಥಾನಗಳಲ್ಲಿ ಈಗಾಗಲೇ ಗೆದ್ದಾಗಿದ್ದು, ಇನ್ನೂ 104 ಸ್ಥಾನಗಳು ಅತಂತ್ರವಾಗಿವೆ. 104 ಸ್ಥಾನಗಳಲ್ಲಿ ಬಹುಪಾಲು ಮತಗಳು ಬೈಡನ್್‌ಗೆ ಬೀಳುವ ಸಾಧ್ಯತೆ ಇದ್ದು, ಸಮೀಕ್ಷೆಗಳ ವರದಿ ನಿಜವಾದರೆ ಬೈಡನ್್ ಗೆಲುವು ಅಮೆರಿಕ ಚುನಾವಣೆಯಲ್ಲಿ ದೊಡ್ಡ ಇತಿಹಾಸವನ್ನೇ ನಿರ್ಮಿಸಲಿದೆ. ಸುಮಾರು 3 ದಶಕಗಳ ದಾಖಲೆ ಮುರಿಯಲಿದೆ.

ಶೇಕಡವಾರು ಮತಗಳಿಕೆಯಲ್ಲೂ ಬಿಡೆನ್ ಮುಂದೆ
ಬಿಡೆನ್ 538 ಸ್ಥಾನಗಳ ಪೈಕಿ 308 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಳ್ಳುವ ಜೊತೆ ಜೊತೆಗೆ ಶೇಕಡವಾರು ಮತದಾನದಲ್ಲಿ ಶೇ. 53.1ರಷ್ಟು ಮತಗಳನ್ನು ಬಾಚಿಕೊಳ್ಳುವ ಮುನ್ಸೂಚನೆ ನೀಡಿದ್ದಾರೆ. ಆದರೆ ಮತ್ತೊಂದು ಬದಿಯಲ್ಲಿ ಟ್ರಂಪ್‌ಗೆ ಶೇಕಡವಾರು ಮತದಾನದಲ್ಲೂ ಭಾರಿ ಹಿನ್ನಡೆಯಾಗಿದೆ. ಟ್ರಂಪ್ ಶೇಕಡ 44.6ರಷ್ಟು ಮಾತ್ರ ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು ಮತದಾನಕ್ಕೆ ಕೊನೆಯ ದಿನವಾಗಿದ್ದು, ಈ ಬಾರಿ ಗೆಲುವು ಯಾರಿಗೆ ಎಂಬುದು ಯಕ್ಷಪ್ರಶ್ನೆಯಾಗಿದೆ.

ನಿರ್ಣಾಯಕ ರಾಜ್ಯಗಳಲ್ಲೇ ಟ್ರಂಪ್‌ಗೆ ಶಾಕ್..?
ಈ ಬಾರಿಯ ಅಮೆರಿಕ ಅಧ್ಯಕ್ಷೀಯ ಚುನಾವಣೆ ಅದೆಷ್ಟು ಕ್ಲಿಷ್ಟಕರವಾಗಿದೆ ಎಂದರೆ ನಿರೀಕ್ಷೆಗಳೆಲ್ಲಾ ಉಲ್ಟಾ ಆಗುತ್ತಿವೆ. ಟ್ರಂಪ್ ಗೆದ್ದು ಬೀಗಬಹುದು ಎಂದುಕೊಂಡಿದ್ದ ರಾಜ್ಯಗಳಲ್ಲೇ ಟ್ರಂಪ್ ಸೋಲುವ ಮುನ್ಸೂಚನೆ ಸಿಕ್ಕಿದೆ. ಅದರಲ್ಲೂ ಟ್ರಂಪ್ ಕಳೆದಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಲು ಸಹಕಾರಿಯಾಗಿದ್ದ ರಾಜ್ಯಗಳಲ್ಲಿಯೇ ಟ್ರಂಪ್‌ಗೆ ಸೋಲು ಎದುರಾಗುತ್ತಿದೆ. ಇನ್ನುಳಿದಂತೆ ನಿರ್ಣಾಯಕ ಪಾತ್ರ ವಹಿಸುವ, ಅತಿಹೆಚ್ಚು ಮತಗಳನ್ನು ಹೊಂದಿರುವ ರಾಜ್ಯಗಳಲ್ಲೂ ಟ್ರಂಪ್‌ಗೆ ಭಾರಿ ಹಿನ್ನಡೆ ಉಂಟಾಗುತ್ತಿದೆ. ಈ ಮೂಲಕ ಟ್ರಂಪ್‌ಗೆ 2ನೇ ಅವಧಿ ಬಹುತೇಕ ಅನುಮಾನ ಎನ್ನುವಂತಾಗಿದೆ.

ಟ್ರಂಪ್ ಎಡವಟ್ಟು ಹೇಳಿಕೆಗಳಿಂದ ವಿವಾದ
ಮಾಸ್ಕ್ ವಿಚಾರದಿಂದ ಹಿಡಿದು, ಕೊರೊನಾ ವೈರಸ್ ತನಕ ಟ್ರಂಪ್ ಮೇಲಿಂದ ಮೇಲೆ ವಿವಾದಗಳನ್ನು ಸೃಷ್ಟಿ ಮಾಡಿದ್ದರು. ಮೊದಲಿಗೆ ಮಾಸ್ಕ್ ಹಾಕುವುದನ್ನು ಕಡ್ಡಾಯ ಮಾಡುವುದಿಲ್ಲ ಎಂದು ಹಠ ಹಿಡಿದಿದ್ದರು. ಬಳಿಕ ತಾವೇ ಮಾಸ್ಕ್ ತೊಟ್ಟು ಹೊರಗೆ ಕಾಣಿಸಿಕೊಂಡಿದ್ದರು. ಹಾಗೇ ಕೊರೊನಾ ವೈರಸ್ ಸಾಯಲು ದೇಹಕ್ಕೆ ಸೋಂಕು ನಿವಾರಕ ರಾಸಾಯನಿಕಗಳನ್ನು ಚುಚ್ಚಿ ಎಂದಿದ್ದರು. ಸಾಲದು ಎಂಬಂತೆ ನೆರಳಾತೀತ ಕಿರಣಗಳನ್ನು ದೇಹಕ್ಕೆ ಹಾಯಿಸಿದರೆ ಮನುಷ್ಯನ ದೇಹದಲ್ಲಿರುವ ಕೊರೊನಾ ಸಾಯುತ್ತದೆ ಅಂತಾ ಹೇಳಿಕೆ ಕೊಟ್ಟಿದ್ದರು. ಆದರೆ ಇದೆಲ್ಲಾ ಮನುಷ್ಯನನ್ನೇ ಸಾಯಿಸುತ್ತದೆ ಎಂಬುದನ್ನೇ ಟ್ರಂಪ್ ಮರೆತಂತೆ ಮಾತನಾಡಿದ್ದರು. ಇಂತಹ ವಿಚಿತ್ರ ಹೇಳಿಕೆಗಳಿಂದ ಟ್ರಂಪ್ ವಿಶ್ವಾಸ ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದ್ದು, ಇದು ಚುನಾವಣೆ ಮೇಲೂ ಭಾರಿ ಪ್ರಭಾವ ಬೀರುತ್ತಿದೆ. ಇಂದು ಚುನಾವಣೆ ಅಂತ್ಯವಾಗಲಿದ್ದು, ಕೆಲವೇ ದಿನಗಳಲ್ಲಿ ಸತ್ಯ ಬಯಲಾಗಲಿದೆ.

2016ರ ಸಮೀಕ್ಷೆಗಳ ಸಮೀಕ್ಷೆ
2016ರ ಸಮೀಕ್ಷೆಗಳ ಸಮೀಕ್ಷೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿದ್ದ ಹಿಲರಿ ಕ್ಲಿಂಟನ್ ಅವರು ಡೊನಾಲ್ಡ್ ಟ್ರಂಪ್ ಅವರಿಗಿಂತ ಮುನ್ನಡೆ ಹೊಂದಿದ್ದರು. 2016ರ ನವೆಂಬರ್ 8ರಂದು ಅಧ್ಯಕ್ಷೀಯ ಚುನಾವಣೆ ನಡೆದಿತ್ತು. ನವೆಂಬರ್ 7ರಂದು ಹಿಲರಿ ಕ್ಲಿಂಟನ್ ಶೇ 46ರಷ್ಟು ರಾಷ್ಟ್ರೀಯ ಸರಾಸರಿ ಮತಗಳನ್ನು ಪಡೆದಿದ್ದರೆ, ಟ್ರಂಪ್ ಶೇ 42ರಷ್ಟು ಮತಗಳನ್ನು ಪಡೆದಿದ್ದರು. ಎಲ್ಲ ಸಮೀಕ್ಷೆಗಳೂ ಅತಿ ಸಮೀಪದ ಅಂತರವನ್ನು ಹೇಳಿದ್ದವು. ಕೊನೆಯಲ್ಲಿ ಡೊನಾಲ್ಡ್ ಟ್ರಂಪ್ ವಿಜಯಿಯಾಗಿ ಹೊರಹೊಮ್ಮಿದ್ದರು.












Click it and Unblock the Notifications