ನ್ಯೂಯಾರ್ಕ್ ನ ವಿದ್ಯಾರ್ಥಿಯಿಂದ ಆಪಲ್ ಮೇಲೆ 7000 ಕೋಟಿಗೆ ದಾವೆ
ನ್ಯೂಯಾರ್ಕ್ ನ 18 ವರ್ಷದ ವಿದ್ಯಾರ್ಥಿ ಔಸ್ಮಾನ್ ಬಹ್ ಆಪಲ್ ಕಂಪೆನಿ ವಿರುದ್ಧ 1 ಬಿಲಿಯನ್ ಅಮೆರಿಕನ್ ಡಾಲರ್ ಗೆ ಮೊಕದ್ದಮೆ ಹೂಡಿದ್ದಾನೆ. ಅಂದರೆ ಭಾರತೀಯ ರುಪಾಯಿ ಮೌಲ್ಯದಲ್ಲಿ ಹೇಳಬೇಕು ಅಂದರೆ ಹತ್ತಿರ ಹತ್ತಿರ 7000 ಕೋಟಿ ರುಪಾಯಿ ಮೊತ್ತವಾಯಿತು.
ಆಪಲ್ ಕಂಪೆನಿಯ ಫೇಶಿಯಲ್ ರೆಕಗ್ನಿಷನ್ ಸಾಫ್ಟ್ ವೇರ್ ತಪ್ಪಾಗಿ ಆತನನ್ನು ಲಿಂಕ್ ಮಾಡಿ, ಆಪಲ್ ಸ್ಟೋರ್ಸ್ ನಲ್ಲಿ ಸರಣಿ ಕಳವಿಗೆ ಕಾರಣವಾಗಿದೆ ಎಂಬುದು ಆತನ ಆರೋಪ. ಕಳೆದ ನವೆಂಬರ್ ನಲ್ಲಿ ನ್ಯೂಯಾರ್ಕ್ ನಲ್ಲಿರುವ ಆತನ ಮನೆಯಲ್ಲೇ ಬಂಧಿಸಿ, ಆಪಲ್ ಸ್ಟೋರ್ಸ್ ನಿಂದ ಕಳವು ಮಾಡಿದ ಆರೋಪ ಹೊರಿಸಲಾಗಿದೆಯಂತೆ.
ಬಂಧನದ ವಾರೆಂಟ್ ನಲ್ಲಿರುವ ಫೋಟೋಗೂ ಬಹ್ ಗೂ ಹೋಲಿಕೆ ಆಗುತ್ತಿಲ್ಲ ಎಂದು ತನ್ನ ಮೊಕದ್ದಮೆಯನ್ನು ದಾಖಲಿಸುವ ವೇಳೆ ಆತ ಹೇಳಿದ್ದಾನೆ. ಸರಣಿ ಕಳವಿನ ಪೈಕಿ ಒಂದು ಬೋಸ್ಟನ್ ನಲ್ಲಿ ಆಗಿದೆ. ಅದು ಜೂನ್ ನಲ್ಲಿ ನಡೆದಿದ್ದು, ಆ ದಿನ ಬಹ್ ಮ್ಯಾನ್ ಹಟನ್ ನಲ್ಲಿ ಇದ್ದಿದ್ದಾಗಿ ತಿಳಿಸಿದ್ದಾನೆ.

ತನ್ನದೊಂದು ಗುರುತಿನ ಚೀಟಿ ಈ ಹಿಂದೆ ಕಳೆದುಕೊಂಡಿದ್ದು, ಅದು ನಿಜವಾದ ಕಳ್ಳನಿಗೆ ಸಿಕ್ಕಿರಬೇಕು ಅಥವಾ ಆತನೇ ಕದ್ದಿರಬೇಕು. ಹಾಗೂ ಆಪಲ್ ಸ್ಟೋರ್ಸ್ ನಲ್ಲಿ ಅದನ್ನೇ ಗುರುತಾಗಿ ಬಳಸಿದ್ದಾನೆ. ಆ ಕಾರಣಕ್ಕೆ ಆಪಲ್ ನ ಫೇಶಿಯಲ್ ರೆಕಗ್ನಿಷನ್ ಸಿಸ್ಟಮ್ ನಲ್ಲಿ ತಪ್ಪಾಗಿ ತನ್ನ ಹೆಸರು ಕಳ್ಳನ ಮುಖದ ಜತೆ ನಂಟಾಗಿದೆ ಎಂದಿದ್ದಾನೆ.
ಹಲವು ಸುಳ್ಳು ಅರೋಪಗಳಿಗೆ ನಾನು ಉತ್ತರಿಸುವ ಪ್ರಸಂಗ ಎದುರಾಗಿದ್ದರಿಂದ ಗಂಭೀರವಾದ ಒತ್ತಡ ಮತ್ತು ಆತಂಕಕ್ಕೆ ಗುರಿಯಾದೆ ಎಂದು ಬಹ್ ತನ್ನ ದೂರಿನಲ್ಲಿ ತಿಳಿಸಿದ್ದಾನೆ. ಆದರೆ ಈ ಬಗ್ಗೆ ಆಪಲ್ ಕಂಪೆನಿ ಕಡೆಯಿಂದ ಪ್ರತಿಕ್ರಿಯೆ ನೀಡಿಲ್ಲ.












Click it and Unblock the Notifications