ಸಿಂದಗಿಯ ಪ್ರಭಾವಿ ಮುಖಂಡ ಶಿವಾನಂದ ಪಾಟೀಲ್ ಜೆಡಿಎಸ್ ಸೇರ್ಪಡೆ
ವಿಜಯಪುರ, ಫೆಬ್ರವರಿ 15; ವಿಜಯಪುರ ಜಿಲ್ಲೆಯ ಸಿಂದಗಿ ವಿಧಾನಸಭೆ ಕ್ಷೇತ್ರದ ಪ್ರಭಾವಿ ಮುಖಂಡ ಹಾಗೂ ನಿವೃತ್ತ ಯೋಧ ಶಿವಾನಂದ ಪಾಟೀಲ್ ತಮ್ಮ ನೂರಾರು ಬೆಂಬಲಿಗರೊಂದಿಗೆ ಜೆಡಿಎಸ್ ಸೇರಿದರು. ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಪಕ್ಷಕ್ಕೆ ಬರಮಾಡಿಕೊಂಡರು.
ಮಂಗಳವಾರ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಚ್. ಡಿ. ಕುಮಾರಸ್ವಾಮಿ ಶಿವಾನಂದ ಪಾಟೀಲ್‌ಗೆ ಪಕ್ಷದ ಶಾಲು ಹೊದಿಸಿ, ಪಕ್ಷದ ಧ್ವಜವನ್ನು ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು. ಕ್ಷೇತ್ರದ ನೂರಾರು ಕಾರ್ಯಕರ್ತರು ಕೂಡ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಬಳಿಕ ಮಾತನಾಡಿದ ಕುಮಾರಸ್ವಾಮಿ, "ಸಿಂದಗಿ ಕ್ಷೇತ್ರ ಹಾಗೂ ಮಾಜಿ ಪ್ರಧಾನಿಗಳಾದ ಎಚ್. ಡಿ. ದೇವೆಗೌಡರ ನಡುವೆ ಕರುಳಬಳ್ಳಿ ಸಂಬಂಧ ಇದೆ. ದೇವೇಗೌಡರ ಕಾಲದಿಂದ ಸಿಂದಗಿ ಕ್ಷೇತ್ರವನ್ನು ಅತ್ಯುತ್ತಮವಾಗಿ ಪ್ರಗತಿ ಮಾಡಲಾಗಿದೆ. ಗುಳೆ ಹೋಗುತ್ತಿದ್ದ ಅಲ್ಲಿನ ಜನರು ಪಕ್ಕದ ರಾಜ್ಯಗಳಲ್ಲಿ ಕೂಲಿಗಳು ಆಗುವುದನ್ನು ತಪ್ಪಿಸಲು ಶಾಶ್ವತವಾಗಿ ನೀರಾವರಿ ಪರಿಹಾರ ಒದಗಿಸಿದ್ದರು" ಎಂದರು.

"ಮಾಜಿ ಸಚಿವರಾದ ದಿವಂಗತ ಮನಗೂಳಿ ಮತ್ತು ಗೌಡರ ನಡುವಿನ ಸಂಬಂಧ ಎಲ್ಲರಿಗೂ ಗೊತ್ತೇ ಇದೆ. ತಮ್ಮ ಮಗನಂತೆ ಅವರನ್ನು ಗೌಡರು ಸಲುಹಿದ್ದರು. ಅವರ ನಿಧನದ ನಂತರ ನಡೆದ ಉಪ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆ ಆಗಿದ್ದು ನಿಜ. ಈಗ ಅದೆನ್ನೆಲ್ಲ ಸರಿ ಮಾಡುವ ಕಾಲ ಬಂದಿದೆ. ಶಿವಾನಂದ ಪಾಟೀಲ್ ಸೇರ್ಪಡೆಯಿಂದ ಪಕ್ಷಕ್ಕೆ ಬಲ ಬಂದಿದೆ" ಎಂದು ಕುಮಾರಸ್ವಾಮಿ ಹೇಳಿದರು.
"ವಿಜಯಪುರ, ಬಾಗಲಕೋಟೆ ಜಿಲ್ಲೆಗಳು ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಪಕ್ಷವನ್ನು ಬಲಪಡಿಸಲಾಗುವುದು. ಆ ನಿಟ್ಟಿನಲ್ಲಿ ಇನ್ನೂ ಅನೇಕ ಮುಖಂಡರು ಪಕ್ಷಕ್ಕೆ ಸೇರಲಿದ್ದಾರೆ" ಎಂದು ಎಚ್. ಡಿ. ಕುಮಾರಸ್ವಾಮಿ ತಿಳಿಸಿದರು.
ಶೀಘ್ರವೇ ಜಲಧಾರೆ ಆರಂಭ; "ನಾಡಿನಲ್ಲಿ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಜಾರಿ ಮಾಡುವುದು, ನಮ್ಮ ನೀರಾವರಿ ಹಕ್ಕುಗಳನ್ನು ಸಾಧಿಸಿಕೊಳ್ಳುವುದು ಸೇರಿದಂತೆ ಇಡೀ ರಾಜ್ಯಕ್ಕೆ ಜಲ ಸಮಾನತೆ ಕಲ್ಪಿಸಿ ಸಮಗ್ರ ಪ್ರಗತಿ ಸಾಧಿಸುವ ಪರಿಕಲ್ಪನೆಯೊಂದಿಗೆ ಹಮ್ಮಿಕೊಳ್ಳಲಾಗಿರುವ ಜನತಾ ಜಲಧಾರೆ ಕಾರ್ಯಕ್ರಮ ಶೀಘ್ರವೇ ಶುರುವಾಗಲಿದೆ" ಎಂದು ಕುಮಾರಸ್ವಾಮಿ ಹೇಳಿದರು.
ಈ ಸಂದರ್ಭದಲ್ಲಿ ನಾಗಠಾಣ ಶಾಸಕ ದೇವಾನಂದ್ ಚವಾಣ್ ಮಾತನಾಡಿ, "ನಮ್ಮ ಪಕ್ಷಕ್ಕೆ ಸೇರ್ಪಡೆಯಾದ ಶಿವಾನಂದ ಪಾಟೀಲ್ ಅವರಿಗೆ ಸ್ವಾಗತ. ಅವರಿಂದ ಪಕ್ಷಕ್ಕೆ ಒಳ್ಳೆಯದಾಗಲಿ" ಎಂದರು.
ಶಿವಾನಂದ ಪಾಟೀಲ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಸುನೀತಾ ಚವಾಣ್ ಸೇರಿದಂತೆ ಸಿಂದಗಿ ಕ್ಷೇತ್ರದ ಅನೇಕ ಹಿರಿಯ ಮುಖಂಡರು ಉಪಸ್ಥಿತರಿದ್ದರು.
ಜೆಡಿಎಸ್ ಗೆದ್ದಿತ್ತು; ಸಿಂದಗಿ ಕ್ಷೇತ್ರದಲ್ಲಿ 2018ರ ಚುನಾವಣೆಯಲ್ಲಿ ಜೆಡಿಎಸ್ ಗೆಲುವು ಸಾಧಿಸಿತ್ತು. ಎಂ. ಸಿ ಮನಗೂಳಿ ಗೆಲುವು ಸಾಧಿಸಿದ್ದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಎಚ್. ಡಿ. ಕುಮಾರಸ್ವಾಮಿ ಸಂಪುಟದಲ್ಲಿ ಸಚಿವರು ಸಹ ಆಗಿದ್ದರು.
ಕೋವಿಡ್ ಸೋಂಕು ತಗುಲಿದ ಬಳಿಕ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಉಸಿರಾಟದ ಸಮಸ್ಯೆ ಸಹ ಕಾಣಿಸಿಕೊಂಡಿತ್ತು. ಸುಮಾರು 15 ದಿನಗಳ ಕಾಲ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಆದರೆ 85 ವರ್ಷದ ಎಂ. ಸಿ. ಮನಗೂಳಿ 2021ರ ಜನರಿಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು.
ಎಂ. ಸಿ. ಮನಗೂಳಿ ನಿಧನದ ಬಳಿಕ ಅವರ ಪುತ್ರ ಅಶೋಕ ಮನಗೂಳಿ ಕಾಂಗ್ರೆಸ್ ಸೇರಿದರು. ಉಪ ಚುನಾವಣೆ ಎದುರಾದಾಗ ಜೆಡಿಎಸ್ ನಾಜಿಯಾ ಅಂಗಡಿಗೆ ಟಿಕೆಟ್ ನೀಡಿತು. ಎಚ್. ಡಿ. ದೇವೇಗೌಡರು ಕ್ಷೇತ್ರದಲ್ಲಿ ವಾಸ್ತವ್ಯ ಹೂಡಿ ಚುನಾವಣಾ ಪ್ರಚಾರ ನಡೆಸಿದರು.
ಉಪ ಚುನಾವಣೆಯಲ್ಲಿ ಅಶೋಕ ಮನಗೂಳಿ ಕಾಂಗ್ರೆಸ್‌ನಿಂದ, ನಾಜಿಯಾ ಅಂಗಡಿ ಜೆಡಿಎಸ್‌ನಿಂದ ಮತ್ತು ಬಿಜೆಪಿಯಿಂದ ರಮೇಶ ಭೂಸನೂರ ಅಭ್ಯರ್ಥಿಯಾದರು. ರಮೇಶ ಭೂಸನೂರ 31,088 ಮತಗಳಿಂದ ಜಯಗಳಿಸಿದರು.












Click it and Unblock the Notifications