ಸಿಂಧಗಿ; ಉಪ ಚನಾವಣೆಗೆ ಮುನ್ನ ಆಪರೇಷನ್ ಜೆಡಿಎಸ್!
ವಿಜಯಪುರ, ಮಾರ್ಚ್ 09: ಉಪ ಚುನಾವಣೆ ಎದುರಾಗಿರುವಾಗಲೇ ವಿಜಯಪುರ ಜಿಲ್ಲೆಯ ಸಿಂಧಗಿಯಲ್ಲಿ ಆಪರೇಷನ್ ಜೆಡಿಎಸ್ ನಡೆದಿದೆ. ಜೆಡಿಎಸ್ ಶಾಸಕ, ಮಾಜಿ ಸಚಿವ ದಿ. ಎಂ. ಸಿ. ಮನಗೂಳಿ ಪುತ್ರ ಪಕ್ಷ ತೊರೆಯುವುದಾಗಿ ಘೋಷಣೆ ಮಾಡಿದ್ದಾರೆ.
ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸಿಂಧಗಿ ಕ್ಷೇತ್ರದ ಜೆಡಿಎಸ್ ಶಾಸಕ ಎಂ. ಸಿ. ಮನಗೂಳಿ (85) ಜನವರಿ 28ರಂದು ವಿಧಿವಶರಾಗಿದ್ದರು. ಶಾಸಕರ ನಿಧನದಿಂದಾಗಿ ಸಿಂಧಗಿ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಗಿದೆ. ದಿನಾಂಕ ಇನ್ನೂ ಘೋಷಣೆಯಾಗಬೇಕಿದೆ.
ದಿ. ಎಂ. ಸಿ. ಮನಗೂಳಿ ಪುತ್ರ ಅಶೋಕ ಮನಗೂಳಿ ಉಪ ಚುನಾವಣೆ ಹತ್ತಿರವಾಗುತ್ತಿರುವಾಗಲೇ ಜೆಡಿಎಸ್ ಪಕ್ಷವನ್ನು ತೊರೆಯಲಿದ್ದಾರೆ. ಕಾಂಗ್ರೆಸ್ ಸೇರುವುದಾಗಿ ಅವರು ಘೋಷಣೆ ಮಾಡಿದ್ದು, ಮಂಗಳವಾರ ಸಂಜೆ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ.
ಈ ಬೆಳವಣಿಗೆಯಿಂದಾಗಿ ಜೆಡಿಎಸ್ ಪಕ್ಷಕ್ಕೆ ಭಾರೀ ಹಿನ್ನಡೆ ಉಂಟಾಗಿದೆ. ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್ ಸಿಂಧಗಿ ಉಪ ಚುನಾವಣೆ ತಯಾರಿಯನ್ನು ಆರಂಭಿಸಿವೆ. ಕ್ಷೇತ್ರವನ್ನು ಉಳಿಸಿಕೊಳ್ಳಲು ಜೆಡಿಎಸ್ ಯಾವ ತಂತ್ರ ರೂಪಿಸಲಿದೆ? ಎಂದು ಕಾದು ನೋಡಬೇಕಿದೆ.

ಬೆಂಬಲಿಗರ ಜೊತೆ ಸಭೆ
"ಒಂದು ವಾರದ ಬಳಿಕ ನಾನು ಬೆಂಬಲಿಗರು ಮತ್ತು ಕಾಂಗ್ರೆಸ್ ನಾಯಕರ ಜೊತೆ ಮಾತುಕತೆ ನಡೆಸುತ್ತೇನೆ. ಬಳಿಕ ಸಿಂಧಗಿಯಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗುತ್ತದೆ" ಎಂದು ಅಶೋಕ ಮನಗೂಳಿ ಹೇಳಿದ್ದಾರೆ. ಆದರೆ, ಇಂದೇ ಅವರು ಕಾಂಗ್ರೆಸ್ ಪಕ್ಷವನ್ನು ಸೇರಲಿದ್ದಾರೆ.

ಕಾಂಗ್ರೆಸ್ ಟಿಕೆಟ್ ಕೇಳಿಲ್ಲ
"ನಾನು ಕಾಂಗ್ರೆಸ್ ಪಕ್ಷದ ಟಕೆಟ್ ಕೇಳಿಲ್ಲ. ಟಿಕೆಟ್ ಯಾರಿಗೆ ಕೊಟ್ಟರೂ ನಾನು ಅವರ ಪರವಾಗಿ ಕೆಲಸ ಮಾಡುತ್ತೇನೆ. ನಾನು ಮೊದಲು ಕಾಂಗ್ರೆಸ್ ಪಕ್ಷದ ಸದಸ್ಯತ್ವ ತೆಗೆದುಕೊಳ್ಳುತ್ತೇನೆ" ಎಂದು ಅಶೋಕ ಮನಗೂಳಿ ಸ್ಪಷ್ಟಪಡಿಸಿದ್ದಾರೆ.

ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತರು
ಸಿಂಧಗಿ ಕ್ಷೇತ್ರದ ಶಾಸಕರಾಗಿದ್ದ ಮಲ್ಲಪ್ಪ ಚನ್ನವೀರಪ್ಪ ಮನಗೂಳಿ ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದರು. ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರಿಗೆ ಆಪ್ತರಾಗಿದ್ದರು. "ಜೀವ ಇರುವ ತನಕ ಜೆಡಿಎಸ್ ಪಕ್ಷ ಬಿಡುವುದಿಲ್ಲ" ಎಂದು ಅವರು ಹಲವು ಬಾರಿ ಹೇಳಿದ್ದರು. ಹಾಗೆಯೇ ನಡೆದುಕೊಂಡಿದ್ದರು. 2018ರ ಚುನಾವಣೆ ಬಳಿಕ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಬಂದಾಗ ಸಚಿವರಾಗಿದ್ದರು.
Recommended Video

ಕಾಂಗ್ರೆಸ್‌ಗೆ 3ನೇ ಸ್ಥಾನ
2018ರ ಚುನಾವಣೆಯಲ್ಲಿ ಸಿಂಧಗಿಯಲ್ಲಿ ಕಾಂಗ್ರೆಸ್‌ಗೆ 3ನೇ ಸ್ಥಾನ ಸಿಕ್ಕಿತ್ತು. ಪಕ್ಷದ ಅಭ್ಯರ್ಥಿಯಾಗಿದ್ದ ಸಾಲಿ ಮಲ್ಲಣ್ಣ ನಿಂಗಪ್ಪ 22,818 ಮತಗಳನ್ನು ಮಾತ್ರ ಪಡೆದಿದ್ದರು. ಈಗ ಉಪ ಚುನಾವಣೆ ಘೋಷಣೆಯಾಗಲಿದ್ದು, ಕಾಂಗ್ರೆಸ್ ಅಶೋಕ ಮನಗೂಳಿಗೆ ಟಿಕೆಟ್ ನೀಡಲಿದೆಯೇ? ಕಾದು ನೋಡಬೇಕಿದೆ.












Click it and Unblock the Notifications