Heart Attack: ನಾಟಕದ ವೇದಿಕೆಯಲ್ಲೇ ಹೃದಯಾಘಾತ, ಪೋಸ್ಟ್‌ಮ್ಯಾನ್ ಸಾವು
ವಿಜಯಪುರ, ಸೆಪ್ಟೆಂಬರ್ 15: ನಾಟಕ ಮಾಡುತ್ತಿರುವಾಗಲೇ ಪಾತ್ರಧಾರಿ ಹೃದಯಾಘಾತದಿಂದ ವೇದಿಕೆಯಲ್ಲೇ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆ ತಿಕೋಟ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ನಡೆದಿದೆ.
ಶರಣು ಬಾಗಲಕೋಟೆ (24) ಹೃದಯಾಘಾತದಿಂದ ಸಾವನ್ನಪ್ಪಿರುವ ವ್ಯಕ್ತಿ ಎಂದು ಗುರುತಿಸಲಾಗಿದೆ. ಶರಣು ಬಾಗಲಕೋಟೆಗೆ ಹೃದಯಾಘಾತವಾಗುತ್ತಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.

ಶರಣು ಬಾಗಲಕೋಟೆ ವೃತ್ತಿಯಲ್ಲಿ ಪೋಸ್ಟ್‌ಮ್ಯಾನ್ ಆಗಿದ್ದು, ಇತ್ತೀಚೆಗೆ ವೃತ್ತಿಗೆ ನೇಮಕಗೊಂಡಿದ್ದರು. ಗ್ರಾಮ ದೇವರ ಜಾತ್ರೆ ಹಿನ್ನೆಲೆಯಲ್ಲಿ ಕೋಟ್ಯಾಳದಲ್ಲಿ ನಾಟಕ ಹಮ್ಮಿಕೊಳ್ಳಲಾಗಿತ್ತು. ಹಳ್ಳಿ ಹುಲಿ ಕೊಟ್ಟ ಬೆಳ್ಳಿ ಕಾಲುಂಗುರ ನಾಟಕ ಪ್ರದರ್ಶನ ವೇಳೆ ಶರಣು ಬಾಗಲಕೋಟೆ ತಾನು ನೃತ್ಯ ಮಾಡುವುದಾಗಿ ವೇದಿಕೆ ಏರಿದ್ದರು. ಈ ವೇಳೆ ಶರಣು ಬಾಗಲಕೋಟೆ ಏಕಾಏಕಿ ಕುಸಿದು ಬಿದ್ದಿದ್ದು, ಹೃದಯಾಘಾತದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ: 9ಕ್ಕೂ ಹೆಚ್ಚು ಜನರಿಗೆ ಗಾಯ
ಬಳ್ಳಾರಿ: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಬಸ್ ಬಿದ್ದು 9ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಬಳ್ಳಾರಿ ತಾಲೂಕಿನ ಶಿವಪುರದ ಬಳಿ ನಡೆದಿದೆ.
ಬಳ್ಳಾರಿಯಿಂದ ಹಡ್ಲಗಿ ಗ್ರಾಮಕ್ಕೆ ತೆರಳುತ್ತಿದ್ದ ಸಾರಿಗೆ ಬಸ್‌ನ ಚಾಲಕನ ನಿಯಂತ್ರಣ ತಪ್ಪಿ ಬಸ್ ರಸ್ತೆ ಬದಿಯ ಗದ್ದೆಯಲ್ಲಿ ಪಲ್ಟಿಯಾಗಿ ಬಿದ್ದಿದೆ. ಬಸ್‌ನಲ್ಲಿ ಸುಮಾರು 50 ಕ್ಕೂ ಹೆಚ್ಚು ಜನರು ಪ್ರಯಾಣ ಮಾಡುತ್ತಿದ್ದು ಅದರಲ್ಲಿ 9 ಜನರಿಗೆ ಗಾಯವಾಗಿದೆ.
ಗಾಯಾಳುಗಳನ್ನು ಮೋಕಾ ಆಸ್ಪತ್ರೆ ಹಾಗೂ ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಮೋಕಾ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications