ವಿಜಯಪುರದ ಹೆದ್ದಾರಿಯೊಂದರಲ್ಲಿ ಮೊಸಳೆ ಕಂಡು ಬೆಚ್ಚಿಬಿದ್ದ ವಾಹನ ಸವಾರರು!
ಬೆಳಗಿನ ಜಾವ ವಿಜಯಪುರದ ಕೊಲ್ಹಾ ಪಟ್ಟಣ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಮೇಲೆ ಮೊಸಳೆಯೊಂದು ಪ್ರತ್ಯಕ್ಷವಾಗಿದೆ.
ವಿಜಯಪುರದ ಕೊಲ್ಹಾ ಪಟ್ಟಣ ಹೊರವಲಯದ ರಾಷ್ಟ್ರೀಯ ಹೆದ್ದಾರಿ 218ರ ಕೃಷ್ಣಾ ನದಿ ಸೇತುವೆ ಮೇಲೆ ಇಂದು ಬೆಳಗಿನ ಜಾವ ದೊಡ್ಡ ಮೊಸಳೆಯೊಂದು ಕಂಡುಬಂದಿದೆ. ವಾಹನ ಸವಾರರು ಬೃಹತ್ ಮೊಸಳೆ ಕಂಡು ವೆಚ್ಚಿಬಿದ್ದಿದ್ದಾರೆ.
ನಡುರಸ್ತೆಯಲ್ಲಿ ಪತ್ತೆಯಾದ ಮೊಸಳೆ ಬಾಯಿಗೆ ಹಗ್ಗ ಕಟ್ಟಿರುವುದು ಕಂಡುಬಂದಿದೆ. ಇದರ ಬಾಯಿಗೆ ಹಗ್ಗ ಕಟ್ಟಿದ್ದರಿಂದ ಆಹಾರ ಸೇವಿಸಲು ಸಾಧ್ಯವಾಗದೆ ರಸ್ತೆಗೆ ಬಂದಿರಬಹುದು ಎಂದು ಅನುಮಾನಿಸಲಾಗಿದೆ. ಅಲ್ಲದೇ ಜನವಸತಿ ಪ್ರದೇಶಕ್ಕೆ ನುಗ್ಗಿರುವಾಗ ಹಿಡಿದು ಹಗ್ಗ ಕಟ್ಟಿ ತಂದು ರಸ್ತೆ ಮೇಲೆ ಬಿಟ್ಟಿರಬಹುದು ಎಂದು ಕೂಡ ಶಂಕಿಸಲಾಗಿದೆ.

ಕೊಲ್ಹಾ ಪಟ್ಟಣ ಹೊರವಲಯದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಕೂಡಲೆ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಸ್ಥಳೀಯ ಯುವಕರ ಸಹಾಯದಿಂದ ಮೊಸಳೆಯನ್ನು ಹಗ್ಗದಿಂದ ರಸ್ತೆ ದಂಡೆಗೆ ಸರಿಸಿದ್ದಾರೆ. ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿ ಮೊಸಳೆಯನ್ನು ರಕ್ಷಿಸಿ ನದಿಗೆ ಬಿಟ್ಟಿದ್ದಾರೆ.












Click it and Unblock the Notifications