ವಿಜಯಪುರ : ಪ್ರೀತಿ ನಿರಾಕರಿಸಿದ್ದಕ್ಕೆ ಬೆಂಕಿ ಹಚ್ಚಿ ಅಪ್ರಾಪ್ತೆ ಹತ್ಯೆ
ವಿಜಯಪುರ, ಡಿಸೆಂಬರ್ 03 : ಅಪ್ರಾಪ್ತ ಬಾಲಕಿಗೆ ಬೆಂಕಿ ಹಚ್ಚಿ ಕೊಲೆ ಮಾಡಿರುವ ಧಾರುಣ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ತಿಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.
ಕೊಲೆಯಾದ ಬಾಲಕಿಯನ್ನು ರತ್ನಾಪುರ ಗ್ರಾಮದ ಪ್ರಾಜಕ್ತಾ ಬಲಭೀಮ ನರಳೆ (14) ಎಂದು ಗುರುತಿಸಲಾಗಿದೆ. ಶಂಕರ್ ಹಿಪ್ಪರಕರ, ಮೋಹನ್ ಎಡವೆ ಎಂಬ ಇಬ್ಬರು ಬಾಲಕಿ ಮನೆಗೆ ನುಗ್ಗಿ ಸೀಮೆಎಣ್ಣೆ ಸುರಿದು, ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ.
ಶಂಕರ್ ಹಿಪ್ಪರಕರ, ಮೋಹನ್ ಎಡವೆ ಪ್ರೀತಿಸುವಂತೆ ಬಾಲಕಿಯನ್ನು ಪೀಡಿಸುತ್ತಿದ್ದರು. ಆದರೆ, ಬಾಲಕಿ ಇದಕ್ಕೆ ನಿರಾಕರಿಸಿದ್ದಾಳೆ. ಶುಕ್ರವಾರ ಹೀಗೆ ಆಕೆಗೆ ಇಬ್ಬರೂ ಕಿರುಕುಳ ನೀಡಿದ್ದಾರೆ. ಮನೆಯಲ್ಲಿ ವಿಷಯ ತಿಳಿಸದಂತೆ ಬೆದರಿಕೆ ಹಾಕಿದ್ದರು.

ಶನಿವಾರ ಬಾಲಕಿ ಶಾಲೆಗೆ ಹೋಗಿರಲಿಲ್ಲ. ಪೋಷಕರು ಕೇಳಿದಾಗ ಶಂಕರ್ ಹಿಪ್ಪರಕರ, ಮೋಹನ್ ಎಡವೆ ಕಿರುಕುಳ ನೀಡುವ ವಿಚಾರ ಹೇಳಿದ್ದಳು. ಈ ವಿಷಯ ಆರೋಪಿಗಳಿಗೂ ತಿಳಿದಿತ್ತು.
ಭಾನುವಾರ ಸಂಜೆ ಯಾರೂ ಇಲ್ಲದ ಸಮಯದಲ್ಲಿ ಬಾಲಕಿ ಮನೆಗೆ ಬಂದ ದುಷ್ಕರ್ಮಿಗಳು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಆಕೆಯನ್ನು ಹತ್ಯೆ ಮಾಡಿ ಪರಾರಿಯಾಗಿದ್ದರು. ಸೋಮವಾರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಶಂಕರ್ ಹಿಪ್ಪರಕರ, ಮೋಹನ್ ಎಡವೆ ಇಬ್ಬರಿಗೂ ಮದುವೆಯಾಗಿತ್ತು. ಆದರೂ ಪ್ರೀತಿಸುವಂತೆ ಬಾಲಕಿಯನ್ನು ಪೀಡಿಸುತ್ತಿದ್ದರು. ತಿಕೋಟಾ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.












Click it and Unblock the Notifications