ಚುನಾವಣಾ ಕಣದಿಂದ ಹಿಂದೆ ಸರಿದು 'ಕೈ' ಹಿಡಿದ ಜೆಡಿಎಸ್ ಅಭ್ಯರ್ಥಿ: ಅಸ್ಪಷ್ಟತೆಯಲ್ಲಿ ಯತ್ನಾಳ್ ಭವಿಷ್ಯ? ಇನ್‌ಸೈಡ್ ಸ್ಟೋರಿ
ವಿಜಯಪುರ, ಮೇ 01: ವಿಜಯಪುರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಬಿ ಎಚ್ ಮಹಾಬರಿ ಚುನಾವಣಾ ಕಣದಿಂದ ನಿವೃತ್ತಿಯಾಗುವುದಾಗಿ ಘೋಷಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರೀಫ್ ಅವರಿಗೆ ತಮ್ಮ ಸಂಪೂರ್ಣ ಬೆಂಬಲವನ್ನು ನೀಡಲಿದ್ದೇನೆ ಎಂದು ಹೇಳಿದ್ದಾರೆ. ಇದು ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಸಂಕಷ್ಟ ತಂದೊಡ್ಡಿದೆ.
ಪಕ್ಷದ ಕಾರ್ಯಕರ್ತರೊಂದಿಗೆ ಸಮಾಲೋಚಿಸಿದ ನಂತರ ಮತ್ತು ಸಮುದಾಯದ ಸದಸ್ಯರ ಬೇಡಿಕೆಗಳನ್ನು ಆಧರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮಹಾಬರಿ ತಿಳಿಸಿದ್ದಾರೆ. ಈ ಭಾಗದಲ್ಲಿ ಜೆಡಿಎಸ್ ಬಲಿಷ್ಠ ಪಕ್ಷವಾಗಿ ಉಳಿದಿಲ್ಲ, ಹೀಗಾಗಿ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳನ್ನು ಗಂಭೀರವಾಗಿ ಎದುರಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಆದ್ದರಿಂದ ನಾನು ಚುನಾವಣಾ ಕಣದಿಂದ ನಿವೃತ್ತಿಯಾಗಿದ್ದೇನೆ. ಇದೇ ವೇಳೆ, ಕಾಂಗ್ರೆಸ್ ಅಭ್ಯರ್ಥಿ ಮುಶ್ರೀಫ್ ಅವರನ್ನು ಬೆಂಬಲಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದು ಮಹಾಬರಿ ಹೇಳಿದ್ದಾರೆ.
ಹೆಚ್ ಡಿ ಕುಮಾರಸ್ವಾಮಿ ಇತ್ತೀಚೆಗೆ ಸಭೆಯೊಂದರಲ್ಲಿ ಪ್ರಬಲ ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸುತ್ತಿರುವ ಜೆಡಿಎಸ್ ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿಯುವಂತೆ ಮತ್ತು ಅಲ್ಪಸಂಖ್ಯಾತರ ಮತಗಳು ಎರಡು ಪಕ್ಷಗಳ ನಡುವೆ ವಿಭಜನೆಯಾಗದಂತೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಸೂಚಿಸಿದ್ದಾರೆ ಎಂದು ಮಹಾಬರಿ ತಿಳಿಸಿದ್ದಾರೆ. ಅದರಂತೆ ನಾನು ಚುನಾವಣಾ ಕಣದಿಂದ ನಿವೃತ್ತಿ ಹೊಂದಿ ಕಾಂಗ್ರೆಸ್‌ಗೆ ಬೆಂಬಲ ನೀಡುತ್ತೇನೆ ಎಂದಿದ್ದಾರೆ.
ವಿಜಯಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಬಲ
ಜೆಡಿಎಸ್‌ನ ಬಿ ಎಚ್ ಮಹಾಬರಿ ಅವರು ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರೀಫ್ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿಜಯಪುರ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಬಲ ಬಂದಂತಾಗಿದೆ. ವಿಜಯಪುರ ನಗರದಲ್ಲಿ ಬರೋಬ್ಬರಿ ಶೇ 32ರಷ್ಟು ಮುಸ್ಲಿಮರಿದ್ದಾರೆ.

ಚುನಾವಣಾ ಕಣದಿಂದ ಹಿಂದೆ ಸರಿದಿರುವ ಬಿ ಎಚ್ ಮಹಾಬರಿ ಅವರು ಮುಸ್ಲಿಮ್ ಸಮುದಾಯಕ್ಕೆ ಸೇರಿದವರು. ಈ ಹಿನ್ನೆಲೆಯಲ್ಲಿ ನೋಡುವುದಾದರೆ, ಮುಸ್ಲಿಮರ ಮತಗಳು ವಿಭಜನೆಯಾಗದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ತಡೆದಿವೆ ಎನ್ನಲಾಗಿದೆ. ಲಿಂಗಾಯರು ಹಾಗೂ ಎಸ್ಸಿಗಳು ಮತಗಳೂ ಈ ಕ್ಷೇತ್ರದಲ್ಲಿ ಹೆಚ್ಚಾಗಿದೆ. ವಿಜಯಪುರದಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬ ಕಾರಣಕ್ಕೆ ಕಳೆದ ನಾಲ್ಕಾರು ದಶಕಗಳಿಂದ ಕಾಂಗ್ರೆಸ್ ಇಲ್ಲಿ ಮುಸ್ಲಿಂ ಸಮುದಾಯಕ್ಕೆ ಅಭ್ಯರ್ಥಿಗೆ ಟಿಕೆಟ್ ನೀಡುತ್ತಿದೆ.
ಕಳೆದ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿ ಎಸ್‌ಕೆ ಬೆಳ್ಳುಬ್ಬಿ ಅವರು ಸ್ಪರ್ಧಿಸಿದ್ದರು. ಅವರು ಕೇವಲ ಎರಡು ಸಾವಿರ ಮತಗಳನ್ನು ತೆಗೆದುಕೊಳ್ಳುವಲ್ಲಿ ಸಫಲರಾಗಿದ್ದರು. ಬಿಜೆಪಿಯಿಂದ ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ( ಯತ್ನಾಳ) ಅವರು ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಅವರಿಗೆ 76308 ಮತಗಳು ಬಂದಿದ್ದವು. ಸೋಲು ಕಂಡಿದ್ದ ಕಾಂಗ್ರೆಸ್ ಅಬ್ದುಲ್ ಹಮೀದ್ ಮುಸ್ರೀಫ್ ಅವರಿಗೆ 69895 ಮತಗಳು ಬಂದಿದ್ದವು. ಈ ಬಾರಿಯೂ ಇವರಿಬ್ಬರ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ.
ಜೆಡಿಎಸ್ ಅಭ್ಯರ್ಥಿ ಮಹಾಬರಿ ಅವರ ಬೆಂಬಲದಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ಬಲ ಬಂದಿದೆ ಎಂಬ ಮಾತುಗಳು ಕೇಳಿಬಂದಿವೆ. ಹಿಂದುತ್ವವಾದಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಅವರ ಗೆಲುವು ಮಾತ್ರ ಅಸ್ಪಷ್ಟತೆಯ ಹಾದಿಯಲ್ಲಿಯೇ ಇದೆ ಎನ್ನಬಹುದು.












Click it and Unblock the Notifications