ವಿಜಯಪುರ; ಮುಸ್ಲಿಂ ಯುವತಿ ಪ್ರೀತಿಸುತ್ತಿದ್ದ ಹಿಂದೂ ಯುವಕನ ಹತ್ಯೆ
ವಿಜಯಪುರ, ಅಕ್ಟೋಬರ್ 24; ವಿಜಯಪುರದಲ್ಲಿ ಮರ್ಯಾದಾ ಹತ್ಯೆ ಪ್ರಕರಣ ನಡೆದಿರುವ ಶಂಕೆ ವ್ಯಕ್ತವಾಗಿದೆ. ಮುಸ್ಲಿಂ ಯುವತಿಯನ್ನು ಪ್ರೀತಿಸುತ್ತಿದ್ದ ಹಿಂದೂ ಯುವಕನ ಹತ್ಯ ನಡೆದಿದ್ದು, ಬಾವಿಯಲ್ಲಿ ಶವ ಸಿಕ್ಕಿದೆ.
ಮೃತಪಟ್ಟ ಯುವಕನನ್ನು ಆಲಮೇಲ ತಾಲೂಕಿನ ಬಳಗಾನೂರ ಗ್ರಾಮದ ರವಿ ನಿಂಬರಗಿ (34) ಎಂದು ಗುರುತಿಸಲಾಗಿದೆ. ಅಕ್ಟೋಬರ್ 21ರಂದು ನಾಪತ್ತೆಯಾಗಿದ್ದ ರವಿ ಶವ ಹೊಲದ ಬಾವಿಯಲ್ಲಿ ಅಕ್ಟೋಬರ್ 23ರಂದು ಪತ್ತೆಯಾಗಿದೆ.
ಅಕ್ಟೋಬರ್ 21ರಂದು ದಿನಸಿ ತರಲು ಮನೆಯಿಂದ ಹೊರ ಹೋಗಿದ್ದ ರವಿ ನಿಂಬರಗಿ ನಾಪತ್ತೆಯಾಗಿದ್ದ. ರವಿ ಪ್ರೀತಿಸುತ್ತಿದ್ದ ಯುವತಿ 24 ವರ್ಷದ ಅಮ್ರಿನ್ ಪೊಲೀಸ್ ಸಹಾಯವಾಣಿಗೆ 112ಕ್ಕೆ ಕರೆ ಮಾಡಿದ್ದಳು.

ರವಿಯನ್ನು ಎತ್ತಿಕೊಂಡು ಹೋಗಿ ಹೊಡೆಯುತ್ತಿದ್ದಾರೆ. ಆತನ ಜೀವಕ್ಕೆ ಅಪಾಯವಿದೆ ಎಂದು ಸಹಾಯವಾಣಿಗೆ ಕರೆ ಮಾಡಿದಾಗ ಮಾಹಿತಿ ನೀಡಿದ್ದಳು. ಅಕ್ಟೋಬರ್ 23ರಂದು ರವಿ ಶವ ಬಾವಿಯಲ್ಲಿ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.
ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್. ಡಿ. ಆನಂದ್ ಕುಮಾರ್ ಈ ಘಟನೆ ಕುರಿತು ಮಾತನಾಡಿದ್ದು, "ರವಿ ನಿಂಬರದಿ ತಮ್ಮದೇ ಗ್ರಾಮದ ಅಮ್ರಿನ್ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. ಇಬ್ಬರು ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಯುವತಿ ತಂದೆ, ತಾಯಿ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು. ಪ್ರೇಮಿಗಳಿಗೆ ಎಚ್ಚರಿಕೆಯನ್ನು ನೀಡಿದ್ದರು" ಎಂದರು.
ಯುವತಿ ಸಹಾಯವಾಣಿಗೆ ಕರೆ ಮಾಡಿದ ಮಾಹಿತಿ ಅನ್ವಯ ದೂರು ದಾಖಲಿಸಿಕೊಳ್ಳಲಾಗಿದೆ. ಯುವತಿಯ ಮನೆಯವರು ನಾಪತ್ತೆಯಾಗಿದ್ದರು. ಆರೋಪಿಗಳನ್ನು ಪತ್ತೆ ಹಚ್ಚಲು ಮೂರು ತಂಡ ರಚನೆ ಮಾಡಲಾಗಿತ್ತು. ಯುವತಿಯ ಮಾವ ಮತ್ತು ಸಹೋದರನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ವಿಚಾರಣೆ ವೇಳೆ ರವಿ ನಿಂಬರಗಿ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಅಮ್ರಿನ್ ಜೀವಕ್ಕೆ ಸಹ ಅಪಾಯವಿದ್ದು, ಆಕೆಗೆ ಸಾಂತ್ವನ ಕೇಂದ್ರದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ಹತ್ಯೆಯಲ್ಲಿ ಇನ್ನು ಯಾರು ಭಾಗಿಯಾಗಿದ್ದಾರೆ? ಎಂಬ ಮಾಹಿತಿ ಇನ್ನೂ ಸಿಗಬೇಕಿದೆ.
ಹಿಂದೂ ಸಂಘಟನೆಗಳ ಖಂಡನೆ; ರವಿ ನಿಂಬರಗಿ ಹತ್ಯೆ ಪ್ರಕರಣವನ್ನು ಬಜರಂಗದಳ ಮತ್ತು ವಿಶ್ವಹಿಂದೂ ಪರಿಷತ್ ಖಂಡಿಸಿವೆ. ಎಲ್ಲಾ ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸಬೇಕು ಎಂದು ಒತ್ತಾಯಿಸಿವೆ. ಆರೋಪಿಗಳನ್ನು ಬಂಧಿಸದಿದ್ದರೆ ವಿಜಯಪುರ ಬಂದ್‌ಗೆ ಕರೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಹತ್ಯೆ; ಅನ್ಯಕೋವಿನ ಯುವತಿಯನ್ನು ಪ್ರೀತಿಸುತ್ತಿದ್ದ ಯುವಕನನ್ನು ಹತ್ಯೆ ಮಾಡಿದ ಪ್ರಕರಣ ಬೆಳಗಾವಿಯಲ್ಲಿಯೂ ಕಳೆದ ತಿಂಗಳು ನಡೆದಿತ್ತು. ಸೆಪ್ಟೆಂಬರ್ 28ರಂದು ರೈಲ್ವೆ ಹಳಿ ಮೇಲೆ ಅರ್ಬಾಜ್ ಮುಲ್ಲಾ (24) ಶವ ಪತ್ತೆಯಾಗಿತ್ತು.
ಮೊದಲು ರೈಲ್ವೆ ಪೊಲೀಸರು ಇದು ಆತ್ಮಹತ್ಯೆ ಪ್ರಕರಣ ಎಂದು ಶಂಕಿಸಿದ್ದರು. ಆದರೆ ಅರ್ಬಾಜ್ ಮುಲ್ಲಾ ತಂದೆ-ತಾಯಿ ಇದು ಕೊಲೆ ಎಂದು ಆರೋಪಿಸಿದ್ದರು. ಬಳಿಕ ರೈಲ್ವೆ ಪೊಲೀಸರು ಪ್ರಕರಣವನ್ನು ಬೈಲಹೊಂಗಲ ಪೊಲೀಸರಿಗೆ ವರ್ಗಾವಣೆ ಮಾಡಿದ್ದರು.
ಖಾನಾಪುರದಲ್ಲಿ ರೈಲ್ವೆ ಹಳಿ ಮೇಲೆ ಅರ್ಬಾಜ್ ಮುಲ್ಲಾ ಶವ ಪತ್ತೆಯಾಗಿತ್ತು. ಮೂರು ವಿಶೇಷ ತಂಡಗಳನ್ನು ರಚನೆ ಮಾಡಿಕೊಂಡು ತನಿಖೆ ನಡೆಸಿದ ಪೊಲೀಸರು 10 ಆರೋಪಿಗಳನ್ನು ಬಂಧಿಸಿದ್ದರು.
ಅನ್ಯ ಕೋವಿನ ಯುವತಿಯನ್ನು ಮೃತ ಅರ್ಬಾಜ್ ಮುಲ್ಲಾ ಪ್ರೀತಿಸುತ್ತಿದ್ದ. ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದ ಯುವತಿ ಪೋಷಕರು ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ್ದರು.
ಅರ್ಬಾಜ್ ಮುಲ್ಲಾ (24) ಹತ್ಯೆ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು. ಅರ್ಬಾಜ್ ತಾಯಿ ನೀಡಿದ ದೂರಿನ ಅನ್ವಯ ಪೊಲೀಸರು ತನಿಖೆ ಕೈಗೊಂಡಿದ್ದರು. ಬಂಧಿತ ಆರೋಪಿಯಲ್ಲಿ ಶ್ರೀರಾಮ ಸೇನೆಯ ಮುಖಂಡನೊಬ್ಬ ಸಹ ಸೇರಿದ್ದಾನೆ.
ಅನ್ಯ ಕೋವಿನ ಯುವತಿಯನ್ನು ಅರ್ಬಾಜ್ ಮುಲ್ಲಾ ಪ್ರೀತಿಸುತ್ತಿದ್ದ ವಿಚಾರ ಎರಡು ಕುಟುಂಬಗಳಿಗೆ ತಿಳಿದಿತ್ತು. ಯುವತಿ ಮನೆಯಲ್ಲಿ ದೊಡ್ಡ ಗಲಾಟೆಯಾಗಿತ್ತು. ಯುವತಿ ಸ್ನೇಹ ಬಿಡುವಂತೆ ಅರ್ಬಾಜ್‌ಗೆ ಎಚ್ಚರಿಕೆ ಸಹ ನೀಡಲಾಗಿತ್ತು. ಆದರೆ ಇಬ್ಬರು ಮತ್ತೆ ಮತ್ತೆ ಭೇಟಿಯಾಗುತ್ತಿದ್ದರು.












Click it and Unblock the Notifications