Breaking: ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ: ಬಿರುಸಿನ ಸಿದ್ಧತೆ, 174 ಅಭ್ಯರ್ಥಿಗಳ ಭವಿಷ್ಯ ತೀರ್ಮಾನ
ವಿಜಯಪುರ, ಅಕ್ಟೋಬರ್ 27: ಕಳೆದ ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಅಕ್ಟೋಬರ್ 28(ನಾಳೆ) ಶುಕ್ರವಾರ ನಡೆಯಲಿದೆ. ಕರ್ನಾಟಕ ಚುನಾವಣಾ ಆಯೋಗ 35 ವಾರ್ಡ್‌ಗಳಿಗೆ ಚುನಾವಣೆ ನಡೆಸಲಿದೆ.
ಶುಕ್ರವಾರ ಪಾಲಿಕೆ ಚುನಾವಣೆ ಹಿನ್ನಲೆಯಲ್ಲಿ ಮತದಾನಕ್ಕೆ ಮತಗಟ್ಟೆಗಳನ್ನು ಸ್ಥಾಪಿಸಿರುವ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಶಾಲೆಗಳಿಗಲ್ಲದೆ ಪಾಲಿಕೆ ವ್ಯಾಪ್ತಿಯಲ್ಲಿನ ಸರಕಾರಿ ಕಚೇರಿ, ಸರಕಾರಿ ಸಂಸ್ಥೆಗಳು, ಅನುದಾನಿತ ಹಾಗೂ ಅನುದಾನರಹಿತ ವಿದ್ಯಾಸಂಸ್ಥೆಗಳು, ರಾಷ್ಟ್ರೀಕೃತ ಹಾಗೂ ಇತರೆ ಬ್ಯಾಂಕುಗಳಿಗೆ, ಕೇಂದ್ರ ಹಾಗೂ ರಾಜ್ಯ ಸರಕಾರದ ಕಾರ್ಖಾನೆಗಳು, ಉಳಿದ ಕೈಗಾರಿಕಾ ಸಂಸ್ಥೆಗಳು ಹಾಗೂ ಸಹಕಾರಿ ರಂಗದ ಸಂಘ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುವ ಅರ್ಹ ಮತದಾನ ನೌಕರರಿಗೆ ಅಕ್ಟೋಬರ್ 28ರಂದು ವೇತನ ಸಹಿತ ರಜೆ ಘೋಷಣೆ ಮಾಡಲಾಗಿದೆ.
ಸಿ.ಟಿ ರವಿ ಅಕ್ರಮ ಆಸ್ತಿಗಳ ಬಗ್ಗೆ ಸಿಡಿ ಸಮೇತ ದಾಖಲೆ ಬಿಡುಗಡೆ ಮಾಡುತ್ತೇನೆ: ಎಂ ಲಕ್ಷ್ಮಣ್
ಈಗಾಗಲೇ ನಗರದಲ್ಲಿ ಮಹಾನಗರ ಪಾಲಿಕೆಯ ಚುನಾವಣೆ ಭರಾಟೆ ನಡೆದಿದ್ದು, ಬುಧವಾರ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಆಡಳಿತ ಪಕ್ಷ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಮಧ್ಯೆ ಪಾಲಿಕೆಯ ಆಧಿಕಾರಕ್ಕೆ ನೇರ ಸ್ಪರ್ಧೆ ಏರ್ಪಟ್ಟಿದ್ದರೂ ಸಹ ಜೆಡಿಎಸ್, ಎಎಪಿ ಹಾಗೂ ಎಐಎಂಐಎಂ ಪಕ್ಷಗಳೂ ಸಹ ಪಾಲಿಕೆ ಅಧಿಕಾರ ಹಿಡಿಯುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ.
ಬಿಜೆಪಿ ಎಂದಿನಂತೆ ತನ್ನ ಹಿಂದುತ್ವ ಹಾಗೂ ಅಭಿವೃದ್ದಿ ಹೆಸರಲ್ಲಿ ಮತಯಾಚನೆ ಮಾಡಿದ್ದರೆ, ಕೈ ಬಳಗ ಬಿಜೆಪಿ ಆಡಳಿತ ವಿರೋಧಿ ಅಸ್ತ್ರವನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸಿದೆ.
ಕಾಂಗ್ರೆಸ್ 35, ಬಿಜೆಪಿ 33 ಸ್ಥಾನಗಳಲ್ಲಿ ಸ್ಪರ್ಧೆ
ಪಾಲಿಕೆಯ 35 ವಾರ್ಡ್‌ಗಳ ಪೈಕಿ ಬಿಜೆಪಿ 33 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸುತ್ತಿದೆ. ಮುಸ್ಲಿಂ ಮತದಾರರು ಹೆಚ್ಚಾಗಿರುವ 20 ಹಾಗೂ 27ನೇ ವಾರ್ಡ್‌ನಲ್ಲಿ ಸ್ಪರ್ಧಿಸುತ್ತಿಲ್ಲ. ಇನ್ನು ಕಾಂಗ್ರೆಸ್ ಎಲ್ಲಾ 35 ಕ್ಷೇತ್ರಗಳಲ್ಲೂ ಸ್ಪರ್ಧಿಸುತ್ತಿದೆ. ಜೆಡಿಎಸ್ 20, ಎಎಪಿ 15, ಎಐಎಂಐಎಂ 4, ಜನತಾ ಪಕ್ಷ 3, ಕೆಆರ್‌ಎಸ್ 3 ಸ್ಥಾನ, ಎಸ್‌ಡಿಪಿಐ 2 ಹಾಗೂ ಬಿಎಸ್‌ಪಿ 1ರಲ್ಲಿ ಹಾಗೂ 58 ಅಭ್ಯರ್ಥಿಗಳು ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದಾರೆ.

ಚುನಾವಣೆಗೆ ಸಕಲ ಸಿದ್ಧತೆ
ಶುಕ್ರವಾರ ಮತದಾನಕ್ಕೆ ಜಿಲ್ಲಾ ಚುನಾವಣಾ ಆಯೋಗ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ಒಟ್ಟು 303 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಈ ಮತಗಟ್ಟೆಗಳ ಪೈಕಿ 48 ಅತೀ ಸೂಕ್ಷ್ಮ, 83 ಸೂಕ್ಷ್ಮ, 172 ಸಾಧಾರಣ ಮತಗಟ್ಟೆಗಳು ಎಂದು ಗುರುತಿಸಲಾಗಿದೆ. 1,46,736 ಪುರುಷರು, 1,47,327 ಮಹಿಳೆಯರು ಹಾಗೂ 110 ಇತರೆ ಮತದಾರರು ಮತದಾನದ ಹಕ್ಕನ್ನು ಪಡೆದಿದ್ದಾರೆ.