ಲಾಕ್ ಡೌನ್ ಉಲ್ಲಂಘನೆ: ವಿನೂತನ ಶಿಕ್ಷೆ ನೀಡುತ್ತಿರುವ ಪೊಲೀಸರು
ವಿಜಯಪುರ, ಮಾರ್ಚ್ 30: ಲಾಕ್ ಡೌನ್ ಇದ್ದರೂ, ಜನರನ್ನು ಸಂಪೂರ್ಣವಾಗಿ ಹೊರಗೆ ಬರದಂತೇ ತಡೆಯಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಲಾಠಿ ಬೀಸಿದ್ದಕ್ಕೆ ವಿರೋಧ ವ್ಯಕ್ತವಾದ ನಂತರ, ತಿಳಿಹೇಳುವ, ಬುದ್ದಿ ಹೇಳುವ, ಬಸ್ಕಿ ಹೊಡೆಸುವ ಕೆಲಸಕ್ಕೂ ಪೊಲೀಸರು ಮುಂದಾದರು. ಅದಕ್ಕೂ ಜಗ್ಗದಾಗ, ಕೈಮುಗಿಯುವುದು, ಗುಲಾಬಿ ಕೊಟ್ಟು ಪ್ರಯತ್ನ ಮಾಡಿದರು. ಆದರೂ, ಅದು ಸರಿಯಾಗಿ ವರ್ಕೌಟ್ ಆಗುತ್ತಿಲ್ಲ.
ಇದೆಲ್ಲಾ ಪ್ರಯತ್ನದ ನಂತರ ವಿಜಯಪುರ ಪೊಲೀಸರು ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಅದು, ಅಲ್ಲಿನ ಯುವ ಸಮುದಾಯದಲ್ಲಿ ಸಂಚಲನ ಮೂಡಿಸಿದೆ.

ಮನೆಯಿಂದ ವಿನಾ ಕಾರಣ ಹೊರ ಬರುವ ಯುವಕರನ್ನು ತಡೆದು ನಿಲ್ಲಿಸುತ್ತಿರುವ ಪೊಲೀಸರು, "ನಾನು ಸಮಾಜದ ವಿರೋಧಿ, ಲಾಕ್ ಡೌನ್ ಉಲ್ಲಂಘಿಸಿದ್ದೇನೆ" ಎನ್ನುವ ಸೀಲನ್ನು, ಲಾಕ್ ಡೌನ್ ಉಲ್ಲಂಘಿಸುವವರ ಹಣೆಗೆ ಒತ್ತಿಒತ್ತಿ ಕಳುಹಿಸುತ್ತಿದ್ದಾರೆ.
ನಗರದ ಗಾಂಧಿ ಚೌಕ್ ನಲ್ಲಿ ಈ ಹೊಸ ಪ್ರಯತ್ನ ಮಾಡುತ್ತಿರುವ ಪೊಲೀಸರು, ಹಣೆಗೆ ಸೀಲ್ ಹಾಕಿದ ಮೇಲೆ, ಎಚ್ಚರಿಕೆ ಕೊಟ್ಟು, ಬಿಟ್ಟು ಕಳುಹಿಸುತ್ತಿದ್ದಾರೆ. ಇದು, ಯಾವರೀತಿ ವರ್ಕೌಟ್ ಆಗುತ್ತದೆ ಎಂದು ಒಂದೆರಡು ದಿನಗಳಲ್ಲಿ ಗೊತ್ತಾಗಲಿದೆ.
ಈ ನಡುವೆ, ಕೊರೊನಾ ಅಟ್ಟಹಾಸ ವಿಶ್ವಾದ್ಯಂತ ಮುಂದುವರಿದಿದೆ. ಈ ಸೋಂಕಿನಿಂದಾಗಿ ಸ್ಪೇನ್ ನಲ್ಲಿ ಕಳೆದ 24 ಗಂಟೆಯಲ್ಲಿ 812 ಜನರು ಮೃತಪಟ್ಟಿದ್ದಾರೆ. ಇದುವರೆಗೂ ಆ ದೇಶದಲ್ಲಿ ಮೃತಪಟ್ಟವರ ಸಂಖ್ಯೆ 7,340 ಆಗಿದೆ.












Click it and Unblock the Notifications