ಟಿಪ್ಪು ಜಯಂತಿಯಲ್ಲಿ ಅದನ್ನ ಸ್ವೀಕರಿಸಿದ್ರಾ ಹಿಂದೂ ಹುಲಿ ಯತ್ನಾಳ್? ಎಂಬಿ ಪಾಟೀಲ್ ಅಚ್ಚರಿ ಹೇಳಿಕೆ
ವಿಜಯಪುರ, ಡಿಸೆಂಬರ್, 26: ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡನೇ ಟಿಪ್ಪು ಸುಲ್ತಾನ್ ಎಂಬ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಎಂ.ಬಿ.ಪಾಟೀಲ್ ಅವರು, ಶಾಸಕ ಯತ್ನಾಳ ಮೂರನೇ ಟಿಪ್ಪು ಸುಲ್ತಾನ್ ಎಂದು ತಿರುಗೇಟು ನೀಡಿದರು.
ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಯತ್ನಾಳ ಅವರನ್ನು ಸನ್ಮಾನಿಸಿದ ಚಿತ್ರಗಳಿವೆ. ಸಾಮಾಜಿಕ ಜಾಲತಾಣಗಳಲ್ಲಿ ಅವು ಹರಿದಾಡುತ್ತಿವೆ. ಶಾಸಕ ಯತ್ನಾಳ ಮೂರನೇ ಟಿಪ್ಪು ಸುಲ್ತಾನ್ ಎಂದು ವಾಗ್ದಾಳಿ ನಡೆಸಿದರು.

ಬ್ರಿಟೀಷರ ವಿರುದ್ಧ ಹೋರಾಡಿದ್ದು BJP, RSSನವರಲ್ಲ
ಟಿಪ್ಪು ಸುಲ್ತಾನ್ ಬ್ರಿಟೀಷರ ವಿರುದ್ಧ ಹೋರಾಡಿದ್ದು ಸತ್ಯ. ಆ ಇತಿಹಾಸವನ್ನು ಅಳಿಸಿ ಹಾಕಲು ಯಾರಿಂದಲೂ ಸಾಧ್ಯವಿಲ್ಲ. ಆದರೆ, ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿ, ಆರ್‌ಎಸ್‌ಎಸ್ ಸಂಘಟನೆಯವರ ಪಾತ್ರ ಇಲ್ಲ. ಅವರೆಲ್ಲರೂ ಬ್ರಿಟೀಷರ ಪರ ಇದ್ದರು ಎಂದರು ಅಂತಾ ಪ್ರಜಾವಾಣಿ ವರದಿ ಮಾಡಿದೆ. ಇನ್ನು ಶಾಲೆ-ಕಾಲೇಜುಗಳಲ್ಲಿ ಜಾತಿ, ಧರ್ಮದ ವಿಷಯ ಬರಬಾರದು. ಹಿಜಾಬ್ ಗದ್ದಲ ಬರುವ ಮುಂಚೆ ಶಾಲೆ-ಕಾಲೇಜು ಹೇಗಿದ್ದವೋ ಹಾಗೆಯೇ ಇರಲಿ ಎಂದರು.
ಶಿವಾನಂದ ಪಾಟೀಲ್ ವಿರುದ್ಧ ರೊಚ್ಚಿಗೆದ್ದ ಕಬ್ಬು ಬೆಳೆಗಾರರು
ರೈತರು ಸಾಲಮನ್ನಾ ಆಗಲಿ ಎಂದು ಬರಗಾಲ ಬರಲಿ ಎಂದು ಬಯಸುತ್ತಾರೆ ಎಂಬ ಸಚಿವ ಶಿವಾನಂದ ಪಾಟೀಲ್ ಹೇಳಿಕೆ ವಿರುದ್ಧ ಚಾಮರಾಜನಗರದಲ್ಲಿ ಕಬ್ಬು ಬೆಳೆಗಾರರು ಪ್ರತಿಭಟಿಸಿ ಆಕ್ರೋಶ ಹೊರಹಾಕಿದರು.
ಚಾಮರಾಜನಗರದ ಜಿಲ್ಲಾಡಳಿತ ಭವನದ ಎದುರು ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಅಧಿಕಾರಕ್ಕೆ ಬಂದರೆ ಸಾಲಮನ್ನಾ ಮಾಡುತ್ತೇವೆ ಎಂದು ರಾಹುಲ್ ಗಾಂಧಿ ಚುನಾವಣಾ ಭಾಷಣಗಳಲ್ಲಿ ಹೇಳಿದ್ದಾರೆ. ಸಚಿವ ಶಿವಾನಂದ ಪಾಟೀಲ್ ಅವರು ಸಾಲಮನ್ನಾದ ಬಗ್ಗೆ ರೈತರ ಕುರಿತು ಹಗುರವಾಗಿ ಹೇಳಿಕೆ ಕೊಡುತ್ತಿದ್ದು, ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸಚಿವ ಪಾಟೀಲ್ ಭಾವಚಿತ್ರವನ್ನು ದಹಿಸಲು ಮುಂದಾದ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ, ಪಟ್ಟು ಬಿಡದ ರೈತರು ಭಾವಚಿತ್ರವನ್ನು ಹರಿದು ಆಕ್ರೋಶ ಹೊರಹಾಕಿದರು.
ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಅನ್ನ ತಿನ್ನುವ ನಾಲಿಗೆಯಾಗಿದ್ದರೇ ರೈತ ವಿರೋಧಿ ಹೇಳಿಕೆ ಕೊಡುತ್ತಿರಲಿಲ್ಲ. ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೃಷಿ ಸಾಲದ ಬಡ್ಡಿ ಮನ್ನಾ ಮಾಡಿದ ವೇಳೆ ನೀವೇನೂ ಸತ್ತು ಹೋಗಿದ್ರಾ, ಆಗ ಮಾತನಾಡಬೇಕಿತ್ತು. ರೈತರ ಸಾಲಮನ್ನಾ ಮಾಡಲಾಗಲ್ಲ ಎಂದು ಹೇಳಬೇಕಿತ್ತು. ಆಗ ಏನು ನಿಮ್ಮನ್ನು ಗಿರವಿ ಇಡಲಾಗಿತ್ತಾ? ಪ್ರಶನಿಸುವ ಮೂಲಕ ಆಕ್ರೋಶ ಹೊರಹಾಕಿದರು.
ರೈತರ ಆತ್ಮಹತ್ಯೆ ಬಗ್ಗೆ ಈ ಹಿಂದೆ ಮಾತನಾಡಿದ್ದಾಗ ಬುದ್ಧಿ ಕಲಿಸಿದ್ದೆವು. ಈಗ ಮತ್ತೇ ಬಾಲ ಬಿಚ್ಚಿದ್ದಾರೆ, ಶಿವಾನಂದ ಪಾಟೀಲ್ ಅವರ ಬಾಲವನ್ನು ಕತ್ತರಿಸುತ್ತೇವೆ ಎಂದು ಕಿಡಿಕಾರಿದರು. ಇನ್ನು ಸಚಿವ ಶಿವಾನಂದ ಪಾಟೀಲ ಅವರನ್ನು ಸಾರ್ವಜನಿಕವಾಗಿ ಓಡಾಡಲು ಬಿಡುವುದಿಲ್ಲ, ಚಾಮರಾಜನಗರಕ್ಕೆ ಬಂದರೆ ಮಸಿ ಬಳಿಯುತ್ತೇವೆ ಎಂದು ಎಚ್ಚರಿಕೆ ಕೊಟ್ಟರು.












Click it and Unblock the Notifications