ಅನುಪಮಾ ಶೆಣೈ ಪಕ್ಷಕ್ಕೆ 'ಬೆಂಡೆಕಾಯಿ' ಅಧಿಕೃತ ಚಿಹ್ನೆ
ವಿಜಯಪುರ, ಮಾರ್ಚ್ 18: ಕೂಡ್ಲಿಗಿಯ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ನೇತೃತ್ವದ ಭಾರತೀಯ ಜನಶಕ್ತಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತ ಚಿಹ್ನೆ ಲಭಿಸಿದೆ. ಚುನಾವಣಾ ಆಯೋಗ ನೀಡಿರುವ 'ಬೆಂಡೆಕಾಯಿ' ಚಿಹ್ನೆಯನ್ನು ಇಂದು ಬಸವನಬಾಗೇವಾಡಿಯಲ್ಲಿ ಪ್ರದರ್ಶಿಸಲಾಯಿತು.
ಬಸವನ ಬಾಗೇವಾಡಿಯಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ಈ ಬಾರಿ ಚುನಾವಣೆಯಲ್ಲಿ ತಾವು ಕಾಪು ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಕಾರ್ಯಕರ್ತರು ಬಳ್ಳಾರಿ ಜಿಲ್ಲೆಯಲ್ಲಿ ಸ್ಪರ್ಧೆ ಮಾಡುವಂತೆ ಒತ್ತಾಯಿಸಿದ್ದಾರೆ. ಆದರೆ ನಾನು ಈ ಬಗ್ಗೆ ನಿರ್ಧಾರ ಮಾಡಿಲ್ಲ ಎಂದು ಅನುಪಮಾ ಶೆಣೈ ಹೇಳಿದರು.

ಯಾವ ಚಿಹ್ನೆಗಾಗಿ ಬೇಡಿಕೆ ?: ಪೆನ್ನು, ತೆಂಗಿನಕಾಯಿ, ಮೇಣಸಿನಕಾಯಿ, ದೋಣಿ, ಬೆಂಡೆಕಾಯಿ ಮತ್ತು ಮನುಷ್ಯ ಸೇರಿದಂತೆ 10 ಲಭ್ಯ ಗುರುತುಗಳನ್ನು ಚುನಾವಣಾ ಆಯೋಗಕ್ಕೆ ಕಳುಹಿಸಲಾಗಿತ್ತು. ಈ ಪೈಕಿ ಬೆಂಡೆಕಾಯಿ ಆಯ್ಕೆ ಮಾಡಿ, ಸೂಚಿಸಲಾಗಿದೆ.
ಯುಗಾದಿ ಹಬ್ಬದ ದಿನದಂದು ಬಸವನಬಾಗೇವಾಡಿಯ ಬಸವ ಸ್ಮಾರಕದ ಬಳಿ ನಡೆದ ಸಮಾರಂಭದಲ್ಲಿ ನೂತನ ಚಿಹ್ನೆ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಮಹಾದೇವಪ್ಪ ಉದ್ಗಾವಿ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

ಮೊದಲ ಹಂತದಲ್ಲಿ 80 ಕ್ಷೇತ್ರಗಳನ್ನು ಪ್ರಮುಖವಾಗಿ ಪರಿಗಣಿಸಿದ್ದೇವೆ, ಎಲ್ಲಾ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಗಳನ್ನು ಕಣಕ್ಕಿಳಿಸುವ ಇರಾದೆ ಇದೆ. ನಾನು ಕೆಲಸ ಮಾಡುವ ಸಂದರ್ಭದಲ್ಲಿ ನನ್ನ ಮೇಲೆ ರಾಜಕೀಯ ಪ್ರಯೋಗ ಮಾಡಿದರು. ಹಾಗಾಗಿ ರಾಜಕೀಯ ಪ್ರವೇಶ ಮಾಡಬೇಕಾಯಿತು. ಇದರ ಹಿನ್ನಲೆಯಲ್ಲಿ ರಾಜಕೀಯದಲ್ಲಿ ಪೊಲೀಸ್ ಶಕ್ತಿಯನ್ನು ಬಳಸಿ ಭ್ರಷ್ಟಾಚಾರವನ್ನ ನಿರ್ಮೂಲನೆ ಮಾಡಲು ಇಚ್ಛಿಸುತ್ತೇನೆ. ಸಂವಿಧಾನಕ್ಕೆ ಹೆಚ್ಚು ಒತ್ತುಕೊಟ್ಟು ಜನರಿಗೆ ಮತ್ತು ಸರ್ಕಾರಿ ನೌಕರರಿಗೆ ನೆಮ್ಮದಿ ಜೀವನ ನೀಡುವುದು ನಮ್ಮ ಮುಖ್ಯ ಗುರಿ ಎಂದರು.












Click it and Unblock the Notifications