Udupi: ಮನೆಗೆ ನುಗ್ಗಿ ಗುಂಡಿಕ್ಕಿ ಯುವಕನ ಹತ್ಯೆ: ಬೆಚ್ಚಿಬಿದ್ದ ಬ್ರಹ್ಮಾವರ
ಉಡುಪಿ, ಮಾರ್ಚ್ 03: ವೈಯಕ್ತಿಕ ದ್ವೇಷಕ್ಕೆ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಮಾಸುವ ಮುನ್ನವೇ ಉಡುಪಿ ಜಿಲ್ಲೆಯಲ್ಲಿ ಮತ್ತೊಂದು ಭೀಕರ ಕೃತ್ಯ ನಡೆದಿದೆ. ಮಾರ್ಚ್ 02ರ ಶನಿವಾರ ರಾತ್ರಿ ನಡೆದ ಘಟನೆಗೆ ಉಡುಪಿ ಜಿಲ್ಲೆಯ ಜನ ಬೆಚ್ಚಿಬಿದ್ದಿದ್ದಾರೆ.
ಮನೆಗೆ ನುಗ್ಗಿ ಯುವಕನನ್ನು ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ಬ್ರಹ್ಮಾವರ ತಾಲೂಕಿನ ಹನೆಹಳ್ಳಿಯಲ್ಲಿ ನಡೆದಿದೆ. ಕೃಷ್ಣ (36) ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ.

ಹನೆಹಳ್ಳಿಯಲ್ಲಿ ಮೃತ ಕೃಷ್ಣ ಮನೆಯಲ್ಲಿ ಏಕಾಂಗಿಯಾಗಿ ವಾಸವಾಗಿದ್ದನು ಆತ ಮಣಿಪಾಲದಲ್ಲಿ ಕೆಲಸ ಮಾಡುತ್ತಿದ್ದನು ಎನ್ನುವ ಪ್ರಾಥಮಿಕ ಮಾಹಿತಿಯನ್ನು ಸ್ಥಳೀಯ ನಿವಾಸಿಗಳು ನೀಡಿದ್ದಾರೆ.
ಕೃಷ್ಣ ಎಂದಿನಂತೆ ಶನಿವಾರ ರಾತ್ರಿ ಮನೆಗೆ ಬಂದು ಊಟ ಮಾಡುವಾಗ ಏಕಾಏಕಿ ನುಗ್ಗಿದ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಶನಿವಾರ ರಾತ್ರಿ 9:30ರ ಸುಮಾರಿಗೆ ಫೈರಿಂಗ್ ಶಬ್ದ ಕೇಳಿ ಬಂದಿದೆ. ನಾವು ಮೊದಲು ಪಟಾಕಿಯ ಶಬ್ದವೆಂದು ಸುಮ್ಮನಾದೆವು ಎಂದು ನೆರೆಹೊರೆಯವರು ತಿಳಿಸಿದ್ದಾರೆ.
ಇಂದು(ಮಾರ್ಚ್ 03) ಕೃಷ್ಣ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ. ಘಟನಾ ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ ಹಾಗೂ ಬ್ರಹ್ಮಾವರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಪ್ರಕರಣ ದಾಖಲಾಗಿದ್ದು, ಬ್ರಹ್ಮಾವರ ಪೊಲೀಸರು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಉತ್ತರ ಕನ್ನಡದಲ್ಲಿ ಮಂಗನ ಕಾಯಿಲೆಗೆ ಮತ್ತೊಂದು ಬಲಿ
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆಯಿಂದ ಮತ್ತೊಂದು ವ್ಯಕ್ತಿ ಸಾವನ್ನಪ್ಪಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಹತ್ತರಗಿ ನವಿಲಗಾರ ಗ್ರಾಮದ ವೃದ್ಧ ರಾಮಚಂದ್ರ ಗೌಡ (68) ಮೃತ ದುರ್ದೈವಿ. ಉಡುಪಿಯ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಮಚಂದ್ರ ಗೌಡ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಮೂಲಕ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ ಬಲಿಯಾದವರ ಸಂಖ್ಯೆ ಮೂರಕ್ಕೇರಿದೆ. ಜಿಲ್ಲೆಯಲ್ಲಿ ಈವರೆಗೆ 47 ಜನರಿಗೆ ಮಂಗನ ಕಾಯಿಲೆ ಸೋಂಕು ತಗುಲಿದೆ.












Click it and Unblock the Notifications