ಕುಂದಗನ್ನಡಿಗರಿಗೆ ಗುಡ್‌ನ್ಯೂಸ್: ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಗೆ ದಿನಾಂಕ ಫಿಕ್ಸ್..!
ಬೆಂಗಳೂರು, ಜುಲೈ 08: ಬೆಂಗಳೂರಿನಲ್ಲಿ ನೆಲೆಸಿರುವ ಕುಂದಾಪುರ ಭಾಗದವರು ಬಹಳ ಕಾತುರತೆಯಿಂದ ಕಾಯುತ್ತಿದ್ದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಗೆ ದಿನಾಂಕ ನಿಗದಿಯಾಗಿದೆ. ಕರಾವಳಿಯ ಕುಂದಗನ್ನಡಿಗರು ತಮ್ಮ ಭಾಷೆ-ಬದುಕಿನ ಮೇಲಿನ ಅಭಿಮಾನದಿಂದ ಪ್ರತಿವರ್ಷ 'ವಿಶ್ವ ಕುಂದಾಪ್ರ/ಕುಂದಾಪುರ ಕನ್ನಡ ದಿನ'ವನ್ನು ಆಚರಣೆ ಮಾಡುತ್ತಿದ್ದು, ಈ ಬಾರಿ ಮತ್ತಷ್ಟು ಅದ್ಧೂರಿಯಾಗಿ ನಡೆಯಲಿದೆ.
ಈ ವರ್ಷ ಕುಂದಾಪುರ ಕನ್ನಡ ದಿನಾಚರಣೆಯು ಬೆಂಗಳೂರಿನ ಅರಮನೆ ಮೈದಾನದಲ್ಲಿ ಎರಡು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ. ರಾಜಧಾನಿ ಬೆಂಗಳೂರಿನಲ್ಲಿ ಕುಂದಗನ್ನಡ ಲೋಕವನ್ನು ಭರ್ಜರಿಯಾಗಿ ಅನಾವರಣಗೊಳಿಸುವ ಈ ಕಾರ್ಯಕ್ರಮ ಆಗಸ್ಟ್ 17 ಮತ್ತು 18ರಂದು ಅರಮನೆ ಮೈದಾನದ ವೈಟ್ ಪೆಟಲ್ಸ್‌ನಲ್ಲಿ ನಡೆಯಲಿದೆ.

'ಕುಂದಾಪ್ರ ಕನ್ನಡ ಪ್ರತಿಷ್ಠಾನ, ಬೆಂಗಳೂರು' ಮೂಲಕ ಆಯೋಜನೆ ಆಗುತ್ತಿರುವ ಈ ಆಚರಣೆಯ ದಿನ-ಸ್ಥಳ ಘೋಷಣೆ ಕುರಿತು ಬೆಂಗಳೂರಿನ ಸುದೀಕ್ಷಾ ಕನ್ವೆನ್ಷನ್ ಹಾಲ್‌ನಲ್ಲಿ ಜು. 7ರಂದು ಹಮ್ಮಿಕೊಂಡಿದ್ದ 'ವಾಲ್ಗ' ಕಾರ್ಯಕ್ರಮದಲ್ಲಿ ವಿವರಗಳನ್ನು ನೀಡಲಾಯಿತು. ಇದು ಐದನೇ ವಿಶ್ವ ಕುಂದಾಪುರ ಕನ್ನಡ ದಿನಾಚರಣೆ ಆಗಿದ್ದು, ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ.
ಕಳೆದ ನಾಲ್ಕು ಕುಂದಾಪ್ರ ಕನ್ನಡ ಹಬ್ಬಗಳು ವಿಜಯನಗರದ ಬಂಟರ ಸಂಘದಲ್ಲಿ ಆಗಿದ್ದವು. ಆದರೆ ಅದಕ್ಕೆ ಬೃಹತ್ ಜನಸ್ತೋಮ ಹರಿದುಬಂದಿದ್ದು ಸುಮಾರು ಶೇ. 70 ಜನರಿಗೆ ಬಂಟರ ಸಂಘಕ್ಕೆ ಪ್ರವೇಶಿಸಲೂ ಸಹ ಆಗಿರಲಿಲ್ಲ. ಹೀಗಾಗಿ ಈ ವರ್ಷ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದೆ, ಈ ಬಾರಿ ಇನ್ನೂ ದೊಡ್ಡ ಪ್ರಮಾಣದಲ್ಲಿ ಜನರು ಸೇರಲಿದ್ದಾರೆ ಎಂದು ಕುಂದಾಪ್ರ ಕನ್ನಡ ಪ್ರತಿಷ್ಠಾನದ ಅಧ್ಯಕ್ಷ ದೀಪಕ್ ಶೆಟ್ಟಿ ಬಾರ್ಕೂರು ತಿಳಿಸಿದರು.
ಬೃಹತ್ ಮೆರವಣಿಗೆ
ಎರಡು ದಿನಗಳ ಈ ಕಾರ್ಯಕ್ರಮ 'ದಿಬ್ಣ'ದೊಂದಿಗೆ ಆರಂಭವಾಗಲಿದೆ. ಅದರಲ್ಲಿ ಬೆಂಗಳೂರಿನ ಕನಿಷ್ಠ 10 ಕಡೆಗಳಿಂದ ಜನರು ಮೆರವಣಿಗೆ ಮೂಲಕ ಕಾರ್ಯಕ್ರಮ ಸ್ಥಳಕ್ಕೆ ಆಗಮಿಸಲಿದ್ದಾರೆ. 'ನಾಕ್ ಘನಾ ಸುರ್ಲ್' ಎಂಬ ಕರಾವಳಿಯ ಅದ್ಭುತ ಗೀತೆಗಳ ಗಾಯನವಿರಲಿದೆ. ನಂತರ 'ನುಡಿ ಚಾವಡಿ' ಎಂಬ ಕಾರ್ಯಕ್ರಮದ ಮೂಲಕ ಉದ್ಘಾಟನಾ ಸಮಾರಂಭ ನಡೆಯಲಿದೆ.
ಅ.17ರ ರಾತ್ರಿ ಬೆಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ 'ಜೋಡಾಟ' ನಡೆಯಲಿದೆ. ರಾಜ್ಯದ ಯಕ್ಷರಂಗದ ಮೇರು ಕಲಾವಿದರು ಭಾಗವಹಿಸಲಿರುವ ಈ ಯಕ್ಷಗಾನಕ್ಕೇ 15-20 ಸಾವಿರ ಜನರು ಸೇರುವ ನಿರೀಕ್ಷೆ ಇದೆ ಎಂದು ದೀಪಕ್ ಶೆಟ್ಟಿ ವಿವರಿಸಿದರು. ಮಾತ್ರವಲ್ಲದೆ, ಕನ್ನಡ ಚಿತ್ರರಂಗದ ಸ್ಟಾರ್ ನಟ-ನಿರ್ದೇಶಕರು ಸೇರಿದಂತೆ ಹಲವು ತಾರೆಯರು ಕೂಡ ಭಾಗಿ ಆಗಲಿರುವುದರಿಂದ ಈ ಸಂಭ್ರಮಕ್ಕೆ ತಾರಾ ಕಳೆ ಇರಲಿದೆ ಎಂದರು.
ಏನಿದು ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ?
ಆಸಾಡಿ ಅಮಾಸಿ/ ಆಟಿ ಅಮಾವಾಸ್ಯೆ (ಕರ್ಕಾಟಕ ಅಮಾವಾಸ್ಯೆ) ದಿನ ಕರಾವಳಿಗರಿಗೆ ಅತ್ಯಂತ ವಿಶೇಷವಾದದ್ದು. ಕಳೆದ ಐದು ವರ್ಷಗಳಿಂದ ಪ್ರತಿ ವರ್ಷ ಈ ಕರ್ಕಾಟಕ ಅಮಾವಾಸ್ಯೆ ದಿನವನ್ನು ವಿಶ್ವ ಕುಂದಾಪ್ರ ಕನ್ನಡ ದಿನ ಎಂದು ಆಚರಣೆ ಮಾಡಲಾಗುತ್ತಿದ್ದು, ಈ ಸಲ ಆಗಸ್ಟ್ 04ರಂದು ಆಷಾಢ ಅಮಾವಾಸ್ಯೆ ಬಂದಿದೆ. ಅದು ವಾರದ ದಿನವಾದ್ದರಿಂದ, ಆಯೋಜನೆ ಹಾಗೂ ಆಗಮಿಸುವ ಅತಿಥಿ ಗಣ್ಯರ ಅನುಕೂಲದ ದೃಷ್ಟಿಯಿಂದ ಬೆಂಗಳೂರಿನಲ್ಲಿ ಆಗಸ್ಟ್ 17, 18ರಂದು ವಿಶ್ವ ಕುಂದಾಪುರ ಕನ್ನಡ ದಿನವನ್ನು ಕುಂದಾಪ್ರ ಕನ್ನಡ ಹಬ್ಬವಾಗಿ ಆಚರಿಸಲಾಗುತ್ತಿದೆ. ಕುಂದಾಪ್ರ ಕನ್ನಡ ಹಬ್ಬವು ಹಲವು ಸಾಂಸ್ಕೃತಿಕ ಸಡಗರಗಳಿಗೆ ಇದು ವೇದಿಕೆ ಆಗಲಿದ್ದು, ಕುಂದಾಪ್ರ ಕನ್ನಡ ಭಾಷೆಯ ಸೊಬಗನ್ನು ಪಸರಿಸಲಿದೆ.












Click it and Unblock the Notifications