ವರುಣನ ಅಬ್ಬರಕ್ಕೆ ನಲುಗಿದ ಉಡುಪಿ: ಗುಡ್ಡ ಕುಸಿದು ಮಹಿಳೆ ಸಾವು..ಕೋಟ್ಯಂತರ ರೂ ಆಸ್ತಿ ನಷ್ಟ
ಉಡುಪಿ, ಜುಲೈ 04: ರಾಜ್ಯದ ಹಲವೆಡೆ ಮಳೆಯ ಆರ್ಭಟ ಜೋರಾಗಿದ್ದು, ವರುಣನ ಅಬ್ಬರಕ್ಕೆ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಉಡುಪಿ ಜಿಲ್ಲೆಯಲ್ಲೂ ಕಳೆದ ಒಂದು ವಾರದಿಂದ ನಿರಂತರ ಮಳೆಯಾಗುತ್ತಿದ್ದು, ಮಳೆಯ ಅವಾಂತರಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಗ್ರಾಮದ ಸೊಸೈಟಿ ಗುಡ್ಡೆ ಎಂಬಲ್ಲಿ ಮಹಿಳೆಯೊಬ್ಬರು ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿ ಉಸುರುಗಟ್ಟಿ ಸಾವನ್ನಪ್ಪಿದ್ದಾರೆ. ಹಳ್ಳಿ ಬೇರು ನಿವಾಸಿ ಅಂಬಾ (45) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳೀಯರ ಸಹಾಯದಿಂದ ಮಹಿಳೆಯ ಮೃತದೇಹವನ್ನು ಹೊರ ತೆಗೆಯಲಾಗಿದೆ.

ಗಾಳಿ ಮಳೆಗೆ ತತ್ತರಿಸಿದ ರಟ್ಟಾಡಿ: ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ನಷ್ಟ
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ವ್ಯಾಪ್ತಿಗೆ ಬರುವ ಅಮಾವಾಸೆಬೈಲಿನ ರಟ್ಟಾಡಿ ಗ್ರಾಮ ನಿನ್ನೆ ಸಂಭವಿಸಿದ ಭಾರೀ ಗಾಳಿ ಮಳೆಗೆ ತತ್ತರಿಸಿ ಹೋಗಿದೆ. ನೂರಾರು ವರ್ಷಗಳಿಂದ ಬೆಳೆದು ನಿಂತ ಮರಗಳು, ಕೃಷಿಗಾಗಿ ಬೆಳೆಸಿದ ಅಡಿಕೆ ಮರಗಳು, ವಾಣಿಜ್ಯ ಬೆಳೆಗಳು, ತೆಂಗು ಹಲಸು ಮಾವು ಗೇರು ಮರಗಳು ನೆಲಸಮವಾಗಿದೆ.
ಬಿರುಗಾಳಿಗೆ ಕುಂದಾಪುರ ತಾಲೂಕಿನ ಅಮಾಸೆಬೈಲಿನ ರಟ್ಟಾಡಿ ಗ್ರಾಮದ ಬಾಲಕೃಷ್ಣ ನಡಬೂರು ಇವರ 50 ಅಡಿಕೆ ಮರ ಹಾನಿಗೊಂಡಿದ್ದರೆ, ರಾಜೀವ ನಡಬೂರು ಇವರ 100ಕ್ಕೂ ಅಧಿಕ ಅಡಿಕೆ ಮರ ತುಂಡಾಗಿ ನೆಲಕ್ಕುರುಳಿದೆ. ಯಲ್ಲ ನಡಬೂರು ಇವರ 50 ಅಡಿಕೆ ಮರ, ಅಮಾಸೆಬೈಲು ಗ್ರಾಮದ ಕುರುಬಲಮಕ್ಕಿಯ ದ್ಯಾವ ಪೂಜಾರಿ ಇವರ 70 ಅಡಿಕೆ ಮರ ಹಾಗೂ ಎರಡು ತೆಂಗಿನನ ಮರ ತುಂಡಾಗಿ ನೆಲಕ್ಕೆ ಉರುಳಿದೆ.
ಅಮಾಸೆಬೈಲು ಜಡ್ಕಿನಗದ್ದೆ ಬಸವ ಪೂಜಾರಿ ಇವರ 60 ಅಡಿಕೆ ಮರ, ಎರಡು ತೆಂಗಿನ ಮರಗಳು ಹಾಗೂ ಅಮಾಸೆ ಬೈಲು ಹೆದ್ದಾರಿಗದ್ದೆಯ ತೇಜ ಕುಲಾಲರ 40ಕ್ಕೂ ಅಧಿಕ ಅಡಿಕೆ ಮರಗಳಿಗೆ ಸಂಪೂರ್ಣ ಹಾನಿಯಾಗಿದೆ. ರಟ್ಟಾಡಿ ಗ್ರಾಮದ ಮಹಾಬಲ ಕಾನ್‌ಬೈಲು ಇವರ ಮನೆಯ ಮಾಡಿನ ತಗಡು ಹಾಗೂ ಸಿಮೆಂಟ್ ಶೀಟುಗಳು ಹಾರಿಹೋಗಿವೆ.

ರಟ್ಟಾಡಿಯ ನರಸಿಂಹ ನಡಬೂರು ಇವರ ನಿರ್ಮಾಣ ಹಂತದ ದನದ ಕೊಟ್ಟಿಗೆ ಮೇಲ್ಚಾವಣಿಯ ಹೆಂಚು ಹಾಗೂ ಶೀಟುಗಳು ಹಾರಿಹೋಗಿವೆ. ಹುಂತ್ರಿಕೆಯ ವಸಂತ ಶೆಟ್ಟಿ ಅವರ 70 ಅಡಿಕೆ ಮರ, ಕತ್ಕೋಡು ನಾಗರಾಜ ಪ.ಜಾತಿ ಇವರ ಮನೆಯ ಮೇಲೆ ತೆಂಗಿನ ಮರ ಹಾಗೂ ಸಾಗುವಾನಿ ಮರ ಬಿದ್ದು ಮನೆ ಸಂಪೂರ್ಣ ಹಾನಿಯಾಗಿದೆ.
ರಟ್ಟಾಡಿ ತೆಂಕಮಕ್ಕಿಯ ಗೋವಿಂದ ಪೂಜಾರಿ ಅವರ 140 ಅಡಿಕೆ ಮರ, ಮನೆ ಹಾಗೂ ದನದ ಕೊಟ್ಟಿಗೆಗೆ ಹಾನಿಯಾಗಿದೆ. ರೇಖಾನಾಥ ರೈ ಅವರು 400 ಅಡಿಕೆ ಮರಗಳು, ತೆಂಕೂರು ಗಣೇಶ ಶೆಟ್ಟಿ ಇವರ 200 ಅಡಿಕೆ ಮರ ಹಾಗೂ ಪಂಪುಸೆಟ್ ಶೆಡ್‌ಗೆ ಹಾನಿಯಾಗಿದೆ. ರಾಕೇಶ್ ಶೆಟ್ಟಿ ಇವರ 150 ಅಡಿಕೆ ಮರ ಧರಾಶಾಹಿಯಾಗಿವೆ. ಹೊರ್ಲಿಜೆಡ್ಡಿನ ಬಾಲಕೃಷ್ಣ ಶೆಟ್ಟಿ ಇವರ 1000 ಅಡಿಕೆ ಮರ, 15 ತೆಂಗಿನ ಮರ, 5 ಹಲಸಿನ ಮರ, 8ಮಾವಿನ ಮರ, 50ಗೇರುಮರ ಹಾಗೂ 50 ರಬ್ಬರ್ ಮರ ಸೇರಿ ತೋಟಕ್ಕೆ ಸಂಪೂರ್ಣ ಹಾನಿಯಾಗಿದೆ.
ತೆಂಕೂರು ಮಹೇಶ್ಚಂದ್ರ ಶೆಟ್ಟಿ ಇವರ 250 ಅಡಿಕೆ ಮರ, 25 ತೆಂಗಿನ ಮರ, ಪಂಪುಸೆಟ್ ಶೆಡ್ ಹಾನಿಯಾಗಿದ್ದರೆ, ಚಂದ್ರಶೇಖರ ಶೆಟ್ಟಿ ಇವರ 250 ಅಡಿಕೆ ಮರ ಹಾಗೂ ವಾಸದ ಮನೆಗೆ ಭಾಗಶ: ಹಾನಿಯಾಗಿದೆ. ಹೀಗೆ ಪಟ್ಟಿ ಮಾಡುತ್ತಾ ಹೋದರೆ ಸುಮಾರು 5,000ಕ್ಕೂ ಅಧಿಕ ಅಡಿಕೆ ಮರಗಳು ಇನ್ನಿತರ ಅಪಾರ ಬೆಳೆ ಬಾಳುವ ಮರಗಳು ಮನೆ ಕೊಟ್ಟಿಗೆ ಹೀಗೆ ಸುಮಾರು ಒಂದು ಕೋಟಿಗೂ ಅಧಿಕ ಮೊತ್ತದ ವಸ್ತುಗಳು ಈ ಬಾರಿಯ ಮಳೆಗೆ ನಾಶವಾಗಿದೆ ಎಂದು ತಿಳಿದುಬಂದಿದೆ.












Click it and Unblock the Notifications