Udupi: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ: ಜಾಮೀನು ಅರ್ಜಿ ಸಲ್ಲಿಸಿದ ಆರೋಪಿ
ಉಡುಪಿ, ಡಿಸೆಂಬರ್ 16: ದೀಪಾವಳಿ ದಿನವೇ ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ಕೊಂದಿದ್ದ ಆರೋಪಿ ಪರ ಜಾಮೀನು ಕೋರಿ ಅರ್ಜಿ ಸಲ್ಲಿಸಲಾಗಿದೆ. ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣದ ಆರೋಪಿ ಪ್ರವೀಣ್ ಚೌಗುಲೆ ಸದ್ಯ ಪರಪ್ಪನ ಅಗ್ರಹಾರದಲ್ಲಿದ್ದು, ಈತನ ಪರವಾಗಿ ಉಡುಪಿಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಜಾಮೀನು ಕೋರಿ ಅರ್ಜಿ ಸಲ್ಲಿಸಲಾಗಿದೆ.
ಆರೋಪಿ ಪ್ರವೀಣ್ ಚೌಗುಲೆ ನ್ಯಾಯಾಂಗ ಬಂಧನವನ್ನು ಕೋರ್ಟ್ ಡಿಸೆಂಬರ್ 18ರ ವರೆಗೆ ವಿಸ್ತರಿಸಿದ್ದು, ಈ ನಡುವೆಯೇ ಆರೋಪಿ ಪರ ವಕೀಲರಾದ ಕೆ.ಎಸ್.ಎನ್ ರಾಜೇಶ್ ಎನ್ನುವವರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಜಾಮೀನು ಅರ್ಜಿಗೆ ಡಿಸೆಂಬರ್ 20ರಂದು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.

ಪ್ರಕರಣದ ಹಿನ್ನೆಲೆ ಏನು..?
2023ರ ನವೆಂಬರ್ 12 ನಾಡಿನಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದ್ದರೆ, ಉಡುಪಿಯಲ್ಲಿ ನಾಲ್ವರ ಸಾವಿನಿಂದ ರಕ್ತದ ಕೋಡಿ ಹರಿದಿತ್ತು. ಒಂದು ಸಂಬಂಧದ ಬಿರುಕಿನಿಂದ ಒಬ್ಬನ ಕೋಪದಿಂದ ನಾಲ್ವರ ಪ್ರಾಣಪಕ್ಷಿ ಹಾರಿ ಹೋಗಿತ್ತು. ದೀಪಾವಳಿ ಹಬ್ಬದ ದಿನ ಉಡುಪಿ ಜಿಲ್ಲೆಯ ನೇಜಾರಿನ ಮನೆಗೆ ನುಗ್ಗಿದ ಹಂತಕ ತಾಯಿ ಹಸೀನಾ (46) ಆಕೆಯ ಮಕ್ಕಳಾದ ಅಫ್ನಾನ್ (23), ಅಯ್ನಾಜ್ (21), ಮತ್ತು ಅಸೀಮ್ (14) ದುಷ್ಕರ್ಮಿಯ ಇರಿದು ಸ್ಥಳದಿಂದ ಪರಾರಿಯಾಗಿದ್ದ. ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದರೆ. ಹಾಜಿರಾ (70) ಎನ್ನುವವರು ಗಂಭೀರ ಗಾಯಗೊಂಡಿದ್ದರು. ಪ್ರಕರಣ ಸಂಬಂಧ ಆರೋಪಿ ಪ್ರವೀಣ್ ಚೌಗುಲೆಯನ್ನು ಬಂಧಿಸಲಾಗಿತ್ತು.
ಕೊಲೆ ಮಾಡಿ ಆರೋಪಿ ಉಡುಪಿಯಿಂದ ಪರಾರಿಯಾಗಿದ್ದ ಆರೋಪಿ ಬೆಳಗಾವಿಯ ಕುಡಚಿಯ ಸಂಬಂಧಿ ಮನೆಯಲ್ಲಿ ತಲೆ ಮರೆಸಿಕೊಂಡಿದ್ದ ಇತ್ತ ಪ್ರಕರಣ ದಾಖಲಾಗುತ್ತಿದ್ದಂತೆ ತನಿಖೆ ಆರಂಭಿಸಿದ ಪೊಲೀಸರು ಆತನ ಮೊಬೈಲ್ ಟವರ್ ಲೊಕೇಶನ್ ಆಧರಿಸಿ ಬಂಧಿಸಿದ್ದರು.
ಮಹಾರಾಷ್ಟ್ರ ಸಾಂಗ್ಲಿ ಮೂಲದವನಾದ ಆರೋಪಿ ಪ್ರವೀಣ್ ಅರುಣ್ ಚೌಗಲೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಕ್ರೂ ಆಗಿದ್ದ. ಹಾಗೂ ಹಿಂದೆ ಪೊಲೀಸ್ ವೃತ್ತಿಯನ್ನು ಕೂಡ ಮಾಡಿದ್ದ. ಮಹಾರಾಷ್ಟ್ರದ ಪುಣೆಯಲ್ಲಿ ಪೊಲೀಸ್ ಆಗಿದ್ದ ಪ್ರವೀಣ್ ಕೆಲಸಕ್ಕೆ ಸೇರಿದ ಮೂರು ತಿಂಗಳಲ್ಲಿ ರಾಜೀನಾಮೆ ನೀಡಿ ಏರ್ ಇಂಡಿಯಾ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ. ಕಳೆದ 10 ವರ್ಷದಿಂದ ಏರ್ ಇಂಡಿಯಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ.
ಕೊಲೆಗೆ ಕಾರಣವೇನು..?
ಆರೋಪಿ ಪ್ರವೀಣ್ ಹಾಗೂ ಕೊಲೆಯಾದ ಆಯ್ನಾಜ್ ಇಬ್ಬರೂ ಏರ್ ಇಂಡಿಯಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರ ಮಧ್ಯೆ ಮೊದಲು ಉತ್ತಮ ಸ್ನೇಹವಿದ್ದು, ಕೊನೆಗೆ ಅಯ್ನಾಜ್ ಆತನಿಂದ ದೂರವಾಗಿ ಆತನಿಂದ ಅಂತರ ಕಾಯ್ದುಕೊಂಡಿದ್ದಳು. ಇದರಿಂದ ಕೋಪಗೊಂಡಿದ್ದ ಪ್ರವೀಣ್ ಆಕೆಯ ಮನೆಗೆ ನುಗ್ಗಿ ಕೊಲೆಗೆ ಯತ್ನಿಸಿದ್ದಾನೆ. ಈ ವೇಳೆ ಆಕೆಯನ್ನು ಕಾಪಾಡಲು ಬಂದ ತಾಯಿ, ತಂಗಿ ಹಾಗೂ ತಮ್ಮನಿಗೆ ಚಾಕು ಇರಿದು ಕೊಲೆ ಮಾಡಿ ಪರಾರಿಯಾಗಿದ್ದ. ಪ್ರಕರಣ ದಾಖಲಾಗುತ್ತಿದ್ದಂತೆ ತನಿಖೆಗಿಳಿದ ಉಡುಪಿ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದರು.












Click it and Unblock the Notifications