ದೀಪಾವಳಿ ದಿನದಂದೇ ಉಡುಪಿಯಲ್ಲಿ ರಕ್ತಪಾತ: ಏರ್ ಇಂಡಿಯಾ ಮಹಿಳಾ ಸಿಬ್ಬಂದಿ ಸೇರಿ ನಾಲ್ವರನ್ನು ಕೊಂದಿದ್ಯಾಕೆ ಹಂತಕ?
ಉಡುಪಿ, ನವೆಂಬರ್ 13: ನಿನ್ನೆ ಭಾನುವಾರ ನಾಡಿನಾದ್ಯಂತ ದೀಪಾವಳಿ ಆಚರಣೆ ಸಂಭ್ರಮ ಮನೆ ಮಾಡಿದ್ದರೆ, ಉಡುಪಿಯ ತೃಪ್ತಿ ನಗರದಲ್ಲಿ ಸೂತಕದ ಛಾಯೆ ಆವರಿಸಿತ್ತು. ಹಬ್ಬದ ದಿನ ಬೆಳ್ಳಂಬೆಳಗ್ಗೆ ರಕ್ತದ ಕೋಡಿಯೇ ಹರದಿತ್ತು. ಹದಿನೈದು ನಿಮಿಷದ ಸಮಯ ಅಂತರದಲ್ಲಿ ನಡೆದ ನಾಲ್ವರ ಭೀಕರ ಹತ್ಯೆ ಇಡೀ ಉಡುಪಿ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿತ್ತು.
ಅಪರಿಚಿತ ಕೊಲೆಗಾರನ ಕ್ರೌರ್ಯಕ್ಕೆ ಒಂದೇ ಕುಟುಂಬದ ನಾಲ್ವರು ಹೆಣವಾಗಿದ್ದರೆ, ಮತ್ತೊಬ್ಬರು ರಕ್ತದ ಮಡುವಿನಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದರು. ಉಡುಪಿಯ ತೃಪ್ತಿ ನಗರದ ನಿವಾಸಿ ಹಸೀನಾ (46), ಮತ್ತು ಆಕೆಯ ಮೂವರು ಮಕ್ಕಳಾದ ಅಫ್ನಾನ್ (23), ಐನಾಜ್ (21) ಮತ್ತು ಅಸೀಮ್ (12) ದೀಪಾವಳಿ ಹಬ್ಬದ ದಿನವೇ ಸಾವನ್ನಪ್ಪಿದ ಮೃತ ದುರ್ದೈವಿಗಳು.

ಮೃತ ಅಫ್ನಾನ್ ಬೆಂಗಳೂರಿನ ಏರ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದು, ದೀಪಾವಳಿ ಹಬ್ಬದ ರಜೆಗಾಗಿ ಊರಿಗೆ ಬಂದಿದ್ದಳು. ಇನ್ನು ಹಸೀನಾ ಪತಿ ನೂರ್ ಮೊಹಮ್ಮದ್ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದರು. ತನ್ನ ಸಂಪೂರ್ಣ ಕುಟುಂಬವನ್ನು ಕಳೆದುಕೊಂಡ ಬಗ್ಗೆ ಸುದ್ದಿ ಮುಟ್ಟುತ್ತಿದ್ದಂತೆ ನೂರ್ ಮೊಹಮ್ಮದ್ ಸೌದಿ ಅರೇಬಿಯಾದಿಂದ ಉಡುಪಿಗೆ ಬಂದಿದ್ದಾರೆ.
ಆರೋಪಿ ಭಾನುವಾರ ಬೆಳಗ್ಗೆ 8:30ರ ಸುಮಾರಿಗೆ ಸಂತೆಕಟ್ಟೆಯಿಂದ ತೃಪ್ತಿನಗರಕ್ಕೆ ಆಟೋ ಬಾಡಿಗೆಗೆ ಪಡೆದು ಬಂದಿದ್ದಾನೆ. ಏಕಾಏಕಿ ಹಸೀನಾ ಮನೆಗೆ ನುಗ್ಗಿದ ಹಂತಕ ನಾಲ್ವರನ್ನು ಚಾಕುವಿನಿಂದ ಇರಿದಿದ್ದಾನೆ. ಮನೆಯ ಹೊರಗೆ ಆಟವಾಡುತ್ತಿದ್ದ ಬಾಲಕ ಗಲಾಟೆ ಕೇಳಿ ಮನೆಯೊಳಗೆ ನುಗ್ಗಿದ್ದು, ಆತನಿಗೂ ಕೂಡ ಚಾಕುವಿನಿಂದ ಇರಿದಿದ್ದಾನೆ. ಕೇವಲ ಹದಿನೈದೇ ನಿಮಿಷದಲ್ಲಿ ಐವರಿಗೆ ಚಾಕು ಇರಿದಿದ್ದ ಹಂತಕ ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಹಂತಕನ ಕೈ ಸಿಲುಕಿ ನರಳಾಡಿದ್ದ ನಾಲ್ವರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದು, ಹಸೀನಾ ಅತ್ತೆ ಹಾಜಿರಾ (70) ಗಂಭೀರ ಗಾಯಗೊಂಡಿದ್ದಾರೆ. ವಿಚಾರ ತಿಳಿದು ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮನೆಯಲ್ಲಿ ಯಾವುದೇ ವಸ್ತುಗಳು ಇರುವ ಜಾಗದಲ್ಲೇ ಇರುವ ಕಾರಣ ಇದೊಂದು ದರೋಡೆ ಪ್ರಕರಣ ಅಲ್ಲ ಎನ್ನುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ.

ಹಂತಕನ ಗುರುತು..?
ನಾಲ್ವರನ್ನು ಕೊಂದ ಹಂತಕ ಸುಮಾರು ನೆಲವತ್ತು ವಯಸ್ಸಿನ ಆಸುಪಾಸಿನ ವ್ಯಕ್ತಿ ಇರಬಹುದು ಎನ್ನಲಾಗಿದ್ದು, ಬೋಳು ತಲೆಯವನಾಗಿದ್ದ. ಮುಖಕ್ಕೆ ಮಾಸ್ಕ್ ಧರಿಸಿದ್ದ ಎನ್ನುವ ಮಾಹಿತಿ ಇದ್ದು, ಆಟೋದಲ್ಲೇ ಬಂದು ಕೊಲೆ ಮಾಡಿ ಆಟೋದಲ್ಲೇ ವಾಪಸ್ ತೆರಳಿದ್ದಾನೆ ಎನ್ನಲಾಗಿದೆ. ಆರೋಪಿಗೆ ಕಳ್ಳತನ ದರೋಡೆ ಉದ್ದೇಶವಿದ್ದಂತೆ ಮೇಲ್ನೋಟಕ್ಕೆ ಕಂಡು ಬಂದಿಲ್ಲ. ವೈಯಕ್ತಿಕ ದ್ವೇಷಕ್ಕೆ ನಾಲ್ವರ ಕೊಲೆಯಾಗಿರಬಹುದು ಎಂದು ಶಂಕಿಸಲಾಗಿದೆ.
ಇನ್ನು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹಗಳನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ನಗರದ ಜಾಮಿಯಾ ಮಸೀದಿ, ಕಲ್ಪನಾ ಸಮೀಪದಲ್ಲಿ ನಾಲ್ವರ ದಫನ ನಡೆಯಲಿದ್ದು, ಇಂದ್ರಾಳಿ ಮಸೀದಿಯಲ್ಲಿ ಅಂತಿಮ ವಿಧಿ ವಿಧಾನ ನಡೆಯಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications