ಕೊಟ್ಟ ಮಾತು ಉಳಿಸಿಕೊಂಡ ವಿಜಯ್-ರಶ್ಮಿಕಾ ಮಂದಣ್ಣ: 180 ಮಕ್ಕಳಿಗೆ ಮರೆಯಲಾರದ ಉಡುಗೊರೆ ಕೊಟ್ಟ ಜೋಡಿ
ಇತ್ತೀಚೆಗಷ್ಟೇ ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಟ್ಟಿರುವ ಖ್ಯಾತ ನಟ 'ರೌಡಿ ಬಾಯ್' ವಿಜಯ್ ದೇವರಕೊಂಡ ಹಾಗೂ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಜೋಡಿ ತಾವು ನೀಡಿದ್ದ ಬಿಗ್ ಪ್ರಾಮಿಸ್ ಒಂದನ್ನು ಈಡೇರಿಸುವ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ತಮ್ಮ ತಂದೆಯ ಹುಟ್ಟೂರಾದ ತೆಲಂಗಾಣದ ಸಣ್ಣ ಹಳ್ಳಿಯೊಂದರ ಶಾಲಾ ಮಕ್ಕಳಿಗಾಗಿ ತಾವು ಕಂಡಿದ್ದ ಜಂಟಿ ಕನಸನ್ನು ಈ ಸ್ಟಾರ್ ಜೋಡಿ ಈಗ ನನಸು ಮಾಡಿದೆ. ತಮ್ಮ ಈ ವಿಶೇಷ ಸಾಮಾಜಿಕ ಕಾರ್ಯದ ಕುರಿತು ನಟ ವಿಜಯ್ ದೇವರಕೊಂಡ ಅವರು ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.
ಅಪ್ಪನ ಹುಟ್ಟೂರಿನತ್ತ ಪಯಣ
ವಿಜಯ್ ದೇವರಕೊಂಡ ಅವರು ತಮ್ಮ ಪೋಸ್ಟ್‌ನಲ್ಲಿ, "ನಾವು ಸದ್ಯ ತುಮ್ಮನ್‌ಪೇಟ್ ಕಡೆಗೆ ಪ್ರಯಾಣ ಬೆಳೆಸುತ್ತಿದ್ದೇವೆ. ಇದು ನಮ್ಮ ತಂದೆ ಹುಟ್ಟಿದ ಅತ್ಯಂತ ಪುಟ್ಟ ಹಳ್ಳಿ" ಎಂದು ಬರೆದುಕೊಳ್ಳುವ ಮೂಲಕ ತಮ್ಮ ಮೂಲ ಬೇರುಗಳ ಕಡೆಗಿನ ಪಯಣವನ್ನು ನೆನೆದಿದ್ದಾರೆ. ಕಳೆದ ಫೆಬ್ರವರಿ ತಿಂಗಳಿನಲ್ಲಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಜೊತೆಯಾಗಿ ಸೇರಿ ಒಂದು ಮಹತ್ವದ ಘೋಷಣೆ ಮಾಡಿದ್ದರು. ತೆಲಂಗಾಣದ ನಾಗರಕರ್ನೂಲ್ ಜಿಲ್ಲೆಯ ಅಚ್ಚಂಪೇಟೆ (Achampet) ಮಂಡಲದ ಸರ್ಕಾರಿ ಶಾಲೆಗಳ 9 ಮತ್ತು 10ನೇ ತರಗತಿಯ ಪ್ರತಿಭಾವಂತ ಹಾಗೂ ಕಷ್ಟಪಟ್ಟು ಓದುವ ವಿದ್ಯಾರ್ಥಿಗಳನ್ನು ಗುರುತಿಸಿ, ಅವರಿಗೆ ವಿಶೇಷ ಪ್ರೋತ್ಸಾಹಧನ ಮತ್ತು ಬಹುಮಾನಗಳನ್ನು ನೀಡುವುದಾಗಿ ಪ್ರಕಟಿಸಿದ್ದರು. ಶಿಕ್ಷಣವನ್ನು ಉತ್ತೇಜಿಸುವ ಸಲುವಾಗಿ ಇಬ್ಬರೂ ಕಂಡಿದ್ದ ಆ ಪುಟ್ಟ ಕನಸು ಇದೀಗ ಅಧಿಕೃತವಾಗಿ ಕಾರ್ಯರೂಪಕ್ಕೆ ಬಂದಿದೆ.

180 ವಿದ್ಯಾರ್ಥಿಗಳಿಗೆ ಸಿಕ್ಕಿತು ಪ್ರತಿಫಲ
ಈ ಯೋಜನೆಗಾಗಿ ಅಚ್ಚಂಪೇಟೆ ಮಂಡಲದಾದ್ಯಂತ ಕಷ್ಟಪಟ್ಟು ಓದಿ, ಅತ್ಯುತ್ತಮ ಸಾಧನೆ ಮಾಡುವ ಮೂಲಕ ತಮ್ಮ ಪೋಷಕರು ಹೆಮ್ಮೆ ಪಡುವಂತೆ ಮಾಡಿರುವ ಒಟ್ಟು 180 ವಿದ್ಯಾರ್ಥಿಗಳ ಅಧಿಕೃತ ಪಟ್ಟಿಯನ್ನು ವಿಜಯ್ ದೇವರಕೊಂಡ ಶೇರ್ ಮಾಡಿದ್ದಾರೆ. ಈ ಅರ್ಹ ಮಕ್ಕಳಿಗೆ ಇಬ್ಬರು ಸ್ಟಾರ್ ನಟರ ಕಡೆಯಿಂದ ಶೈಕ್ಷಣಿಕ ನೆರವು ಹಾಗೂ ವಿಶೇಷ ಬಹುಮಾನಗಳು ಸಿಗಲಿವೆ. ರಿಯಲ್ ಲೈಫ್‌ನಲ್ಲೂ ಜೊತೆಯಾಗಿ ಇಂತಹ ಸಮಾಜಮುಖಿ ಕೆಲಸಕ್ಕೆ ಕೈಹಾಕಿರುವ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಅಭಿಮಾನಿಗಳು ಇವರಿಬ್ಬರ ಜೋಡಿಗೆ ಹ್ಯಾಟ್ಸಾಫ್ ಹೇಳುತ್ತಿದ್ದಾರೆ.
ನಾವು ಫಸ್ಟ್ ರ‍್ಯಾಂಕ್ ಅಲ್ಲ
ಮಕ್ಕಳಿಗೆ ಬಹುಮಾನ ವಿತರಿಸುವ ಈ ವಿಶೇಷ ಸಂದರ್ಭದಲ್ಲಿ ಮಾತನಾಡಿದ ವಿಜಯ್ ದೇವರಕೊಂಡ, ತಮ್ಮ ಹಾಗೂ ರಶ್ಮಿಕಾ ಅವರ ಶಾಲಾ ದಿನಗಳನ್ನು ನೆನಪಿಸಿಕೊಂಡು ವಿದ್ಯಾರ್ಥಿಗಳಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ. "ನಾನಾಗಲಿ ಅಥವಾ ರಶ್ಮಿಕಾ ಆಗಲಿ ಶಾಲೆಯಲ್ಲಿದ್ದಾಗ 1ನೇ ಅಥವಾ 2ನೇ ರ‍್ಯಾಂಕ್ ಪಡೆಯುತ್ತಿದ್ದ ವಿದ್ಯಾರ್ಥಿಗಳಲ್ಲ. ಆದರೆ, ಜೀವನದಲ್ಲಿ ಶಿಸ್ತು ಇದ್ದರೆ ನೀವು ಏನನ್ನು ಬೇಕಾದರೂ ಸಾಧಿಸಬಹುದು" ಎಂದು ವಿಜಯ್ ದೇವರಕೊಂಡ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ. ಕೇವಲ ಅಂಕಗಳು ಅಥವಾ ರ‍್ಯಾಂಕ್‌ಗಳು ಮಾತ್ರ ಜೀವನದ ಯಶಸ್ಸನ್ನು ನಿರ್ಧರಿಸುವುದಿಲ್ಲ, ಬದಲಿಗೆ ಕಠಿಣ ಪರಿಶ್ರಮ ಮತ್ತು ಶಿಸ್ತು ಮುಖ್ಯ ಎಂಬುದನ್ನು ಸ್ವತಃ ತಮ್ಮದೇ ಉದಾಹರಣೆಯೊಂದಿಗೆ ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಸ್ಟಾರ್ ನಟನ ಈ ಮಾತುಗಳು ಅಲ್ಲಿ ನೆರೆದಿದ್ದ ನೂರಾರು ವಿದ್ಯಾರ್ಥಿಗಳಲ್ಲಿ ಮತ್ತು ಪೋಷಕರಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
We are on our way to Thummanpet.
— Vijay Deverakonda (@TheDeverakonda) June 14, 2026
The little village where my Father was born.
In February - @iamRashmika and I had announced the beginning of a little dream of ours.
To reward all the hardworking students of 9th and 10th grade from Achampet Mandal of Telangana.
Here is a… pic.twitter.com/wLNSr4ZZHe
"ಇದು ನಮ್ಮ ಮಾವನವರ ಹುಟ್ಟೂರು" ಎಂದ ರಶ್ಮಿಕಾ ಮಂದಣ್ಣ
ಅಚ್ಚಂಪೇಟೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕೇವಲ ವಿಜಯ್ ದೇವರಕೊಂಡ ಮಾತ್ರವಲ್ಲದೆ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರ ಮಾತುಗಳು ಕೂಡ ಇಡೀ ಕಾರ್ಯಕ್ರಮದ ಹೈಲೈಟ್ ಆಗಿದ್ದವು. ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ರಶ್ಮಿಕಾ, ಈ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿರುವುದಕ್ಕೆ ತಮ್ಮ ಅಪಾರ ಸಂತೋಷವನ್ನು ವ್ಯಕ್ತಪಡಿಸಿದರು. ಇದೇ ವೇಳೆ ಅವರು ಆಡಿದ ಒಂದು ಮಾತು ಈಗ ವಿಜಯ್-ರಶ್ಮಿಕಾ ಅಭಿಮಾನಿಗಳಲ್ಲಿ ಹೊಸ ಸಂಭ್ರಮವನ್ನು ತಂದಿದೆ.
"ಇಂದು ನಾವು ದಿ ದೇವರಕೊಂಡ ಫೌಂಡೇಶನ್ ಮೂಲಕ ಒಂದು ಅತ್ಯುತ್ತಮವಾದ ಕೆಲಸಕ್ಕೆ ಮುನ್ನುಡಿ ಬರೆಯುತ್ತಿದ್ದೇವೆ. ಈ ಒಳ್ಳೆಯ ಕೆಲಸವನ್ನು ನಾವು ಅಚ್ಚಂಪೇಟೆ ಮತ್ತು ಬಿ. ತುಂಬನಪೇಟೆಯಿಂದಲೇ ಆರಂಭಿಸಬೇಕು ಎಂದು ನಿರ್ಧರಿಸಿದ್ದೆವು. ಏಕೆಂದರೆ, ಇದು ನಮ್ಮ ಮಾವನವರ ಹುಟ್ಟೂರು" ಎಂದು ರಶ್ಮಿಕಾ ಮಂದಣ್ಣ ವೇದಿಕೆಯಲ್ಲೇ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ನೆಟ್ಟಿಗರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಮಾಡುತ್ತಿದ್ದಾರೆ.













Click it and Unblock the Notifications