ವಿಠ್ಠಲನ ದರ್ಶನಕ್ಕೆ ಹೊರಟಿದ್ದವರ ಬಾಳಲ್ಲಿ ವಿಧಿಯಾಟ: ಪಿಕಪ್ ವ್ಯಾನ್ ಬಾವಿಗೆ ಬಿದ್ದು 14 ಭಕ್ತರು ಜಲಸಮಾಧಿ
ಮಹಾರಾಷ್ಟ್ರ: ಆಷಾಢ ಏಕಾದಶಿಯ ಪವಿತ್ರ ದಿನಗಳ ಮುನ್ನವೇ ಪಂಢರಪುರದ ವಿಠ್ಠಲನ ದರ್ಶನಕ್ಕೆ ಹೊರಟಿದ್ದ ಭಕ್ತರ ಮೇಲೆ ವಿಧಿ ಕ್ರೂರವಾಗಿ ಎರಗಿದೆ. ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಪಂಢರಪುರ ರಸ್ತೆಯಲ್ಲಿ ನಿಯಂತ್ರಣ ತಪ್ಪಿದ ಪಿಕಪ್ ವ್ಯಾನ್ ಮರಣಕೂಪದಂತಿದ್ದ ಬಾವಿಗೆ ಉರುಳಿ ಬಿದ್ದ ಪರಿಣಾಮ ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಚಾಲಕನ ನಿಯಂತ್ರಣ ತಪ್ಪಿದ್ದೇ ಈ ಭೀಕರ ದುರಂತಕ್ಕೆ ಕಾರಣ ಎನ್ನಲಾಗಿದ್ದು, ಸದ್ಯ ಸ್ಥಳದಲ್ಲಿ ಮೃತರ ಆಕ್ರಂದನ ಮುಗಿಲು ಮುಟ್ಟಿದೆ.
ಸೋಲಾಪುರ ಜಿಲ್ಲೆಯ ಪಂಢರಪುರ ತಾಲೂಕಿನ ಹೆದ್ದಾರಿ ಸಮೀಪ ಈ ಘಟನೆ ನಡೆದಿದೆ. ಭಕ್ತರನ್ನು ಹೊತ್ತು ಸಾಗುತ್ತಿದ್ದ ಪಿಕಪ್ ವಾಹನವು ರಸ್ತೆ ಪಕ್ಕದ ಆಳವಾದ ಬಾವಿಗೆ ನೇರವಾಗಿ ಬಿದ್ದಿದೆ. ಘಟನೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 14 ಮಂದಿ ಸ್ಥಳದಲ್ಲೇ ಉಸಿರುಗಟ್ಟಿ ಹಾಗೂ ತೀವ್ರ ಗಾಯಗಳಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯ ಪೊಲೀಸರು ಹಾಗೂ ವಿಪತ್ತು ನಿರ್ವಹಣಾ ಸಿಬ್ಬಂದಿ ಧಾವಿಸಿದ್ದು, ಜೆಸಿಬಿ ಮತ್ತು ಕ್ರೇನ್‌ಗಳ ಸಹಾಯದಿಂದ ಬಾವಿಯಿಂದ ವಾಹನ ಹಾಗೂ ಮೃತದೇಹಗಳನ್ನು ಹೊರತೆಗೆಯುವ ಕಾರ್ಯಾಚರಣೆ ತೀವ್ರಗತಿಯಲ್ಲಿ ಸಾಗಿದೆ. ಗಾಯಗೊಂಡಿರುವ ಇತರ ಕೆಲವು ಪ್ರಯಾಣಿಕರನ್ನು ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಮೃತರ ಗುರುತು ಪತ್ತೆ ಹಚ್ಚುವ ಕಾರ್ಯ ಮುಂದುವರಿದಿದೆ.
ದುರಂತದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳೀಯ ಪೊಲೀಸರು ಹಾಗೂ ವಿಪತ್ತು ನಿರ್ವಹಣಾ ತಂಡಗಳು ಘಟನಾ ಸ್ಥಳಕ್ಕೆ ಧಾವಿಸಿವೆ. ಸದ್ಯ ಸ್ಥಳದಲ್ಲಿ ಜೆಸಿಬಿ (JCB) ಯಂತ್ರಗಳ ಸಹಾಯದಿಂದ ಬಾವಿಯೊಳಗಿರುವ ವಾಹನವನ್ನು ಮೇಲೆತ್ತಲು ಮತ್ತು ಉಳಿದ ಪ್ರಯಾಣಿಕರನ್ನು ರಕ್ಷಿಸಲು ತೀವ್ರ ಕಾರ್ಯಾಚರಣೆ ನಡೆಸಲಾಗುತ್ತಿದೆ. ಬಾವಿಯಲ್ಲಿ ನೀರಿರುವುದರಿಂದ ರಕ್ಷಣಾ ಕಾರ್ಯಕ್ಕೆ ಸಣ್ಣಪುಟ್ಟ ಅಡೆತಡೆಗಳು ಎದುರಾಗುತ್ತಿವೆ.
ಒಂದೇ ಗ್ರಾಮದ 8 ಮಂದಿ ದುರ್ಮರಣ
ತಾಂಡುಲವಾಡಿ ಗ್ರಾಮದ ಬಳಿ ಪಿಕಪ್ ವ್ಯಾನ್ ಆಳವಾದ ಬಾವಿಗೆ ಉರುಳಿ ಬಿದ್ದ ಭೀಕರ ಅಪಘಾತದ ಬೆನ್ನಲ್ಲೇ, ಮೃತರ ತವರು ಗ್ರಾಮವಾದ ಪಂಢರಪುರ ತಾಲೂಕಿನ ರಂಜನಿನಗರದಲ್ಲಿ ಸೂತಕ ಆವರಿಸಿದೆ. ಅಪಘಾತದಲ್ಲಿ ಮೃತಪಟ್ಟವರು ಮತ್ತು ಗಾಯಗೊಂಡವರೆಲ್ಲರೂ ಒಂದೇ ಗ್ರಾಮದವರಾಗಿರುವುದರಿಂದ ಇಡೀ ಹಳ್ಳಿಗೆ ಹಳ್ಳಿಯೇ ಕಣ್ಣೀರಿನ ಸಾಗರದಲ್ಲಿ ಮುಳುಗಿದೆ. ಒಂದೇ ಸಮಯದಲ್ಲಿ, ಒಂದೇ ಗ್ರಾಮದ 8 ಮಂದಿ ಧಾರ್ಮಿಕ ಪ್ರವಾಸದ ನಡುವೆಯೇ ಜಲಸಮಾಧಿಯಾಗಿರುವುದು ರಂಜನಿನಗರ ಮಾತ್ರವಲ್ಲದೆ ಸುತ್ತಮುತ್ತಲಿನ ಇಡೀ ಪ್ರದೇಶದಾದ್ಯಂತ ತೀವ್ರ ಆಘಾತವನ್ನುಂಟು ಮಾಡಿದೆ. ಹಬ್ಬದ ಸಂಭ್ರಮ ಇರಬೇಕಾಗಿದ್ದ ಗ್ರಾಮದಲ್ಲಿ ಈಗ ಕೇವಲ ಮೃತರ ಬಂಧುಗಳ ಆಕ್ರಂದನವೇ ಕೇಳಿಬರುತ್ತಿದೆ.
ಇನ್ನೊಂದೆಡೆ, ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತೀವ್ರ ತನಿಖೆ ಆರಂಭಿಸಿದ್ದಾರೆ. ಭೀಕರ ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯವೇ ಕಾರಣವೇ? ಅಥವಾ ವಾಹನದಲ್ಲಿ ತಾಂತ್ರಿಕ ದೋಷವಿತ್ತೇ? ಎಂಬ ಆಯಾಮದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ವಾಹನವು ಚಾಲಕನ ನಿಯಂತ್ರಣ ತಪ್ಪಲು ನಿಖರ ಕಾರಣವೇನು ಮತ್ತು ಚಾಲಕ ಎಲ್ಲಿ ತಪ್ಪು ಮಾಡಿದ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಘಟನಾ ಸ್ಥಳದ ಪರಿಶೀಲನೆ ನಡೆಸುತ್ತಿದ್ದಾರೆ. ಬಾವಿಯ ಸುತ್ತಮುತ್ತ ಯಾವುದೇ ರಕ್ಷಣಾ ಗೋಡೆ ಇರಲಿಲ್ಲವೇ ಎಂಬ ಬಗ್ಗೆಯೂ ತನಿಖೆ ಮುಂದುವರಿದಿದೆ.












Click it and Unblock the Notifications