ದೊಡ್ಡ ಸ್ಥಾನ ಕೊಟ್ಟರೂ AIADMKಗೆ ನಟಿ ಗೌತಮಿ ರಾಜೀನಾಮೆ: ಭಾರವಾದ ಹೃದಯದಿಂದ ಈ ನಿರ್ಧಾರ ಎಂದಿದ್ದೇಕೆ?
ತಮಿಳುನಾಡು ರಾಜಕೀಯದಲ್ಲಿ ಮತ್ತೊಂದು ಪ್ರಮುಖ ಬೆಳವಣಿಗೆ ನಡೆದಿದೆ. ಖ್ಯಾತ ಹಿರಿಯ ನಟಿ ಗೌತಮಿ ತಡಿಮಲ್ಲ (Gautami Tadimalla) ಅವರು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (AIADMK) ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ತಮ್ಮ ಅಧಿಕೃತ ಹುದ್ದೆಗೆ ದಿಢೀರ್ ರಾಜೀನಾಮೆ ಘೋಷಿಸಿದ್ದಾರೆ. ಪಕ್ಷದಲ್ಲಿ ಅವರು ಉಪ ಪ್ರಚಾರ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿಭಾಯಿಸುತ್ತಿದ್ದರು. ಸೋಶಿಯಲ್ ಮೀಡಿಯಾ ಹಾಗೂ ಮಾಧ್ಯಮಗಳ ಮೂಲಕ ತಮ್ಮ ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಿರುವ ನಟಿ ಗೌತಮಿ, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದಾರೆ.
ರಾಜೀನಾಮೆಗೆ ಕಾರಣವೇನು?
ತಮ್ಮ ರಾಜೀನಾಮೆ ಕುರಿತು ಭಾವುಕರಾಗಿ ಮಾತನಾಡಿರುವ ಗೌತಮಿ, ಪ್ರಸ್ತುತ ರಾಜಕೀಯ ಪರಿಸ್ಥಿತಿಯೇ ಈ ನಿರ್ಧಾರಕ್ಕೆ ಮುಖ್ಯ ಕಾರಣ ಎಂದು ತಿಳಿಸಿದ್ದಾರೆ. ಸದ್ಯದ ತಮಿಳುನಾಡು ರಾಜಕೀಯ ಪರಿಸ್ಥಿತಿ ಹಾಗೂ ಪಕ್ಷದೊಳಗಿನ ಬೆಳವಣಿಗೆಗಳಿಂದಾಗಿ ನಾನು ಅತ್ಯಂತ ಭಾರವಾದ ಹೃದಯದಿಂದ ಈ ಕಠಿಣ ನಿರ್ಧಾರವನ್ನು ಕೈಗೊಳ್ಳುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ. ಯಾವುದೇ ರಾಜಕೀಯ ಪಕ್ಷದ ಹಂಗಿಲ್ಲದೆ, ಸ್ವತಂತ್ರವಾಗಿ ಜನಸೇವೆ ಮತ್ತು ಸಾಮಾಜಿಕ ಕಾರ್ಯಗಳನ್ನು ಮುಂದುವರಿಸುವ ಹಂಬಲ ಹೊಂದಿದ್ದು, ಇದೇ ಕಾರಣಕ್ಕಾಗಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಎಲ್ಲಾ ಜವಾಬ್ದಾರಿಗಳಿಂದ ಕೆಳಗಿಳಿಯುತ್ತಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ರಾಜಕೀಯ ವಲಯದಲ್ಲಿ ಸಂಚಲನ
ಗೌತಮಿ ಅವರು ಈ ಹಿಂದೆ ಬಿಜೆಪಿ (BJP) ಪಕ್ಷದಲ್ಲಿದ್ದು, ಅಲ್ಲಿನ ನಾಯಕರೊಂದಿಗೆ ಮೂಡಿದ ಭಿನ್ನಾಭಿಪ್ರಾಯ ಮತ್ತು ತಮಗೆ ಆದ ವಂಚನೆ ಪ್ರಕರಣದಲ್ಲಿ ಪಕ್ಷ ಬೆಂಬಲ ನೀಡಲಿಲ್ಲ ಎಂದು ಆರೋಪಿಸಿ ಎಐಎಡಿಎಂಕೆ ಸೇರಿದ್ದರು. ಈಗ ಎಐಎಡಿಎಂಕೆ ಪಕ್ಷದಲ್ಲೂ ಉನ್ನತ ಹುದ್ದೆಯಲ್ಲಿದ್ದಾಗಲೇ ದಿಢೀರ್ ಹೊರಬಂದಿರುವುದು ತಮಿಳುನಾಡು ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಅವರು ಮುಂದಿನ ದಿನಗಳಲ್ಲಿ ಬೇರೆ ಪಕ್ಷ ಸೇರಲಿದ್ದಾರಾ ಅಥವಾ ಸ್ವತಂತ್ರವಾಗಿ ಸಾಮಾಜಿಕ ವೇದಿಕೆ ನಿರ್ಮಿಸಿಕೊಳ್ಳಲಿದ್ದಾರಾ ಎಂಬ ಕುತೂಹಲ ಮೂಡಿದೆ.
ಪಕ್ಷದ ನಾಯಕರಿಗೆ ಗೌತಮಿ ಧನ್ಯವಾದ
ತಮ್ಮ ರಾಜೀನಾಮೆ ಪತ್ರದಲ್ಲಿ ಗೌತಮಿ ಅವರು ಪಕ್ಷದಲ್ಲಿದ್ದ ಅವಧಿಯಲ್ಲಿ ತಮಗೆ ಸಹಕರಿಸಿದ ಎಐಎಡಿಎಂಕೆ ಪಕ್ಷದ ಹಿರಿಯ ನಾಯಕರು ಹಾಗೂ ವಿವಿಧ ಹಂತದ ಪದಾಧಿಕಾರಿಗಳಿಗೆ ವಿಶೇಷವಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ. "ನಾನು ಪಕ್ಷ ಸೇರಿದ ದಿನದಿಂದ ಇಂದಿನವರೆಗೆ ನನಗೆ ಎಲ್ಲಾ ರೀತಿಯಲ್ಲೂ ಸಹಕಾರ ನೀಡಿದ ಮಾಜಿ ಸಚಿವರು, ಪಕ್ಷದ ಪ್ರಧಾನ ಕಚೇರಿಯ ಪದಾಧಿಕಾರಿಗಳು, ವಿವಿಧ ವಿಭಾಗಗಳ ರಾಜ್ಯ ಕಾರ್ಯದರ್ಶಿಗಳು, ಜಿಲ್ಲಾ, ವಲಯ, ಪ್ರದೇಶ, ಯೂನಿಯನ್ ಹಾಗೂ ಪಟ್ಟಣ/ಪಂಚಾಯತ್ ಮಟ್ಟದ ಎಲ್ಲಾ ಕಾರ್ಯದರ್ಶಿಗಳಿಗೆ ನಾನು ಪ್ರಾಮಾಣಿಕವಾಗಿ ನಮಸ್ಕರಿಸುತ್ತೇನೆ ಮತ್ತು ಧನ್ಯವಾದಗಳನ್ನು ಅರ್ಪಿಸುತ್ತೇನೆ" ಎಂದು ಗೌತಮಿ ತಮ್ಮ ಪತ್ರದಲ್ಲಿ ಬರೆದಿದ್ದಾರೆ.

2026ರ ಚುನಾವಣೆಯಲ್ಲಿ ಅಬ್ಬರದ ಪ್ರಚಾರ
ಇತ್ತೀಚೆಗಷ್ಟೇ ನಡೆದ 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟಿ ಗೌತಮಿ ಅವರು ಅತ್ಯಂತ ಸಕ್ರಿಯವಾಗಿ ರಾಜಕೀಯ ಕಣದಲ್ಲಿ ತೊಡಗಿಸಿಕೊಂಡಿದ್ದರು. ಎಐಎಡಿಎಂಕೆ ಮತ್ತು ಎನ್‌ಡಿಎ (NDA) ಮೈತ್ರಿಕೂಟದ ಅಭ್ಯರ್ಥಿಗಳ ಗೆಲುವಿಗಾಗಿ ಅವರು ರಾಜ್ಯದಾದ್ಯಂತ ಬಿರುಸಿನ ಪ್ರಚಾರ ಕೈಗೊಂಡಿದ್ದರು. ಸ್ಟಾರ್ ಪ್ರಚಾರಕಿಯಾಗಿ ಮೈತ್ರಿಕೂಟದ ಪರವಾಗಿ ಮತದಾರರನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹೀಗಿದ್ದೂ ಚುನಾವಣೆ ಮುಗಿದ ಬೆನ್ನಲ್ಲೇ ಅವರು ಭಾರವಾದ ಹೃದಯದಿಂದ ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ಉಪ ಪ್ರಚಾರ ಕಾರ್ಯದರ್ಶಿ ಹುದ್ದೆಯನ್ನು ತೊರೆದಿರುವುದು ತಮಿಳುನಾಡು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಅಣ್ಣಾಮಲೈ ಪಕ್ಷದತ್ತ ಗೌತಮಿ ಮುಖ?
ತಮಿಳುನಾಡು ರಾಜಕೀಯದಲ್ಲಿ ಸಿನಿಮಾ ತಾರೆಯರ ಪಕ್ಷಾಂತರ ಪರ್ವ ತೀವ್ರಗೊಂಡಿದೆ. ನಟಿ ಗೌತಮಿ ಅವರ ರಾಜೀನಾಮೆ ಬೆನ್ನಲ್ಲೇ ಕಾಲಿವುಡ್ ಹಾಗೂ ರಾಜಕೀಯ ವಲಯದಲ್ಲಿ ಹಲವು ಹೊಸ ವದಂತಿಗಳು ಮತ್ತು ದಿಢೀರ್ ಬೆಳವಣಿಗೆಗಳು ಮುನ್ನೆಲೆಗೆ ಬಂದಿವೆ. ಎಐಎಡಿಎಂಕೆ ಪಕ್ಷಕ್ಕೆ ಗುಡ್‌ಬೈ ಹೇಳಿರುವ ನಟಿ ಗೌತಮಿ ಅವರು ಮುಂದಿನ ನಡೆ ಏನು ಎಂಬುದು ಸದ್ಯ ತಮಿಳುನಾಡಿನಾದ್ಯಂತ ಕುತೂಹಲ ಮೂಡಿಸಿದೆ. ಮೂಲಗಳ ಪ್ರಕಾರ, ಪ್ರಭಾವಿ ನಾಯಕ ಕೆ. ಅಣ್ಣಾಮಲೈ ಅವರ ಸಮ್ಮುಖದಲ್ಲಿ ಗೌತಮಿ ಪಕ್ಷ ಸೇರಲಿದ್ದಾರೆ ಎನ್ನುವ ಬಲವಾದ ವದಂತಿಗಳು ಹರಿದಾಡುತ್ತಿವೆ.
39 ವರ್ಷಗಳ ಒಡನಾಟ ಕಡಿದುಕೊಂಡ ಪಾಂಡಿ ರವಿ
ಇನ್ನೊಂದೆಡೆ, ತಮಿಳು ಚಿತ್ರರಂಗದ ಖ್ಯಾತ ಪೋಷಕ ನಟ ಪಾಂಡಿ ರವಿ ಅವರು ಬಿಜೆಪಿಗೆ ಬಿಗ್ ಶಾಕ್ ನೀಡಿದ್ದಾರೆ. ದಶಕಗಳ ಕಾಲ ತಾವಿದ್ದ ಪಕ್ಷವನ್ನು ತೊರೆದಿರುವ ಅವರು, ತಮಿಳು ಸೂಪರ್‌ಸ್ಟಾರ್ ದಳಪತಿ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಪಾಂಡಿ ರವಿ ಅವರ ಈ ನಿರ್ಧಾರ ಈಗ ಕಾಲಿವುಡ್‌ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಖ್ಯಾತ ಹಾಸ್ಯ ನಟ ಡಿ.ಎಸ್.ಆರ್.ಶ್ರೀನಿವಾಸನ್ ಕೂಡ ಟಿವಿಕೆ ಸೇರ್ಪಡೆಗೊಂಡಿದ್ದಾರೆ.












Click it and Unblock the Notifications