ರಾಮಾಯಣ ಎಷ್ಟು ಬಾರಿ ಓದಿದ್ದೀಯಾ? ಕೆ.ಎಸ್.ಭಗವಾನ್ ವಿರುದ್ಧ ಉಗ್ರಪ್ಪ ಏಕವಚನದಲ್ಲೇ ವಾಗ್ದಾಳಿ

ಬೆಂಗಳೂರು: ತಮ್ಮ ವಿಲಕ್ಷಣ ಹಾಗೂ ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಸದಾ ಸುದ್ದಿಯಲ್ಲಿರುವ ಪ್ರೊ. ಕೆ.ಎಸ್.ಭಗವಾನ್ ಅವರು ಮತ್ತೊಮ್ಮೆ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಶ್ರೀರಾಮನ ಜನನದ ಕುರಿತು ಅವರು ನೀಡಿರುವ ಆಕ್ಷೇಪಾರ್ಹ ಹೇಳಿಕೆ ಈಗ ರಾಜ್ಯಾದ್ಯಂತ ಭಾರಿ ಕಿಡಿ ಹೊತ್ತಿಸಿದ್ದು, ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಇನ್ನೊಂದೆಡೆ, ಕಾಂಗ್ರೆಸ್‌ನ ಹಿರಿಯ ನಾಯಕ ವಿ.ಎಸ್.ಉಗ್ರಪ್ಪ ಅವರು ಭಗವಾನ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಹರಿಹರದಲ್ಲಿ ಪ್ರಕರಣ ದಾಖಲು

ದಾವಣಗೆರೆ ಜಿಲ್ಲೆಯ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರೊ. ಕೆ.ಎಸ್.ಭಗವಾನ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇತ್ತೀಚೆಗೆ ಹರಿಹರದ ಪ್ರೊ. ಬಿ. ಕೃಷ್ಣಪ್ಪ ಮೈತ್ರಿವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಭಗವಾನ್, ರಾಮಾಯಣ ಹಾಗೂ ಶ್ರೀರಾಮನ ಜನ್ಮ ವೃತ್ತಾಂತವನ್ನು ಅತ್ಯಂತ ಅವಹೇಳನಕಾರಿ ಪದಗಳಲ್ಲಿ ಟೀಕಿಸಿದ್ದರು. ಪುತ್ರಕಾಮೇಷ್ಟಿ ಯಾಗ ಮತ್ತು ದಶರಥ ಮಹಾರಾಜನ ರಾಣಿಯರ ಕುರಿತು ಅವರು ಆಡಿದ್ದ ಮಾತುಗಳು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

KS Bhagwan

ಈ ಹೇಳಿಕೆಯು ಹಿಂದೂಗಳ ಆರಾಧ್ಯ ದೈವಕ್ಕೆ ಮಾಡಿದ ಅಪಮಾನ ಮತ್ತು ಸಮಾಜದಲ್ಲಿ ಶಾಂತಿ ಕದಡುವ ಯತ್ನ ಎಂದು ಆರೋಪಿಸಿ, ಹಿಂದೂ ಜಾಗರಣ ವೇದಿಕೆಯ ಹರಿಹರ ತಾಲೂಕು ಪ್ರಧಾನ ಕಾರ್ಯದರ್ಶಿ ದಿನೇಶ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಹರಿಹರ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಅಡಿ ಕಲಂ 196(1)(a) ಮತ್ತು 299ರ ಅನ್ವಯ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಯಾರೂ ಲಂಚ ಕೊಡಬೇಡಿ, ನನ್ನ ಗಮನಕ್ಕೆ ತನ್ನಿ: ಭ್ರಷ್ಟಾಚಾರ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಸಿಎಂ ಡಿಕೆಶಿ ಕರೆ
ಯಾರೂ ಲಂಚ ಕೊಡಬೇಡಿ, ನನ್ನ ಗಮನಕ್ಕೆ ತನ್ನಿ: ಭ್ರಷ್ಟಾಚಾರ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಸಿಎಂ ಡಿಕೆಶಿ ಕರೆ

"ನಿಮ್ಮ ಕೊಡುಗೆ ಏನು?" ಏಕವಚನದಲ್ಲೇ ಉಗ್ರಪ್ಪ ತರಾಟೆ

ಇನ್ನೊಂದೆಡೆ, ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಂಸದ ಹಾಗೂ ಕಾಂಗ್ರೆಸ್ ನಾಯಕ ವಿ.ಎಸ್. ಉಗ್ರಪ್ಪ, ಭಗವಾನ್ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಭಗವಾನ್ ಅವರ ಇತಿಹಾಸ ಪ್ರಜ್ಞೆಯನ್ನು ಪ್ರಶ್ನಿಸಿರುವ ಅವರು ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡಿದ್ದಾರೆ. "ಮಿಸ್ಟರ್ ಭಗವಾನ್, ನಿನಗೆ ರಾಮಾಯಣದ ಬಗ್ಗೆ ಅಸಲಿ ಅರಿವಿದೆಯೇ? ಮಹರ್ಷಿ ವಾಲ್ಮೀಕಿ ಬರೆದ ರಾಮಾಯಣವನ್ನು ಎಷ್ಟು ಬಾರಿ ಓದಿದ್ದೀಯಾ? ವಯಸ್ಸಿನ ದೋಷವೋ ಅಥವಾ ಬುದ್ಧಿಭ್ರಮಣೆಯೋ ಗೊತ್ತಿಲ್ಲ, ಬಾಯಿಗೆ ಬಂದಂತೆ ಮಾತನಾಡುತ್ತಿದ್ದೀಯಾ" ಎಂದು ಉಗ್ರಪ್ಪ ಖಾರವಾಗಿ ಪ್ರಶ್ನಿಸಿದ್ದಾರೆ.

ದೇಶಕ್ಕೆ ನಿನ್ನ ಕೊಡುಗೆ ಏನು?

"ನಿನ್ನ ಹೆಸರಿನಲ್ಲೇ ಭಗವಾನ್ ಅಂತ ಇಟ್ಟುಕೊಂಡು ಸನಾತನ ಸಂಸ್ಕೃತಿಯನ್ನು ನಿಂದಿಸುತ್ತಿದ್ದೀಯಾ? ಈ ರಾಜ್ಯಕ್ಕೆ ಮತ್ತು ದೇಶಕ್ಕೆ ನಿನ್ನ ವೈಯಕ್ತಿಕ ಕೊಡುಗೆ ಏನು? ಕೇವಲ ವಿವಾದ ಸೃಷ್ಟಿಸಿ ತಾನೊಬ್ಬ ಮಹಾನ್ ಬುದ್ಧಿಜೀವಿ ಎಂದು ತೋರಿಸಿಕೊಳ್ಳುವ ಹುಚ್ಚುತನ ನಿಲ್ಲಬೇಕು" ಎಂದು ಕಿಡಿಕಾರಿದ್ದಾರೆ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರೂ ಕೂಡ ಈ ದೇಶದಲ್ಲಿ 'ರಾಮರಾಜ್ಯ' ಬರಬೇಕೆಂದು ಬಯಸಿದ್ದರು. ನೀನು ಗಾಂಧೀಜಿಗಿಂತ ದೊಡ್ಡವನಾ? ಇಂತಹ ಬೇಜವಾಬ್ದಾರಿ ಹೇಳಿಕೆಗಳ ಮೂಲಕ ದೇಶದ ಕೋಟ್ಯಂತರ ಜನರ ನಂಬಿಕೆಗೆ ದ್ರೋಹ ಮಾಡಿರುವ ನೀನು ತಕ್ಷಣವೇ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಉಗ್ರಪ್ಪ ಆಗ್ರಹಿಸಿದ್ದಾರೆ. ಸದ್ಯ ಭಗವಾನ್ ಅವರ ಈ ಹೇಳಿಕೆ ಮತ್ತು ಅದರ ಸುತ್ತ ಎದ್ದಿರುವ ವಿವಾದ ಸಾಮಾಜಿಕ ಜಾಲತಾಣಗಳಲ್ಲೂ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಕಠಿಣ ಕಾನೂನು ಕ್ರಮಕ್ಕೆ ಆಗ್ರಹ ಕೇಳಿಬರುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+