Divorce: ಡಿವೋರ್ಸ್‌ ಬೇಡ, ನೀನೇ ಬೇಕು ಎಂದು ಕೋರ್ಟ್‌ನಲ್ಲೇ ಪತಿಯನ್ನ ಅಪ್ಪಿಕೊಂಡ ಪತ್ನಿ; 5 ವರ್ಷದ ಹಠ ಕರಗಿದ್ದು ಹೇಗೆ?

ನ್ಯಾಯಾಲಯ ಎಂದರೆ ವಾದ-ಪ್ರತಿವಾದ, ಆರೋಪ-ಪ್ರತ್ಯಾರೋಪ ಹಾಗೂ ಸಂಬಂಧಗಳು ಮುರಿದುಬೀಳುವ ಜಾಗ ಎಂದೇ ಎಲ್ಲರೂ ಭಾವಿಸುತ್ತಾರೆ. ಆದರೆ, ದೆಹಲಿಯ ಕೌಟುಂಬಿಕ ನ್ಯಾಯಾಲಯವೊಂದು ಇತ್ತೀಚೆಗೆ ಸಾಕ್ಷಿಯಾದ ಘಟನೆ ಮಾತ್ರ ಇಡೀ ದೇಶದ ಕಣ್ಣಾಲಿಗಳನ್ನು ಒದ್ದೆಯಾಗಿಸಿದೆ. ಕಳೆದ 5 ವರ್ಷಗಳಿಂದ ಪರಸ್ಪರ ಮುಖ ನೋಡದಂತೆ ಕೋರ್ಟ್ ಮೆಟ್ಟಿಲೇರಿದ್ದ ದಂಪತಿ, ಒಂದೇ ಒಂದು ಕ್ಷಣದಲ್ಲಿ ಕಹಿ ನೆನಪುಗಳನ್ನು ಮರೆತು, ವಿಚ್ಛೇದನದ ಪತ್ರಗಳನ್ನೇ ಹರಿದು ಹಾಕಿ ಒಟ್ಟಿಗೆ ಬಾಳಲು ನಿರ್ಧರಿಸಿದ ಅಪರೂಪದ ಘಟನೆ ನಡೆದಿದೆ.

ಸುಖಾಂತ್ಯ ಕಂಡ 5 ವರ್ಷಗಳ ಕಹಿ ಹೋರಾಟ

ಶಿಖಾ ಮತ್ತು ಸೌರಭ್ ಎಂಬುವವರ ಐದು ವರ್ಷಗಳ ಕಾನೂನು ಹೋರಾಟ, ಹತಾಶೆ ಮತ್ತು ದ್ವೇಷದ ಗೋಡೆ ಸೆಕೆಂಡುಗಳ ಅವಧಿಯಲ್ಲಿ ಕರಗಿ ನೀರಾಗಿದೆ. 2020ರಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದ ಶಿಖಾ ಮತ್ತು ಸೌರಭ್ ದಾಂಪತ್ಯ ಜೀವನದಲ್ಲಿ ಮದುವೆಯಾದ ಕೆಲವೇ ದಿನಗಳಲ್ಲಿ ಬಿರುಗಾಳಿ ಎದ್ದಿತ್ತು. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಭಾರಿ ಜಗಳಕ್ಕೆ ಕಾರಣವಾಗಿ, ಇಬ್ಬರ ನಡುವೆ ಗಂಭೀರ ಆರೋಪಗಳು ಕೇಳಿಬಂದಿದ್ದವು. ಅಂತಿಮವಾಗಿ ಇಬ್ಬರೂ ಡಿವೋರ್ಸ್‌ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು.

Divorce

ಕಳೆದ ಐದು ವರ್ಷಗಳಿಂದ ಸುದೀರ್ಘ ವಿಚಾರಣೆ, ವಕೀಲರ ವಾದಗಳು ಮತ್ತು ವಾಯ್ದೆಗಳ ನಡುವೆ ಇಬ್ಬರ ಜೀವನವೂ ಕಳೆಯುತ್ತಿತ್ತು. ಈ ಸುದೀರ್ಘ ಕಾನೂನು ಹೋರಾಟವು ಕೇವಲ ದಂಪತಿಯನ್ನಷ್ಟೇ ಅಲ್ಲದೆ, ಅವರ ಕುಟುಂಬವನ್ನೂ ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಕಂಗಾಲು ಮಾಡಿತ್ತು. ವಿಶೇಷವಾಗಿ ಶಿಖಾ ಅವರ ತಂದೆ ಮಗಳ ಭವಿಷ್ಯದ ಚಿಂತೆಯಲ್ಲೇ ತಮ್ಮ ಬಹುಪಾಲು ಉಳಿತಾಯದ ಹಣವನ್ನು ಕೋರ್ಟ್ ಕದನಕ್ಕಾಗಿ ಖರ್ಚು ಮಾಡಿ ಕಷ್ಟದಲ್ಲಿದ್ದರು.

ಭಾರತದಲ್ಲಿರುವ ಅಪರೂಪದ ಪುರುಷ ನದಿ ಇದೇ! ಬ್ರಹ್ಮಪುತ್ರದ 5 ಅಚ್ಚರಿಯ ಸಂಗತಿಗಳು
ಭಾರತದಲ್ಲಿರುವ ಅಪರೂಪದ ಪುರುಷ ನದಿ ಇದೇ! ಬ್ರಹ್ಮಪುತ್ರದ 5 ಅಚ್ಚರಿಯ ಸಂಗತಿಗಳು

ಇಬ್ಬರ ನಡುವಿನ ದ್ವೇಷ ಮರೆಸಿದ ಆ ಒಂದು ಹಾರ್ಟ್ ಅಟ್ಯಾಕ್

ಇಬ್ಬರ ಸಂಬಂಧ ಹದಗೆಟ್ಟಿದ್ದರೂ, ವಿಧಿಯ ಆಟ ಬೇರೆಯೇ ಆಗಿತ್ತು. ಇತ್ತೀಚೆಗೆ ಶಿಖಾ ಅವರ ತಂದೆಗೆ ಹಠಾತ್ ಹೃದಯಾಘಾತ ಸಂಭವಿಸಿತು. ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದ ಶಿಖಾ ಕುಟುಂಬವು ಬೇರೆ ದಾರಿಯಿಲ್ಲದೆ ತಂದೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿತ್ತು. ತಮ್ಮ ನಡುವೆ ಎಷ್ಟೇ ಕಹಿ ಇದ್ದರೂ, ಮಾವನಿಗೆ ಹೃದಯಾಘಾತವಾದ ಸುದ್ದಿ ತಿಳಿಯುತ್ತಿದ್ದಂತೆಯೇ ಸೌರಭ್ ಮಾನವೀಯತೆ ಮೆರೆದರು. ತಕ್ಷಣವೇ ಕಾರ್ಯಪ್ರವೃತ್ತರಾದ ಅವರು, ತಮ್ಮ ಮಾವನನ್ನು ಗುರುಗ್ರಾಮದ ಅತ್ಯಾಧುನಿಕ ಸೌಲಭ್ಯವುಳ್ಳ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ನೆರವಾದರು. ಸೌರಭ್ ಅವರ ಸಮಯಪ್ರಜ್ಞೆ ಮತ್ತು ಸಮಯಕ್ಕೆ ಸರಿಯಾಗಿ ಸಿಕ್ಕ ವೈದ್ಯಕೀಯ ಚಿಕಿತ್ಸೆಯಿಂದಾಗಿ ಶಿಖಾ ತಂದೆ ಪ್ರಾಣಾಪಾಯದಿಂದ ಪಾರಾಗಿ ಚೇತರಿಸಿಕೊಂಡರು. ಕಡು ವೈರತ್ವದ ನಡುವೆಯೂ ಸೌರಭ್ ಮಾಡಿದ ಈ ಒಂದು ಸಹಾಯ ಇಡೀ ಕಥೆಯನ್ನೇ ಬದಲಿಸಿತು.

ಕೋರ್ಟ್ ರೂಮ್‌ನಲ್ಲಿ ಪವಾಡ

ತಂದೆಯ ಅನಾರೋಗ್ಯದ ಮರುದಿನವೇ ಕೋರ್ಟ್‌ನಲ್ಲಿ ವಿಚ್ಛೇದನ ಪ್ರಕರಣದ ಮುಂದಿನ ವಿಚಾರಣೆ ಇತ್ತು. ಎಂದಿನಂತೆ ಇಬ್ಬರ ವಕೀಲರು ಜಿದ್ದಾಜಿದ್ದಿನ ವಾದ ಮಂಡಿಸುತ್ತಿದ್ದರು. ಆದರೆ ಕಕ್ಷಿದಾರರ ಮನಸ್ಸಿನಲ್ಲಿ ಆಗಲೇ ಬದಲಾವಣೆಯ ಗಾಳಿ ಬೀಸುತ್ತಿತ್ತು. ವಾದ ಮುಗಿದ ಬಳಿಕ ನ್ಯಾಯಾಧೀಶರು ಪತಿ ಸೌರಭ್ ಕಡೆ ತಿರುಗಿ, "ನಿಮಗೆ ಈಗಲೂ ವಿಚ್ಛೇದನ ಬೇಕೇ?" ಎಂದು ನೇರ ಪ್ರಶ್ನೆ ಕೇಳಿದರು. ಅದಕ್ಕೆ ಉತ್ತರಿಸುವ ಮುನ್ನ ಸೌರಭ್, ಎದುರು ನಿಂತಿದ್ದ ಪತ್ನಿ ಶಿಖಾ ಅವರತ್ತ ನೋಡಿ ಸಣ್ಣದೊಂದು ಸೌಮ್ಯವಾದ ನಗು ಬೀರಿದರು.

ಆ ಒಂದು ಸಣ್ಣ ನೋಟ ಮತ್ತು ನಗು ಶಿಖಾ ಅವರ ಮನಸ್ಸಿನಲ್ಲಿದ್ದ ವರ್ಷಗಳ ಕೋಪ, ಹಠವನ್ನು ಕ್ಷಣಾರ್ಧದಲ್ಲಿ ಕರಗಿಸಿತು. ತಂದೆಯ ಪ್ರಾಣ ಉಳಿಸಿದ ಪತಿಯ ಮೇಲಿನ ಕೃತಜ್ಞತೆ ಮತ್ತು ಪ್ರೀತಿ ಒಮ್ಮೆಲೇ ಉಕ್ಕಿ ಬಂತು. ಭಾವೋದ್ವೇಗಕ್ಕೆ ಒಳಗಾದ ಶಿಖಾ, ತಮ್ಮ ಕೈಯಲ್ಲಿದ್ದ ಡಿವೋರ್ಸ್‌ ಪತ್ರಗಳನ್ನು ಕೋರ್ಟ್ ರೂಮ್‌ನಲ್ಲೇ ಎಲ್ಲರ ಸಮ್ಮುಖದಲ್ಲಿ ಹರಿದು ಹಾಕಿದರು.

ಕಣ್ಣೀರಿನ ಆಲಿಂಗನ, ಹೊಸ ಜೀವನದ ಆರಂಭ

ಪತ್ರ ಹರಿದು ಹಾಕಿದ್ದಷ್ಟೇ ಅಲ್ಲದೆ, ಓಡೋಡಿ ಬಂದು ಪತಿ ಸೌರಭ್ ಅವರನ್ನು ಬಿಗಿದಪ್ಪಿಕೊಂಡರು. ಇಬ್ಬರೂ ಕೋರ್ಟ್‌ನಲ್ಲೇ ಕಣ್ಣೀರಿಡುತ್ತಾ ಒಂದಾದರು. ಕೇವಲ ಸೆಕೆಂಡುಗಳ ಕಾಲ ಇಡೀ ಕೋರ್ಟ್ ರೂಮ್‌ನಲ್ಲಿ ಸಂಪೂರ್ಣ ಮೌನ ಆವರಿಸಿತ್ತು. ಅಲ್ಲಿ ನೆರೆದಿದ್ದ ವಕೀಲರು, ಸಾರ್ವಜನಿಕರು ಹಾಗೂ ಖುದ್ದು ನ್ಯಾಯಾಧೀಶರು ಈ ಅಪರೂಪದ ದೃಶ್ಯವನ್ನು ಕಂಡು ಭಾವುಕರಾದರು. ಕಾನೂನಾತ್ಮಕವಾಗಿ ಮುರಿದುಬೀಳಬೇಕಾಗಿದ್ದ ಸಂಬಂಧವೊಂದು, ಕೇವಲ ಒಂದೇ ಒಂದು ಮಾನವೀಯತೆಯ ನಡೆ ಹಾಗೂ ಪ್ರೀತಿಯಿಂದಾಗಿ ಮತ್ತೆ ಚಿಗುರೊಡೆಯಿತು. ವರ್ಷಗಟ್ಟಲೆ ವಕೀಲರು ಮಂಡಿಸುವ ವಾದಗಳು ಮಾಡಲಾಗದ ಪವಾಡವನ್ನು ಸೌರಭ್ ಅವರ ಒಂದು ಸಣ್ಣ ಸಹಾಯ ಮತ್ತು ಕರುಣೆ ಮಾಡಿ ತೋರಿಸಿತ್ತು. ಸದ್ಯ ಈ ದೆಹಲಿ ದಂಪತಿಯ ಕಥೆ ದೇಶದಾದ್ಯಂತ ಭಾರಿ ಚರ್ಚೆಯಾಗುತ್ತಿದ್ದು, ಪ್ರೀತಿಗಿಂತ ದೊಡ್ಡ ನ್ಯಾಯಾಲಯ ಯಾವುದೂ ಇಲ್ಲ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+