68, 34, 36, 170.. ಮಹಿಳಾ ಟಿ20 ವಿಶ್ವಕಪ್: ಪಾಕಿಸ್ತಾನಿ ಬೌಲರ್‌ಗಳ ದಿಕ್ಕು ತಪ್ಪಿಸಿದ ಟೀಮ್ ಇಂಡಿಯಾ ಆರ್‌ಸಿಬಿಯನ್ಸ್
Women's T20 World Cup 2026: ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿರುವ ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ಭಾನುವಾರ (ಜೂನ್ 14) ನಡೆದ ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026ರ ಹೈ-ವೋಲ್ಟೇಜ್ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿದೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ತನ್ನ ಅಭಿಯಾನದ ಮೊದಲ ಪಂದ್ಯದಲ್ಲೇ ಭಾರತದ ಪರ ಆರ್‌ಸಿಬಿ ಸ್ಟಾರ್ ಆಟಗಾರ್ತಿಯರಾದ ಸ್ಮೃತಿ ಮಂಧಾನ ಮತ್ತು ರಿಚಾ ಘೋಷ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 170 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ.
ಟಾಸ್ ಗೆದ್ದ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಆದರೆ, ಭಾರತದ ಆರಂಭ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಆರಂಭದಲ್ಲಿ ಪಾಕಿಸ್ತಾನಿ ಬೌಲರ್‌ಗಳ ದಾಳಿಗೆ ಆರಂಭದಲ್ಲಿ ಭಾರತ ತಂಡ ಕೇವಲ 3.2 ಓವರ್‌ಗಳಲ್ಲಿ 18 ರನ್ ಗಳಿಸುವಷ್ಟರಲ್ಲೇ ಪ್ರಮುಖ 2 ವಿಕೆಟ್‌ಗಳನ್ನು ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು. ಈ ಆರಂಭಿಕ ಆಘಾತದಿಂದ ಕ್ರೀಡಾಂಗಣದಲ್ಲಿದ್ದ ಭಾರತೀಯ ಅಭಿಮಾನಿಗಳಲ್ಲಿ ಆತಂಕ ಮೂಡಿತ್ತು.

ಸ್ಮೃತಿ, ಕೌರ್‌ನಿಂದ ಉತ್ತಮ ಜೊತೆಯಾಟ
ಆದರೆ ಈ ಹಂತದಲ್ಲಿ ಜೊತೆಯಾದ ಉಪನಾಯಕಿ ಸ್ಮೃತಿ ಮಂಧಾನ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ ಜೋಡಿ ಜವಾಬ್ದಾರಿಯುತ ಆಟ ಆಡಿದರು. ಆರಂಭದಲ್ಲಿ ನಿಧಾನವಾಗಿ ಇನಿಂಗ್ಸ್ ಕಟ್ಟಿದ ಈ ಜೋಡಿ ನಂತರ ಪಾಕ್ ಬೌಲರ್‌ಗಳ ಮೇಲೆ ಸವಾರಿ ಮಾಡಿತು. ಇವರಿಬ್ಬರು ಮೂರನೇ ವಿಕೆಟ್‌ಗೆ ಕೇವಲ 63 ಎಸೆತಗಳಲ್ಲಿ 91 ರನ್‌ಗಳ ಅಮೂಲ್ಯ ಜೊತೆಯಾಟವಾಡುವ ಮೂಲಕ ಭಾರತ ತಂಡವನ್ನು ಅಪಾಯದ ಸುಳಿಯಿಂದ ಹೊರತಂದರು.
ಭರ್ಜರಿ ಅರ್ಧಶತಕ ಸಿಡಿಸಿದ ಸ್ಮೃತಿ ಮಂಧಾನ
ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸುವ ಸ್ಮೃತಿ ಮಂಧಾನ, ಇಂದಿನ ಪಂದ್ಯದಲ್ಲಿ ಭಾರತದ ಪರ ಅದ್ಭುತ ಬ್ಯಾಟಿಂಗ್ ಆಡಿದರು. ಪಾಕಿಸ್ತಾನಿ ಬೌಲರ್‌ಗಳು ಎಸೆದ ಬಾಲ್‌ಗಳನ್ನ ಮೈದಾನದ ಮೂಲೆ ಮೂಲೆಗೂ ಅಟ್ಟಿದ ಮಂದಾನ ಕೇವಲ 44 ಎಸೆತಗಳಲ್ಲಿ 9 ಆಕರ್ಷಕ ಬೌಂಡರಿ ಹಾಗೂ 2 ಸಿಡಿಲಬ್ಬರದ ಸಿಕ್ಸರ್‌ಗಳ ನೆರವಿನಿಂದ 68 ರನ್ ಚಚ್ಚಿದರು. ಅವರ ಈ ಅಮೋಘ ಅರ್ಧಶತಕದ ಇನಿಂಗ್ಸ್ ಭಾರತಕ್ಕೆ ಉತ್ತಮ ಮೊತ್ತ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿತು. ಪ್ರತಿಯಾಗಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಕೂಡ ಉತ್ತಮ ಸಾಥ್ ನೀಡಿ 35 ಎಸೆತಗಳಲ್ಲಿ 36 ರನ್ ಗಳಿಸಿ ಔಟಾದರು.
ಮಂದಾನ ಮತ್ತು ಹರ್ಮನ್‌ಪ್ರೀತ್ ಔಟಾದ ನಂತರ ಭಾರತದ ರನ್ ವೇಗವನ್ನು ಹೆಚ್ಚಿಸಿದ್ದು ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್. ಆರ್‌ಸಿಬಿ ತಂಡದ ಮತ್ತೊಬ್ಬ ಸ್ಟಾರ್ ಆಟಗಾರ್ತಿಯಾಗಿರುವ ರಿಚಾ ಮೈದಾನಕ್ಕೆ ಬರುತ್ತಿದ್ದಂತೆ ಪಾಕ್ ಬೌಲರ್‌ಗಳ ಮೇಲೆ ಒತ್ತಡ ಹಾಕಿದರು. ಕೇವಲ 17 ಎಸೆತಗಳನ್ನು ಎದುರಿಸಿದ ಅವರು ಬಿರುಸಿನ ಬ್ಯಾಟಿಂಗ್ ಮೂಲಕ 34 ರನ್ ಸಿಡಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ರಿಚಾ ಅವರ ಈ ಸ್ಫೋಟಕ ಆಟದಿಂದಾಗು ಭಾರತ ತಂಡ 170 ರನ್‌ಗಳ ಬೃಹತ್ ಮೊತ್ತವನ್ನು ತಲುಪಲು ಸಾಧ್ಯವಾಯಿತು.
ಇಂಡಿಯಾ ಪರ ಯಾರು ಎಷ್ಟು ರನ್ ಗಳಿಸಿದರು?
ಟೀಮ್ ಇಂಡಿಯಾ ಪರ ಉಪನಾಯಕಿ ಸ್ಮೃತಿ ಮಂದಾನ ಕೇವಲ 44 ಎಸೆತಗಳಲ್ಲಿ 9 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 68 ರನ್ ಚಚ್ಚಿದರು. ನಾಯಕಿ ಹರ್ಮನ್‌ಪ್ರೀತ್ ಕೌರ್ 35 ಎಸೆತಗಳಲ್ಲಿ 36 ರನ್ ಗಳಿಸಿದರೆ, ರಿಚಾ ಘೋಷ್ ಕೇವಲ 17 ಎಸೆತಗಳಲ್ಲಿ 34 ರನ್ ಸಿಡಿಸಿದರು.
ಮುಂದುವರೆದ 'ನೋ ಹ್ಯಾಂಡ್‌ಶೇಕ್' ನೀತಿ
ಬ್ಯಾಟಿಂಗ್ ಅಬ್ಬರದ ಹೊರತಾಗಿ ಈ ಪಂದ್ಯವು ಮತ್ತೊಂದು ಕಾರಣಕ್ಕಾಗಿ ಸುದ್ದಿಯಾಗಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ರಾಜಕೀಯ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಬಿಸಿಸಿಐ ಅನುಸರಿಸಿಕೊಂಡು ಬರುತ್ತಿರುವ 'ನೋ ಹ್ಯಾಂಡ್‌ಶೇಕ್' (ಹಸ್ತಲಾಘವ ಇಲ್ಲ) ನೀತಿ ಈ ಪಂದ್ಯದಲ್ಲೂ ಮುಂದುವರೆದಿದೆ. ಪಂದ್ಯದ ಆರಂಭದಲ್ಲಿ ಟಾಸ್ ಪ್ರಕ್ರಿಯೆ ಮುಗಿದ ನಂತರ ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ಪಾಕಿಸ್ತಾನ ತಂಡದ ನಾಯಕಿ ಫಾತಿಮಾ ಸನಾ ಅವರೊಂದಿಗೆ ಹಸ್ತಲಾಘವ ಮಾಡದೆ ಕೇವಲ ತಲೆದೂಗುವ ಮೂಲಕ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿದರು. ಒಟ್ಟಿನಲ್ಲಿ ವಿಶ್ವಕಪ್‌ನ ಈ ಮೊದಲ ಪಂದ್ಯದಲ್ಲೇ ಭಾರತೀಯ ಮಹಿಳಾ ತಂಡವು ಬ್ಯಾಟಿಂಗ್‌ನಲ್ಲಿ ಅಸಾಧಾರಣ ಪ್ರದರ್ಶನ ನೀಡಿದ್ದು, ಟೂರ್ನಿಯಲ್ಲಿ ಶುಭಾರಂಭ ಮಾಡುವ ಬಲವಾದ ವಿಶ್ವಾಸದಲ್ಲಿದೆ.
68, 34, 36, 170.. ನಂಬರ್‌ಗಳ ಅರ್ಥ
* ಸ್ಮೃತಿ ಮಂದಾನ - 68 ರನ್
* ಹರ್ಮನ್‌ಪ್ರೀತ್ ಕೌರ್ - 36 ರನ್
* ರಿಚಾ ಘೋಷ್ - 34 ರನ್
* 170 - ಟೀಮ್ ಇಂಡಿಯಾ ಕಲೆಹಾಕಿದ ರನ್












Click it and Unblock the Notifications