ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿಯ 'ಸಿಂಗಂ' ಎಸ್ಪಿ ಅಣ್ಣಾಮಲೈ ವರ್ಗಾವಣೆ ಸುದ್ದಿ: ಸ್ಪಷ್ಟನೆ

By ಐಸಾಕ್ ರಿಚರ್ಡ್
|
Google Oneindia Kannada News

ಇವರು ಕಾನೂನು ಬಾಹಿರ ಚಟುವಟಿಕೆ ನಡೆಸುವ ಸಮಾಜಘಾತುಕರಿಗೆ ಸಿಂಹಸ್ವಪ್ನ, ಸಾಮಾನ್ಯ ಜನರ ಪಾಲಿನ ಆಶಾಕಿರಣ, ಯುವಕರಿಗೆ ರೋಲ್ ಮಾಡೆಲ್, ತನ್ನ ನಿರ್ಭೀತಿ ಕಾರ್ಯದಕ್ಷತೆಯಿಂದ ಜಿಲ್ಲೆಯಲ್ಲಿ 'ಸಿಂಗಂ' ಎಂದೇ ಹೆಸರು ಪಡೆದಿರುವ ಉಡುಪಿ ಜಿಲ್ಲೆಯ ಯುವ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ (ಐಪಿಎಸ್).

ನಮ್ಮ ದೇಶದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ಸಿಗುವ ವರ್ಗಾವಣೆಯೆನ್ನುವ ಒತ್ತಡದ ಪಿತೂರಿಗೆ ಅಣ್ಣಾಮಲೈ ಕೂಡಾ ಹೊರತಾಗಿಲ್ಲ ಎನ್ನುವ ಸುದ್ದಿ ಕರಾವಳಿ ಭಾಗದಲ್ಲಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಸದ್ಯ ಸಖತ್ ಆಗಿ ಸುದ್ದಿಯಾಗುತ್ತಿದೆ.

ಇದಕ್ಕೆ ಸದ್ಯ ಪ್ರತಿಕ್ರಿಯಿಸಿರುವ ಅಣ್ಣಾಮಲೈ, ಇದೆಲ್ಲಾ ಗಾಳಿಸುದ್ದಿ. ಇದರಲ್ಲಿ ಏನೂ ನಿಜಾಂಶವಿಲ್ಲ. ನಾನು ಉಡುಪಿ ಎಸ್ಪಿಯಾಗಿಯೇ ಮುಂದುವರಿಯುತ್ತೇನೆಂದು ಹೇಳಿಕೆ ನೀಡಿದ್ದಾರೆ. (ರೈತರ ನಿದ್ದೆಗೆಡಿಸಿದ ಬನಾನ ಸ್ಕಿಪ್ಪರ್ ರೋಗ)

ಅಣ್ಣಾಮಲೈ ಜನಪ್ರಿಯತೆ ಎಷ್ಟಿದೆಯೆಂದರೆ, ಒಂದು ವೇಳೆ ಬಾಲಿವುಡ್ ಬಾದಶಾ ಶಾರೂಖ್ ಖಾನ್ ಉಡುಪಿಯ ಕಾಲೇಜಿಗೆ ಭೇಟಿ ನೀಡಿದರೆ ವಿದ್ಯಾರ್ಥಿಗಳು ಅವರ ಜೊತೆ ಸೆಲ್ಫಿ ತೆಗೆಸಿಕೊಳ್ಳುತ್ತಾರೋ ಇಲ್ಲವೋ ಆದರೆ ಅಣ್ಣಾಮಲೈ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಮುಗಿಬೀಳುತ್ತಿರುವುದು ಇಲ್ಲಿನ ವಸ್ತುಸ್ಥಿತಿ.

ಪೊಲೀಸ್ ಅಂದರೆ ಹೀಗಿರಬೇಕೆಂದು ತೋರಿಸಿಕೊಟ್ಟು, ಪೊಲೀಸ್ ಇಲಾಖೆಯನ್ನು ಜನಸ್ನೇಹಿಯನ್ನಾಗಿ ಮಾಡಿ, ಜನಸಮಾನ್ಯರು ತಮ್ಮ ದುಃಖ ದುಮ್ಮಾನ್ನಗಳನ್ನು ಸುಲಭ ರೀತಿಯಲ್ಲಿ ಪರಿಹರಿಸಿಕೊಳ್ಳುವಂತೆ ಮಾಡಿದ ಪೊಲೀಸ್ ಅಧಿಕಾರಿ ಅಣ್ಣಾಮಲೈ ಈ ಮಾಸಾಂತ್ಯದಲ್ಲಿ ವರ್ಗಾವಣೆಗೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದ್ದವು.

ಕೆಲವೊಂದು ಮೂಲಗಳ ಪ್ರಕಾರ ಹಾಗೂ ಜಾಲತಾಣಗಳಲ್ಲಿ ಹರಿಯುತ್ತಿರುವ ಸುದ್ದಿಯಂತೆ ಇದೇ ಡಿಸೆಂಬರ್ ಅಂತ್ಯದೊಳಗೆ ಅಣ್ಣಾಮಲೈ ಅವರನ್ನು ಬೇರೆಡೆಗೆ ವರ್ಗಾಯಿಸಿ ಇವರ ಸ್ಥಾನಕ್ಕೆ ಸುಮಾರು ಹದಿನೈದು ವರ್ಷಗಳ ಹಿಂದೆ ಉಡುಪಿ ಡಿವೈಎಸ್ಪಿ ಆಗಿದ್ದ ದಿಲೀಪ್ ಅವರನ್ನು ಕೂರಿಸಲಾಗುತ್ತದೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. (ಸಂಸದೀಯ ಕಾರ್ಯದರ್ಶಿಯಾಗಿ ಉಡುಪಿ ಶಾಸಕ)

ಈಗ ಅಣ್ಣಾಮಲೈ ವರ್ಗಾವಣೆ ಸುದ್ದಿಯ ಬಗ್ಗೆ ಸ್ಪಷ್ಟನೆ ನೀಡಿ ಇದೆಲ್ಲಾ ಬೇಸ್ ಲೆಸ್ ಎಂದಿದ್ದಾರೆ. ಆದರೆ ಬೆಂಕಿಯಿಲ್ಲದೇ ಹೊಗೆಯಾಡುತ್ತದೆಯೇ ಎನ್ನುವ ಗುಮಾನಿಗೆ ಉತ್ತರವಿಲ್ಲದಂತಾಗಿದೆ. ಅಣ್ಣಾಮಲೈ ಈ ಭಾಗದಲ್ಲಿ ಯಾಕಿಷ್ಟು ಜನಪ್ರಿಯ, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ.

ಅಧಿಕಾರ ಸ್ವೀಕರಿಸಿದ ಕೂಡಲೇ ಸಮಾಜಘಾತಕರಿಗೆ ಬೆಂಡ್

ಅಧಿಕಾರ ಸ್ವೀಕರಿಸಿದ ಕೂಡಲೇ ಸಮಾಜಘಾತಕರಿಗೆ ಬೆಂಡ್

ಉಡುಪಿ ಜಿಲ್ಲೆ ಕಾರ್ಕಳ ಉಪವಿಭಾಗದ ಎಎಸ್ಪಿ ಆಗಿದ್ದ ಅಣ್ಣಾಮಲೈ ಕಳೆದ ವರ್ಷ ಜನವರಿ ಒಂದರಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಮಟ್ಕಾ ದಂಧೆ, ಕುಂದಾಪುರ ಭಾಗದಲ್ಲಿ ನಿತ್ಯ ನಡೆಯುತ್ತಿದ್ದ ಗರ್ ಗರ್ ಮಂಡಲ್, ಇಸ್ಪೀಟ್, ಜೂಜು-ಜುಗಾರಿ, ಮಣಿಪಾಲ ಭಾಗದಲ್ಲಿ ನಡೆಯುತ್ತಿದ್ದ ಮಸಾಜ್ ಪಾರ್ಲರ್ ಮತ್ತು ವೇಶ್ಯಾವಾಟಿಕೆಗೆ ಬ್ರೇಕ್ ಹಾಕಿದ್ದರು.

ಗೂಡಂಗಡಿಗಳಲ್ಲಿ ಮದ್ಯ ಮಾರಾಟ, ಗಾಂಜಾ ದಂಧೆ

ಗೂಡಂಗಡಿಗಳಲ್ಲಿ ಮದ್ಯ ಮಾರಾಟ, ಗಾಂಜಾ ದಂಧೆ

ರಾತ್ರಿ ವೇಳೆ ಹಾಗೂ ಬೆಳಿಗ್ಗೆ ಹೊತ್ತಿಲ್ಲದ ಹೊತ್ತಲ್ಲಿ ಮದ್ಯ ಮಾರಾಟ, ಗೂಡಂಗಡಿಗಳಲ್ಲೂ ವಿಸ್ಕಿ, ರಮ್, ಗಾಂಜಾ ದಂಧೆಗಳಿಗೆ ಬ್ರೇಕ್ ಹಾಕಿದ್ದು ಅಣ್ಣಾಮಲೈ. ಟ್ರಾಫಿಕ್ ಸುವ್ಯವಸ್ಥೆ ಬಗ್ಗೆ ತನ್ನದೇ ಆದ ಸಮರ್ಪಕ ಉಪಾಯಗಳನ್ನು ಹೊಂದಿದ್ದ ಇವರು ಮಣಿಪಾಲ, ಉಡುಪಿ, ಕುಂದಾಪುರ ಸೇರಿದಂತೆ ಟ್ರಾಫಿಕ್ ಸುವ್ಯವಸ್ಥೆಗೆ ಸೂಕ್ತ ಕ್ರಮಕೈಗೊಂಡಿದ್ದರು. ವಿದ್ಯಾರ್ಥಿಗಳಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿ ಅವರ ಸುರಕ್ಷತೆ ಬಗ್ಗೆ ಆಳವಾದ ಆಲೋಚನೆ ನಡೆಸಿದ್ದು ಎಸ್ಪಿ ಅವರ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿತ್ತು. ಅದಕ್ಕೇ ಇರಬಹುದು ವಿದ್ಯಾರ್ಥಿ ಸಮುದಾಯ ಅವರನ್ನು ಅಷ್ಟು ಪ್ರೀತಿಸುವುದು..

ಅಣ್ಣಾಮಲೈ ಸಾಧನೆಯ ಪಟ್ಟಿ ದೊಡ್ಡದು

ಅಣ್ಣಾಮಲೈ ಸಾಧನೆಯ ಪಟ್ಟಿ ದೊಡ್ಡದು

ಜಿಲ್ಲೆಯಲ್ಲಿ ನಡೆದ ಹಲವು ಕೊಲೆ ಕೇಸುಗಳ ಪತ್ತೆ ಕಾರ್ಯದಲ್ಲಿ ಅಣ್ಣಾಮಲೈ ತೋರಿದ ಕಾರ್ಯದಕ್ಷತೆ ಭಲೇ ಎನ್ನುವಂತಿತ್ತು. ಬೈಂದೂರು ಅಕ್ಷತಾ ದೇವಾಡಿಗ ಕೊಲೆ ಪ್ರಕರಣದ ಆರೋಪಿಗಳನ್ನು ಮೂರು ದಿನಗಳಲ್ಲಿ, ಬೆಳ್ವೆಯಲ್ಲಿ ನಡೆದ ಉಷಾ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳಿಬ್ಬರನ್ನು ಎರಡು ದಿನಗಳಲ್ಲಿ ಬಂಧಿಸಿದ್ದು, ಉಡುಪಿ ಜಿಲ್ಲೆಯ ಹಲವೆಡೆ ದೇವಾಲಯ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಸೊತ್ತು ಸಮೇತ ಬಂಧಿಸಿ ಅಣ್ಣಾಮಲೈ ಈ ಭಾಗದಲ್ಲಿ ಸಿಂಗಂ ಎಂದೇ ಹೆಸರು ಪಡೆದಿದ್ದಾರೆ.

ವರ್ಗ ಮಾಡಿದ್ರೆ ಸಾರ್ವಜನಿಕರ ಹೋರಾಟ?

ವರ್ಗ ಮಾಡಿದ್ರೆ ಸಾರ್ವಜನಿಕರ ಹೋರಾಟ?

ಉಡುಪಿ ಎಸ್ಪಿ ವರ್ಗಾವಣೆ ಬಗ್ಗೆ ಜಾಲತಾಣಗಳಲ್ಲಿ ಅಂತೆಕಂತೆ ಸುದ್ದಿಗಳು ರವಾನೆಯಾಗುತ್ತಿದ್ದಂತೆಯೇ ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಎಸ್ಪಿ ಅವರನ್ನು ಜಿಲ್ಲೆಯಲ್ಲೇ ಉಳಿಸಿಕೊಳ್ಳಲೇಬೇಕು ಎನ್ನುವ ಮಾತುಗಳು ಸಾರ್ವಜನಿಕ ವಲಯ ಹಾಗೂ ವಿವಿಧ ಸಂಘಟನೆಗಳಿಂದ ಕೇಳಿಬರುತ್ತಿದ್ದು, ಒಂದೊಮ್ಮೆ ವರ್ಗಾವಣೆ ಖಚಿತವೇ ಹೌದಾದರೇ ಹೋರಾಟದ ಹಾದಿ ಹಿಡಿಯಲು ವಿವಿಧ ಸಂಘಟನೆಗಳು ಸಜ್ಜಾಗಿವೆ.

ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರು ಹೇಳುವುದು ಹೀಗೆ

ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರು ಹೇಳುವುದು ಹೀಗೆ

ಅಣ್ಣಾಮಲೈ ವರ್ಗಾವಣೆ ಬಗ್ಗೆ ಮಾಹಿತಿ ಬರುತ್ತಿದ್ದು, ಈ ನಿಲುವು ಸರಿಯಲ್ಲ ಎಂಬುದನ್ನು ಸ್ಪಷ್ಟವಾಗಿ ಸರಕಾರ ಹಾಗೂ ಉಸ್ತುವಾರಿ ಸಚಿವರಿಗೆ ತಿಳಿಸಿದ್ದೇವೆ. ಸಿದ್ದರಾಮಯ್ಯ ಸರಕಾರ ಅಧಿಕಾರಕ್ಕೆ ಬಂದ ನಂತರ ಜಿಲ್ಲೆಯಲ್ಲಿ ಐದು ಜಿಲ್ಲಾಧಿಕಾರಿಗಳು, ಮೂರು ಎಸ್ಪಿಗಳು ಬದಲಾಗಿದ್ದಾರೆ. ಅಣ್ಣಾಮಲೈ ಈ ಜಿಲ್ಲೆ ಕಂಡ ಖಡಕ್ ಅಧಿಕಾರಿ, ಇವರ ವರ್ಗಾವಣೆಗೆ ನಮ್ಮ ತೀವ್ರ ವಿರೋಧವಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಹೇಳಿದ್ದಾರೆ.

ಖಾವಿಧಾರಿಯೊಬ್ಬರ 'ಒತ್ತಡ'

ಖಾವಿಧಾರಿಯೊಬ್ಬರ 'ಒತ್ತಡ'

ಅಣ್ಣಾಮಲೈ ಎತ್ತಂಗಡಿ ಮಾಡಿಸಲು ರಾಜಕೀಯ ಷ್ಯಡ್ಯಂತ್ರ ಮತ್ತು ಅದಕ್ಕಿಂತ ಹೆಚ್ಚಾಗಿ ಕರಾವಳಿ ಭಾಗದ ಪ್ರಭಾವಿ ಖಾವಿಧಾರಿಯೊಬ್ಬರ 'ಒತ್ತಡ' ಮೇಲುಗೈ ಸಾಧಿಸಿದ್ದು, ರಾಜ್ಯ ಗೃಹ ಇಲಾಖೆ ಅಣ್ಣಾಮಲೈ ವರ್ಗಾವಣೆಗೆ ಹಸಿರು ನಿಶಾನೆ ತೋರಿಸಿ ಅವರನ್ನು ಸಂತುಷ್ಟರನ್ನಾಗಿ ಮಾಡಲು ಮುಂದಾಗಿದೆ ಎನ್ನುವ ಸುದ್ದಿ ಈ ಭಾಗದಲ್ಲಿ ಚಾಲ್ತಿಯಲ್ಲಿದೆ.

ಪೇಜಾವರ ಶ್ರೀಗಳ ಕೈವಾಡ?

ಪೇಜಾವರ ಶ್ರೀಗಳ ಕೈವಾಡ?

ಅಣ್ಣಾಮಲೈ ವರ್ಗಾವಣೆ ಹಿಂದೆ ಜಿಲ್ಲೆ ಮತ್ತು ಹೊರ ಜಿಲ್ಲೆಯ ಧಾರ್ಮಿಕ ನಾಯಕರು ಕೈಯಾಡಿಸಿದ್ದಾರೆ ಎಂಬ ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿವೆ. ಅಲ್ಲದೇ, ಸ್ವತಃ ಪೇಜಾವರ ಶ್ರೀಗಳ ಕೈವಾಡವಿದೆ ಎಂಬ ವಂದಂತಿಗಳೂ ಹರಿದಾಡುತ್ತಿವೆ. ಆದರೆ ಪೇಜಾವರ ಶ್ರೀಗಳೇ ಅಣ್ಣಾಮಲೈ ಪ್ರಾಮಾಣಿಕ ಮತ್ತು ಜಿಲ್ಲೆ ಕಂಡ ದಕ್ಷ ಅಧಿಕಾರಿ. ಅವರ ವರ್ಗಾವಣೆಯಲ್ಲಿ ನನ್ನ ಪಾತ್ರವಿಲ್ಲ, ಅವರನ್ನು ಉಳಿಸಿಕೊಳ್ಳುವಲ್ಲಿ ನಾನು ಕೂಡಾ ಪ್ರಯತ್ನಿಸುತ್ತೇನೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

English summary
Annamalai K, Udupi District Superintendent of Police, has clarified that the rumours spread in the social media and some news media on his transfer are baseless. The Government of Karnataka has not issued any notification on my transfer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X