ಉಡುಪಿ ಪುತ್ತಿಗೆ ಪರ್ಯಾಯೋತ್ಸಕ್ಕೆ ಅಷ್ಟ ಮಠಾಧೀಶರು ಗೈರು: ಸ್ವಾಮೀಜಿಗಳ ನಡುವಿನ ಅಸಮಾಧಾನವೇನು?

ಉಡುಪಿ, ಜನವರಿ 18: ಉಡುಪಿಯ ಪುತ್ತಿಗೆ ಮಠದ ಪರ್ಯಾಯ ಅದ್ಧೂರಿಯಾಗಿ ಸಂಪನ್ನಗೊಂಡಿದೆ. ಪುತ್ತಿಗೆ ಮಠದ ಪರ್ಯಾಯ ಯತಿ ಸುಗುಣೇಂದ್ರ ತೀರ್ಥರನ್ನು ವಾಹನ ಪಲ್ಲಕ್ಕಿ ಮೂಲಕ ಶ್ರೀಕೃಷ್ಣ ಮಠದವರೆಗೆ ಕರೆತರಲಾಯಿತು. ಉಡುಪಿಯಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ಪರ್ಯಾಯ ಮಹೋತ್ಸವ ನಾಡಹಬ್ಬದ ರೂಪದಲ್ಲಿ ಸಂಪನ್ನಗೊಂಡಿದೆ.

ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರಿಗೆ ಕೃಷ್ಣನ ಪೂಜಾಧಿಕಾರ ಹಸ್ತಾಂತರಗೊಂಡಿದೆ. ಜೋಡುಕಟ್ಟೆಯಿಂದ ಕೃಷ್ಣ ಮಠದವರೆಗೆ ಅಬ್ಬರದ ಪರ್ಯಾಯ ಮೆರವಣಿಗೆ ನಡೆಯಿತು .30ಕ್ಕೂ ಅಧಿಕ ಧಾರ್ಮಿಕ ಚಿತ್ರಣದ ಟ್ಯಾಬ್ಲೋಗಳು, ಸುಮಾರು 50 ಬಗೆ ಬಗೆಯ ಕಲಾತಂಡಗಳು, ಚಂಡೆ ,ಡೊಳ್ಳು ಕುಣಿತ, ಹುಲಿವೇಷ ಸಹಿತ ಸುಮಾರು ಎರಡು ಕಿಲೋ ಮೀಟರ್ ಉದ್ದದ ಮೆರವಣಿಗೆ ಗಮನ ಸೆಳೆಯಿತು.

Udupi 8 Mutts Abbot Absent For Puttige Paryayayotsav

ಈ ಬಾರಿಯ ಪರ್ಯಾಯ ಮೆರವಣಿಗೆಗೆ ಅಯೋಧ್ಯಾ ರಾಮಮಂದಿರ ನಿರ್ಮಾಣ ಪ್ರೇರಣೆಯಾಗಿತ್ತು. ಮೆರವಣಿಗೆಯ ಆರಂಭದಲ್ಲೇ ಶ್ರೀರಾಮ ಮಂದಿರದ ಪ್ರತಿಕೃತಿ ಜೋಡಿಸಿಟ್ಟು ಗಮನ ಸೆಳೆದರು. ಪುತ್ತಿಗೆ ಶ್ರೀಪಾದರು ಸಾಗರೋಲಂಘನ ಮಾಡಿದ್ದಾರೆ ಎಂಬ ಕಾರಣಕ್ಕೆ ಎರಡು ದಶಕಗಳಿಂದ ಅಷ್ಟ ಮಠಾಧೀಶರು ಅಂತರ ಕಾಯ್ದುಕೊಂಡು ಬಂದಿದ್ದಾರೆ. ಈ ಬಾರಿಯ ಪರ್ಯಾಯದಲ್ಲೂ ಪಲ್ಲಕಿ ಏರದೆ, ಪರ್ಯಾಯ ದರ್ಬಾರಿನಲ್ಲಿ ಭಾಗವಹಿಸದೆ ತಮ್ಮ ಅಸಮಾಧಾನ ಮುಂದುವರಿಸಿದ್ದಾರೆ.

ಉಳಿದ ಮಠಾಧೀಶರ ಗೈರಿನಲ್ಲೇ ಪುತ್ತಿಗೆ ಶ್ರೀಪಾದರು ತಮ್ಮ ಪೂಜಾಧಿಕಾರ ಪಡೆದು ಕೃಷ್ಣಪೂಜೆ ಆರಂಭಿಸಿದ್ದಾರೆ. ಪರ್ಯಾಯ ಪೂರೈಸಿದ ಕೃಷ್ಣಾಪುರ ಮಠಾಧೀಶರು ಅಧಿಕಾರ ಹಸ್ತಾಂತರಿಸುವುದು ಸಂಪ್ರದಾಯ. ಅವರ ಅನುಪಸ್ಥಿತಿಯಲ್ಲಿ ಅದಮಾರು ಮಠದ ವಿಶ್ವ ಪ್ರಿಯ ತೀರ್ಥರು ಪುತ್ತಿಗೆ ಸ್ವಾಮೀಜಿಯವರನ್ನು ಸರ್ವಜ್ಞಪೀಠದಲ್ಲಿ ಕುಳ್ಳಿರಿಸಿ ಅಧಿಕಾರ ಹಸ್ತಾಂತರಿಸಿ ಗಮನಸೆಳೆದರು.

ಸರ್ವಜ್ಞ ಪೀಠ ಏರುವ ಮುನ್ನ ಉಭಯ ಶ್ರೀಗಳು ಪಲ್ಲಕ್ಕಿಯಲ್ಲಿ ಮೆರವಣಿಗೆಯಲ್ಲಿ ಸಾಗಿ ಬಂದರು. ರಥಬೀದಿಗೆ ಬಂದ ಸ್ವಾಮೀಜಿಗಳನ್ನು ಸಾಂಪ್ರದಾಯಿಕವಾಗಿ ಬಿಳಿಬಟ್ಟೆ ಹಾಸಿ ಸ್ವಾಗತಿಸಲಾಯ್ತು. ಬಳಿಕ ಕನಕನ ಕಿಂಡಿ ಮೂಲಕ ಕೃಷ್ಣ ದರ್ಶನ ಪಡೆದು ಅನಂತೇಶ್ವರ ಚಂದ್ರ ಮೌಳೀಶ್ವರ ದೇವರ ದರ್ಶನ ಪಡೆದು ಕೀಲಿ ಕೈ ಸಟ್ಟುಗ ಪಡೆದು ಸರ್ವಜ್ಞ ಪೀಠ ಏರಿ ಅಧಿಕಾರ ವಹಿಸಿಕೊಂಡರು.

Udupi 8 Mutts Abbot Absent For Puttige Paryayayotsav

ಆ ಬಳಿಕ ಬಡಗುಮಾಳಿಗೆಯಲ್ಲಿ ಮೂಲ ಸ್ವರೂಪದ ಅರಳು ಗದ್ದುಗೆ ಮೂಲಕ ದರ್ಬಾರ್ ನಡೆಯಿತು. ಆ ಬಳಿಕ ರಾಜಾಂಗಣದಲ್ಲಿ ಸಾರ್ವಜನಿಕ ದರ್ಬಾರ್ ನಡೆಸಿ, ಪರ್ಯಾಯದ ಧಾರ್ಮಿಕ ವಿಧಿವಿಧಾನ ಸಂಪನ್ನ ಗೊಂಡಿತು. ರಾಜಾಂಗಣದಲ್ಲಿ ಅರಮನೆಯ ಮಾದರಿಯಲ್ಲಿ ತಯಾರು ಮಾಡಿದ ಸಾರ್ವಜನಿಕ ದರ್ಬಾರ್‌ನಲ್ಲಿ ವಿರಾಜಮಾನರಾದ ಪರ್ಯಾಯ ಯತಿ ಸುಗುಣೇಂದ್ರ ತೀರ್ಥ ರು ಶಿಷ್ಯ ಸುಶ್ರೀಂದ್ರ ತೀರ್ಥರು ದರ್ಬಾರ್ ನಡೆಸಿದರು. ಇಲ್ಲೂ ಕೂಡ ಅಷ್ಡಮಠಾಧೀಶರು ಹಾಜರಾಗಿಲ್ಲ.

ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ , ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪರ್ಯಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಲ್ಲದೇ ಆಸ್ಟ್ರೇಲಿಯಾದ ಮಾಜಿ ಸಚಿವ ಲ್ಯೂಕ್ ಡನೆಲನ್, ಅಮೇರಿಕದ ವಿಶ್ಚ ಧಾರ್ಮಿಕ ಮತ್ತು ಆ್ಯಧ್ಯಾತ್ಮಿಕ ಸಂಸ್ಥೆ ಉಪಾಧ್ಯಕ್ಷ ಡಾ. ವಿಲಿಯಂ ವೆಂಡ್ಲೆ, ಜಪಾನಿನ ರಿಶೋ ಕೋಶಿ ಕ್ಯಾಯಾದ ಸಂಘಟನೆಯ ನಿಯೋಜಿತ ಅಧ್ಯಕ್ಷೆ ರೆವರೆಂಡ್ ಕೋಶೋ ನಿವಾನೋ ಸಾರ್ವಜನಿಕವಾಗಿ ದರ್ಬಾರ್‌ನಲ್ಲಿ ಗಮನಸೆಳೆದರು.

Udupi 8 Mutts Abbot Absent For Puttige Paryayayotsav

ಮುಂದಿನ ಎರಡು ವರ್ಷಗಳ ಕಾಲ ಪುತ್ತಿಗೆ ಶ್ರೀಗಳು ಕೃಷ್ಣಪೂಜೆ ಮಾಡುತ್ತಾರೆ. ಮೂವತ್ತಕ್ಕೂ ಅಧಿಕ ರಾಷ್ಟ್ರಗಳಲ್ಲಿ ಧರ್ಮಪ್ರಚಾರ ನಡೆಸಿ, ಕ್ರಾಂತಿಕಾರಿ ಹೆಜ್ಜೆಯಿರಿಸಿದ ಸ್ವಾಮೀಜಿಗೆ ಇತರ ಮಠಾಧೀಶರ ಸಹಕಾರವಿಲ್ಲದಿರುವುದು ಮಾತ್ರ ಸೋಜಿಗವೆನಿಸಿದೆ ಎನ್ನುವುದು ಕೆಲವು ಭಕ್ತರ ಅಭಿಪ್ರಾಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+