ತೋಡಿನೊಳಗೆ ಬಿದ್ದು ಇಡೀ ರಾತ್ರಿ ನೋವಿನಿಂದ ಕಳೆದ ವೃದ್ಧ
ಉಡುಪಿ, ನವೆಂಬರ್ 16: ರಾತ್ರಿ ನಡೆದು ಹೋಗುವಾಗ ತೋಡಿಗೆ ಬಿದ್ದ ವೃದ್ಧರೊಬ್ಬರು ಇಡೀ ರಾತ್ರಿ ಅದರೊಳಗೇ ಕಳೆದಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ಪಾದಚಾರಿ ವೃದ್ಧರೊಬ್ಬರು ನಿನ್ನೆ ರಾತ್ರಿ ಉಡುಪಿ ಬ್ರಹ್ಮಗಿರಿ ಕಾನ್ವೆಂಟ್ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ರಸ್ತೆ ಪಕ್ಕದ ಆಳವಾದ ತೋಡಿಗೆ ಬಿದ್ದಿದ್ದಾರೆ. ಜನ ಸಂಚಾರ ಕಡಿಮೆ ಇರುವ ರಸ್ತೆಯಾದ ಕಾರಣ ಎಷ್ಟು ಕೂಗಿದರೂ ಯಾರಿಗೂ ಕೇಳಿಲ್ಲ.
ಏನು ಮಾಡಲೂ ತೋಚದೆ ರಾತ್ರಿ ಇಡೀ ನರಳಾಡುತ್ತಾ ತೋಡಿನಲ್ಲೇ ಕಳೆದಿದ್ದಾರೆ. ಇಂದು ನಸುಕಿನ ಜಾವ ನರಳಾಟದ ಧ್ವನಿ ಕೇಳಿದ ಸಮೀಪದ ಮನೆಯವರು, ಹುಡುಕಾಟ ನಡೆಸಿದಾಗ ವೃದ್ಧರೊಬ್ಬರು ಚಪ್ಪಡಿ ಹಾಸಿದ್ದ ತೋಡಿನೊಳಗೆ ಅಪಾಯದ ಸ್ಥಿತಿಯಲ್ಲಿ ಇರುವುದು ಕಂಡುಬಂದಿದೆ.

ತಕ್ಷಣ ಮನೆಯವರು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರಿಗೆ ಸುದ್ದಿ ಮುಟ್ಟಿಸಿದ್ದಾರೆ. ಘಟನಾಸ್ಥಳಕ್ಕೆ ಬಂದ ಅವರು ವೃದ್ಧರನ್ನು ರಕ್ಷಿಸಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ವೃದ್ಧ ತೆಂಕ ಎರ್ಮಾಳು ನಿವಾಸಿ ವಾಸು ಪೂಜಾರಿ (70) ಎಂದು ಹೇಳಿಕೊಂಡಿದ್ದಾರೆ.












Click it and Unblock the Notifications