ಕಾಪು ಮಾರಿಗುಡಿ; ಮುಸ್ಲಿಂಮರಿಂದ ವಾದ್ಯ, ಕ್ರೈಸ್ತರಿಂದ ಹೂ ಸಮರ್ಪಣೆ
ಉಡುಪಿ, ಮಾರ್ಚ್ 22; ಉಡುಪಿಯ ಕಾಪು ತಾಲೂಕಿನ ಇತಿಹಾಸ ಪ್ರಸಿದ್ಧ ಮಾರಿಗುಡಿ ಜಾತ್ರೆಯಲ್ಲಿ ಹಿಂದೂಯೇತರರಿಗೆ ವ್ಯಾಪಾರ ನಿಷೇಧ ವಿಚಾರ ಭಾರೀ ವಿವಾದವನ್ನು ಹುಟ್ಟು ಹಾಕಿದೆ. ವಿವಾದ ನಡುವಲ್ಲೂ ಕಾಪು ಮಾರಿಗುಡಿ ಜಾತ್ರೆ ಆರಂಭವಾಗಿದೆ. ಸಾವಿರಾರು ಭಕ್ತರು ಜಾತ್ರೆಗೆ ಆಗಮಿಸುತ್ತಿದ್ದರೆ.
ಹಿಂದೂ ಸಂಘಟನೆಗಳು ಮತ್ತು ದೇವಸ್ಥಾನದ ಆಡಳಿತ ಮಂಡಳಿ ಹೇಳಿರುವಂತೆ ಮಾರಿ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರ ನಿಷೇಧ ಮಾಡಲಾಗಿದೆ. ಹಿಜಾಬ್ ತೀರ್ಪು ವಿರೋಧಿಸಿ ಬಂದ್ ಕರೆ ನೀಡಿದ್ದವರಿಗೆ ತಿರುಗೇಟು ನೀಡಿದ ಹಿಂದೂ ಸಂಘಟನೆಗಳು ಮಾರಿ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅಂಗಡಿ ಹಾಕಲು ಅವಕಾಶವನ್ನು ನೀಡಿಲ್ಲ.
ಜಾತ್ರೋತ್ಸವದ ಹರಾಜು ಪ್ರಕ್ರಿಯೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡಿಲ್ಲ. ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡದಂತೆ ಹಿಂದೂ ಸಂಘಟನೆಗಳ ಒತ್ತಾಯದ ಹಿನ್ನಲೆಯಲ್ಲಿ ದೇವಾಲಯದ ವ್ಯವಸ್ಥಾಪನಾ ಮಂಡಳಿ ಮಣಿದಿದೆ.

ಹರಾಜಿನಲ್ಲಿ ಅವಕಾಶ ಇಲ್ಲದ ಕಾರಣ ಯಾವುದೇ ಮುಸ್ಲಿಂ ವ್ಯಾಪಾರಿಗಳು ಜಾತ್ರೋತ್ಸವ ಹರಾಜು ಪ್ರಕ್ರಿಯೆಗೆ ಆಗಮಿಸಿಲ್ಲ. ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಯುವ ಕಾಪು ಮಾರಿಪೂಜೆ ಇದಾಗಿದ್ದು ಇದೇ ಮೊದಲ ಬಾರಿಗೆ ಈ ನಿಯಮವನ್ನು ಜಾರಿಗೆ ತರಲಾಗಿದೆ.
ದೇವಸ್ಥಾನದ ಆಡಳಿತ ಮಂಡಳಿಗೆ ಹಿಂದೂ ಸಂಘಟನೆಗಳು ಹಕ್ಕೋತ್ತಾಯ ಮಾಡಿದೆ. ಯಾವುದೇ ಹಿಂದೂ ದೇವಾಲಯಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡಕೂಡದು. ಧಾರ್ಮಿಕ ದತ್ತಿ ಕಾನೂನಿನ ಅನ್ವಯ ಅವಕಾಶ ನಿರಾಕರಣೆ ಮಾಡಬೇಕು. ದೇವಾಲಯ ಪರಿಸರದಲ್ಲಿ ಹಿಂದೂಯೇತರರಿಗೆ ಗುತ್ತಿಗೆ ನೀಡಬಾರದು. ಜಮೀನು ಕಟ್ಟಡ ನಿವೇಶನ ಗುತ್ತಿಗೆ ನೀಡಬಾರದು. ಧಾರ್ಮಿಕ ದತ್ತಿ ಕಾನೂನಿನ ಅನ್ವಯ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಹೇರಬೇಕು ಅಂತಾ ಹಿಂದೂ ಸಂಘಟನೆಗಳು ಒತ್ತಾಯ ಮಾಡಿದೆ.
30 ಕೋಟಿಗೂ ಅಧಿಕ ವಹಿವಾಟು ನಡೆಯುವ ಕಾಪು ಮಾರಿಜಾತ್ರೆ ಇದಾಗಿದ್ದು, ಮುಜರಾಯಿ ಕಾಯ್ದೆ ನಿಯಮಾವಳಿಯಲ್ಲಿರುವ ಅಂಶವನ್ನೇ ಜಾರಿಗೊಳಿಸಿರುವ ಬಗ್ಗೆ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾರಿಗುಡಿ ದೇವಸ್ಥಾನದ ಆಡಳಿಯ ಮಂಡಳಿ ಸದಸ್ಯ ಕಿರಣ್ ಪ್ರತಿಕ್ರಿಯೆ ನೀಡಿದ್ದಾರೆ, "ಹಿಜಾಬ್ ಬಗ್ಗೆ ಹೈಕೋರ್ಟ್ ತೀರ್ಪನ್ನೇ ಸ್ವೀಕರಿಸದಿರುವುದು ದೇಶದ ದೊಡ್ಡ ದುರಂತವಾಗಿದೆ. ಕಾಪು ತಾಲೂಕಿನಲ್ಲಿ ಸರ್ವಧರ್ಮೀಯರು ಆತ್ಮೀಯರಾಗಿದ್ದಾರೆ. ಕಾಪು ಮಾರಿಗುಡಿಯಲ್ಲಿ ವಾದ್ಯ ಸೇವೆ ಕೊಡುವವರು ಮುಸ್ಲಿಂ ಸಮುದಾಯದವರು. ದೇವರಿಗೆ ಮಲ್ಲಿಗೆ ಹೂವು ಸಮರ್ಪಿಸುವವರು ಕ್ರೈಸ್ತ ಸಮುದಾಯವರು" ಎಂದರು.
"ದೇವರಿಗೆ ಧರ್ಮ ಇಲ್ಲ, ಆದರೆ ಮತಾಂಧರು ಮಾಡಿದ ಕೆಲಸಕ್ಕೆ ದೇವಾಲಯದ ಆಡಳಿತ ಮಂಡಳಿ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ ಹಾಕುವಂತಾಗಿದೆ. ಧಾರ್ಮಿಕ ದತ್ತಿ ನಿಯಮದಲ್ಲೂ ಹಿಂದೂಯೇತರರಿಗೆ ವ್ಯಾಪಾರಕ್ಕೆ ಅವಕಾಶ ಇಲ್ಲ ಎನ್ನುವ ನಿಯಮ ಇದೆ. ಈ ಕಾನೂನನ್ನು ಈ ಬಾರಿ ಕಟ್ಟುನಿಟ್ಟಾಗಿ ಜಾರಿ ಮಾಡಲಾಗಿದೆ" ಎಂದು ಹೇಳಿದ್ದಾರೆ.












Click it and Unblock the Notifications