ಮರವಂತೆ ಬ್ರೇಕ್ ವಾಟರ್ ಹೊರಬಂದರು: ಎರಡನೇ ಹಂತದ ಕಾಮಗಾರಿಗೆ ಮೀನಾಮೇಷ
ಉಡುಪಿ, ಜೂನ್ 28: ರಾಜ್ಯದ ಪ್ರಪ್ರಥಮ ಬ್ರೇಕ್ ವಾಟರ್ ಹೊರಬಂದರು ಎನ್ನುವ ಖ್ಯಾತಿಗೆ ಪಾತ್ರವಾಗಬೇಕಿದ್ದ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ವಿಶ್ವ ಪ್ರಸಿದ್ಧ ಮರವಂತೆ ಬೀಚ್ ಪಕ್ಕದಲ್ಲಿರುವ ಸುಮಾರು ಒಂದು ಕಿಲೋಮೀಟರ್ ಹೊರಬಂದರು ನಿರ್ಮಾಣ ಕಾರ್ಯ ಕಳೆದ 12 ವರ್ಷಗಳ ಹಿಂದೆ ಪ್ರಾರಂಭವಾಗಿತ್ತು. ಮೊದಲನೇ ಹಂತದ ಕಾಮಗಾರಿ ಕಳಪೆಯಾಗಿರುವ ಹಿನ್ನೆಲೆಯಲ್ಲಿ ಎರಡನೇ ಹಂತದ ಕಾಮಗಾರಿಗೆ ಸದ್ಯ ಅನುದಾನವು ಮಂಜೂರಾಗಿದ್ದರು ಯಾಕೋ ಏನೋ ಕಾಮಗಾರಿ ಮುಂದುವರಿಸಲು ಸರಕಾರ ಮೀನಾಮೇಷ ಎಣಿಸಿದಂತಿದೆ.
ಉಡುಪಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ಮತ್ತು ವಿಶ್ವ ಪ್ರಸಿದ್ಧ ಸಮುದ್ರ ತೀರಗಳಲ್ಲಿ ಒಂದಾದ ಮರವಂತೆ ಬೀಚ್ ಯಾರಿಗೆ ಗೊತ್ತಿಲ್ಲ ಹೇಳಿ. ಒಂದು ಕಡೆ ಹೊಳೆ ಇನ್ನೊಂದು ಕಡೆ ಸಮುದ್ರ, ಮಧ್ಯದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 66 ಇದು ಇಲ್ಲಿನ ವಿಶೇಷತೆಗೆ ಕಾರಣವಾಗಿದೆ. ಈ ವಿಶ್ವ ಪ್ರಸಿದ್ಧ ಬೀಚ್ ನ ಕೆಲವೇ ಮೀಟರ್ ಗಳ ದೂರದಲ್ಲಿ ಮರವಂತೆಯ ಸುಮಾರು 250ಕ್ಕೂ ಅಧಿಕ ನಾಡ ದೋಣಿ ಮೀನುಗಾರರು ಬದುಕು ಕಟ್ಟಿಕೊಂಡಿದ್ದಾರೆ.

ಕಳೆದ 12 ವರ್ಷಗಳ ಹಿಂದೆ ಇಲ್ಲಿನ ಮೀನುಗಾರರಿಗೆ ಅನುಕೂಲವಾಗಬೇಕು ಎನ್ನುವ ಉದ್ದೇಶಕ್ಕೆ ರಾಜ್ಯದಲ್ಲಿ ವಿನೂತನ ಎನ್ನುವಂತೆ ಬ್ರೇಕ್ ವಾಟರ್ ಮಾದರಿಯ ಹೊರಬಂದರು ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಕೃತಕವಾಗಿ ಸುಮಾರು ಒಂದು ಕಿಲೋಮೀಟರ್ ಉದ್ದಕ್ಕೆ ಬಂದರನ್ನು ನಿರ್ಮಿಸಿ ಸಮುದ್ರದ ಅಲೆಗಳ ಒತ್ತಡವನ್ನು ತಡೆಯಲು ಟೆಟ್ರಾ ಪಾಟ್ಸ್ ಗಳನ್ನ ಬಳಸಿ ಸುಂದರವಾದ ಹೊರಬಂದರು ನಿರ್ಮಾಣ ಕಾರ್ಯ ನಡೆದಿತ್ತು. ಆದರೆ ಇದುವರೆಗೆ ಈ ಕಾಮಗಾರಿ ಪೂರ್ಣ ಆಗದೆ ಇರುವುದು ಮೀನುಗಾರರಿಗೆ ದೊಡ್ಡ ತಲೆ ನೋವಾಗಿದೆ.
ಮೊದಲನೇ ಹಂತದ ಕಾಮಗಾರಿ ನಡೆಸಿದ ಗುತ್ತಿಗೆ ಸಂಸ್ಥೆ ಕಳಪೆ ಕಾಮಗಾರಿ ಮಾಡಿರುವ ಹಿನ್ನೆಲೆಯಲ್ಲಿ ಹೊರಬಂದರು ಕಾಮಗಾರಿಗೆ ಬ್ರೇಕ್ ನೀಡಲಾಗಿತ್ತು. ಸದ್ಯ ಎರಡನೇ ಹಂತದ ಕಾಮಗಾರಿಗಾಗಿ 85 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಅನುದಾನ ಬಿಡುಗಡೆಯಾದರೂ ಕೂಡ ಕಾಮಗಾರಿ ಆರಂಭಿಸಲು ಸಿ ಆರ್ ಝಡ್ ನೆಪ ಹೇಳಿ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಇದರಿಂದ ನಾಡ ದೋಣಿ ಮೀನುಗಾರರು ಬಂದರಿಂದ ಒಳಗೆ ಪ್ರವೇಶ ಮಾಡುವುದೇ ಕಷ್ಟ ಎನ್ನುವಂತ ಸ್ಥಿತಿ ನಿರ್ಮಾಣವಾಗಿದೆ.
ಇನ್ನು ಅಪೂರ್ಣವಾಗಿರುವ ಬಂದರಿನ ಒಳಗೆ ಲಕ್ಷಾಂತರ ರೂಪಾಯಿ ಮೌಲ್ಯದ ನಾಡ ದೋಣಿಗಳನ್ನು ನಿಲ್ಲಿಸುವುದು ಕೂಡ ಸುರಕ್ಷತೆಯ ದೃಷ್ಟಿಯಿಂದ ಕಷ್ಟ ಸಾಧ್ಯ ಎನ್ನುವಂತಾಗಿದೆ. ಸುಮಾರು 15 ಸಾವಿರಕ್ಕೂ ಅಧಿಕ ಮಂದಿ ಇದೆ ನಾಡ ದೋಣಿ ಮೀನುಗಾರಿಕೆಯನ್ನು ನಂಬಿಕೊಂಡು ಇಲ್ಲಿ ಜೀವನ ನಡೆಸುತ್ತಿದ್ದು, ಹೊರಬಂದರು ಕಾಮಗಾರಿ ನೆನಗುದಿಗೆ ಬಿದ್ದು, ಮೀನುಗಾರರು ಸಂಕಷ್ಟ ಅನುಭವಿಸುವಂತಾಗಿದೆ. ಪ್ರತಿ ವರ್ಷವೂ ಕೂಡ ಮೀನುಗಾರರೇ ಸೇರಿ ಹಣ ಒಟ್ಟು ಮಾಡಿ ಮಳೆಗಾಲದ ಸಿದ್ಧತೆಯನ್ನ ಮಾಡಿಕೊಳ್ಳುತ್ತಿದ್ದು, ವರ್ಷವೂ ಲಕ್ಷಾಂತರ ರೂಪಾಯಿ ಸ್ವಂತ ಹಣವನ್ನು ಬಂದರು ದುರಸ್ತಿಗೆ ಬಳಸುತ್ತಿದ್ದಾರೆ.

ರಾಜ್ಯದ ಪ್ರಪ್ರಥಮ ಕೃತಕ ಹೊರಬಂದರು ಎನ್ನುವ ಕೀರ್ತಿಗೆ ಪಾತ್ರವಾಗಬೇಕಿದ್ದ ಮರವಂತೆಯ ಬ್ರೇಕ್ ವಾಟರ್ ಹೊರ ಬಂದರು ಕಾಮಗಾರಿ ಅರ್ಧಕ್ಕೆ ನಿಂತಿರುವುದು ಮಾತ್ರ ವಿಪರ್ಯಾಸ. ರಾಜ್ಯ ಮತ್ತು ಕೇಂದ್ರ ಸರಕಾರ ಇಲ್ಲಿನ ಮೀನುಗಾರರ ಹಿತದೃಷ್ಟಿಯನ್ನು ಗಮನದಲ್ಲಿರಿಸಿ ಕಾಮಗಾರಿಯನ್ನು ಪೂರ್ಣಗೊಳಿಸಿದಲ್ಲಿ ಮೀನುಗಾರರ ಬದುಕು ಹಸನಾಗುವುದರಲ್ಲಿ ಎರಡು ಮಾತಿಲ್ಲ ಎನ್ನುವಂತಾಗಿದೆ.












Click it and Unblock the Notifications