ಕರೆಂಟ್ ಬಿಲ್ ಕೊಡಬೇಡಿ:ಮೀಟರ್ ಬಳಿ ಚೀಟಿ ಅಂಟಿಸಿದ ಉಡುಪಿ ನಿವಾಸಿ
ಉಡುಪಿ, ಮೇ 17: ಕಾಂಗ್ರೆಸ್ ಅಧಿಕಾರಕ್ಕೇರಲು ಬಳಸಿದ ಗ್ಯಾರಂಟಿ ಸೂತ್ರವೇ ಇದೀಗ ಕಾಂಗ್ರೆಸ್ ಕಂಟಕವಾಗುವ ವಿದ್ಯಮಾನ ರಾಜ್ಯದಲ್ಲಿ ನಡೆಯುತ್ತಿದೆ. ಚಿತ್ರದುರ್ಗದ ಬಳಿಕ ಕರಾವಳಿಯ ಉಡುಪಿಯಲ್ಲೂ ವ್ಯಕ್ತಿಯೋರ್ವ ನಾನಿನ್ನು ಕರೆಂಟ್ ಬಿಲ್ ಕಟ್ಟಲ್ಲ ಬಿಲ್ ಕೊಡಬೇಡಿ ಎಂದು ವಿದ್ಯುತ್ ಮೀಟರ್ ಬಳಿ ಬೋರ್ಡ್ ಅಳವಡಿಸಿದ ಪ್ರಸಂಗ ನಡೆದಿದೆ.
ಕರೆಂಟ್ ಬಿಲ್ ಕಟ್ಟುವುದಿಲ್ಲ ಎಂದು ಚೀಟಿ ಬರೆದು ಉಡುಪಿಯ ಪೆರಂಪಳ್ಳಿ ನಿವಾಸಿ ವಾಸುದೇವ ಭಟ್ ಮೆಸ್ಕಾಂಗೆ ಶಾಕ್ ನೀಡಿದ್ದಾರೆ. ಮೀಟರ್ ಬೋರ್ಡ್‌ಗೆ ಚೀಟಿ ಅಂಟಿಸಿರುವ ವಾಸುದೇವ ಭಟ್, ಮೆಸ್ಕಾಂನವರೇ ಕ್ಷಮಿಸಿ ಜೂನ್ ತಿಂಗಳಿಂದ ನಮಗೆ ಕರೆಂಟ್ ಬಿಲ್ ಕೊಡಬೇಡಿ. ನಾವು ಬಿಲ್ ಕಟ್ಟಲ್ಲ ಎಂದು ಚೀಟಿ ಅಂಟಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಾಸುದೇವ ಭಟ್ ಪೆರಂಪಳ್ಳಿ, ಕಾಂಗ್ರೆಸ್ ಸರ್ಕಾರ ಬಂದರೆ ಜೂನ್ ತಿಂಗಳಿಂದಲೇ ಉಚಿತ ವಿದ್ಯುತ್ ಕೊಡುವ ಯೋಜನೆ ಘೋಷಣೆಯಾಗಿದೆ. ನಾನು ಸೇರಿದಂತೆ ಯಾರೂ ವಿದ್ಯುತ್ ಬಿಲ್ ಪಾವತಿ ಮಾಡಬೇಕಾಗಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಶೇಕಡಾ 95 ಜನತೆ ಇದರ ಲಾಭ ಪಡೆಯಬಹುದು ಎಂದು ಡಿಕೆಶಿ ಹೇಳಿದ್ದಾರೆ. ಡಿಕೆಶಿ ಹೇಳಿರುವ ಶೇಕಡಾ 95ರ ಒಳಗೆ ನಾನು ಕೂಡ ಬರುತ್ತೇನೆ ಎಂದರು.
ನಾನು ಕೂಡ ಒಬ್ಬ ಫಲಾನುಭವಿ ಎಂಬುದು ದೃಢ ಆಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಿದೆ ನಾನು ವಿದ್ಯುತ್ ಬಿಲ್ ಕಟ್ಟಲ್ಲ. ನಾನು ತಿಂಗಳಿಗೆ 200 ಯೂನಿಟ್ ಖರ್ಚು ಮಾಡುತ್ತಿಲ್ಲ. ನಾನು ಫಲಾನುಭವಿ ಆಗಿರುವುದರಿಂದ ಮೀಟರ್ ಬೋರ್ಡಿನಲ್ಲಿ ಫಲಕ ಹಾಕಿದ್ದೇನೆ. ನಾನು ಇಲ್ಲದಿರುವಾಗ ಮೆಸ್ಕಾಂನವರು ಬಂದರೆ ಅವರಿಗೆ ಗೊತ್ತಾಗಲಿ ಎಂದು ಬೋರ್ಡ್ ಅಳವಡಿಸಿದ್ದೇನೆ. ನನಗೆ ಮೆಸ್ಕಾಂನವರು ಕರೆಂಟ್ ಬಿಲ್ ಕೊಡಬೇಕಾಗಿಲ್ಲ. ನಾನು ಸರ್ಕಾರಕ್ಕೆ ತೆರಿಗೆ ಕಟ್ಟುತ್ತಿರುವುದರಿಂದ ಈ ಯೋಜನೆಗೆ ಅರ್ಹ ಫಲಾನುಭವಿ ಆಗಿದ್ದೇನೆ ಎಂದು ವಾಸುದೇವ ಭಟ್ ಪೆರಂಪಳ್ಳಿ ತಿಳಿಸಿದ್ದಾರೆ.

ಚಿತ್ರದುರ್ಗ: ಕರೆಂಟ್ ಬಿಲ್ ಕಟ್ಟಲ್ಲ ಎಂದು ಗ್ರಾಮಸ್ಥರ ಅವಾಜ್
ಇನ್ನು ಚಿತ್ರದುರ್ಗದಲ್ಲಿಯೂ ಇಂತಹ ಘಟನೆ ನಡೆದಿದ್ದು, ಚಿತ್ರದುರ್ಗ ಜಿಲ್ಲೆಯ ಜಾಲಿಕಟ್ಟೆ ಗ್ರಾಮದ ನಿವಾಸಿಗಳು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ನಾವು ಕರೆಂಟ್ ಬಿಲ್ ಕಟ್ಟಲ್ಲ. ನೀವು ಕಾಂಗ್ರೆಸ್ ನಾಯಕರನ್ನೇ ಕೇಳಿ ನಾವು ಕರೆಂಟ್ ಬಿಲ್ ಕಟ್ಟಲ್ಲ ಎಂದು ಪಟ್ಟು ಹಿಡಿದು ಬೆಸ್ಕಾಂ ಸಿಬ್ಬಂದಿಗೆ ಆವಾಜ್ ಹಾಕಿದ್ದರು.
ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದು ನಾಲ್ಕು ದಿನಗಳಾದರೂ ರಾಜ್ಯದ ಮುಖ್ಯಮಂತ್ರಿ ಯಾರೆಂಬುದು ಇನ್ನೂ ಅಂತಿಮವಾಗಿಲ್ಲ. ಮುಖ್ಯಮಂತ್ರಿ ಪಟ್ಟಕ್ಕಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಡುವೆ ಗುದ್ದಾಟ ನಡೆಯುತ್ತಿದ್ದು, ಸಚಿವ ಸಂಪುಟದ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿಯನ್ನು ಪಕ್ಷ ಹಂಚಿಕೊಂಡಿಲ್ಲ. ಆದರೆಚ ಈ ಎಲ್ಲಾ ನಡುವೆ ರಾಜ್ಯದ ಜನತೆ ಕಾಂಗ್ರೆಸ್ ಚುನಾವಣೆಗೂ ಮೊದಲು ಘೋಷಿಸಿರುವ ಗ್ಯಾರಂಟಿಗಳ ಬಗ್ಗೆ ಎದುರು ನೋಡುತ್ತಿದ್ದಾರೆ.












Click it and Unblock the Notifications