Karnataka elections 2023: ಕೃಷ್ಣನಗರಿ ಉಡುಪಿ ಜಿಲ್ಲೆಯ ಕ್ಷೇತ್ರವಾರು ಮತದಾರರ ವಿವರಗಳನ್ನು ತಿಳಿಯಿರಿ
ಮಂಗಳೂರು, ಏಪ್ರಿಲ್, 02: ರಾಜ್ಯ ವಿಧಾನಸಭೆ ಚುನಾವಣಾ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಅದರಲ್ಲೂ ಕರಾವಳಿಯಲ್ಲಿ ಚುನಾವಣಾ ಕಣ ತೀವ್ರ ಕುತೂಹಲ ಮೂಡಿಸಿದೆ. ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಲ್ಲೂ ರಾಜರಾರಣಿಗಳಿಂದ ಮತಬೇಟೆ ಜೋರಾಗಿಯೇ ನಡೆದಿದ್ದು, ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಹೊಸ ಮತದಾರರ ವಿವರವನ್ನು ಸವಿವರವಾಗಿ ವಿವರಿಸಿದ್ದಾರೆ.
ಕ್ಷೇತ್ರವಾರು ಮತದಾರರ ವಿವರ
ಜಿಲ್ಲೆಯಲ್ಲಿ ಕಾಪು, ಕಾರ್ಕಳ, ಉಡುಪಿ, ಕುಂದಾಪುರ, ಬೈಂದೂರು ವಿಧಾನಸಭಾ ಕ್ಷೇತ್ರಗಳಿದ್ದು, ಎಲ್ಲಾ ಕ್ಷೇತ್ರಗಳಲ್ಲಿ ಒಟ್ಟು 10,29,678 ಮತದಾರರಿದ್ದಾರೆ. ಬೈಂದೂರು ಕ್ಷೇತ್ರದಲ್ಲಿ ಪುರುಷರು 1,13,758 ಮತದಾರರು, ಮಹಿಳೆಯರು 1,18,962 ಮಂದಿ ಮತ್ತು ಮೂರು ಮಂದಿ ತೃತೀಯ ಲಿಂಗಿಗಳ ಸಹಿತ ಒಟ್ಟು 2,32,723 ಜನರಿದ್ದಾರೆ.

ಕುಂದಾಪುರ ಕ್ಷೇತ್ರದಲ್ಲಿ ಪುರುಷರು 99,577 ಮಂದಿ, ಮಹಿಳೆಯರು 1,07,625 ಮಂದಿ ಮತ್ತು ಇಬ್ಬರು ತೃತೀಯ ಲಿಂಗಿಗಳ ಸಹಿತ ಒಟ್ಟು 2,07,204 ಜನ ಮತದಾರರು ಇದ್ದಾರೆ. ಮತ್ತೊಂದೆಡೆ ಉಡುಪಿ ಕ್ಷೇತ್ರದಲ್ಲಿ ಪುರುಷರು 1,03,704 ಮಂದಿ, ಮಹಿಳೆಯರು 1,10,945 ಮಂದಿ ಮತ್ತು ಒಬ್ಬರು ತೃತೀಯ ಲಿಂಗಿಗಳ ಸಹಿತ ಒಟ್ಟು 2,14,650 ಜನ ಮತದಾರರು ಇದ್ದಾರೆ.
ಕಾಪು ಕ್ಷೇತ್ರದಲ್ಲಿ ಪುರುಷರು 89,444 ಮಂದಿ, ಮಹಿಳೆಯರು 97,233 ಮಂದಿ ಮತ್ತು ನಾಲ್ವರು ತೃತೀಯ ಲಿಂಗಿಗಳ ಸಹಿತ ಒಟ್ಟು 1,86,681 ಜನ ಮತದಾರರು ಇದ್ದಾರೆ. ಇನ್ನು ಕಾರ್ಕಳ ಕ್ಷೇತ್ರದಲ್ಲಿ ಪುರುಷರು 90,380 ಮಂದಿ, ಮಹಿಳೆಯರು 98,030 ಮಂದಿ ಸೇರಿದಂತೆ ಒಟ್ಟು 1,88,410 ಜನ ಮತದಾರರು ಇದ್ದಾರೆ.
ಇಡೀ ಉಡುಪಿ ಜಿಲ್ಲೆಯಲ್ಲಿ ಪುರುಷರು 4,96,863, ಮಹಿಳೆಯರು 5,32,795 ಸೇರಿದಂತೆ ಒಟ್ಟು 1,0,29,678 ಮತದಾರರು ಇದ್ದಾರೆ. ಇನ್ನು ಜಿಲ್ಲೆಯಲ್ಲಿ 1,111 ಮತಗಟ್ಟೆಗಳಿದ್ದು, ಅತೀ ಹೆಚ್ಚು ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ 246 ಮತಗಟ್ಟೆಗಳಿವೆ. ಕುಂದಾಪುರದಲ್ಲಿ 222, ಉಡುಪಿಯಲ್ಲಿ 226, ಕಾಪುನಲ್ಲಿ 208, ಕಾರ್ಕಳದಲ್ಲಿ 209 ಮತಗಟ್ಟೆಗಳು ಇವೆ.
ಇನ್ನು ಇಡೀ ಉಡುಪಿ ಜಿಲ್ಲೆಯಲ್ಲಿ 31,268 ಮಂದಿ 80 ವರ್ಷ ಮೇಲ್ಪಟ್ಟ ವೃದ್ಧರಿದ್ದಾರೆ. ಅವರಿಗೆಲ್ಲರಿಗೂ ಅವರು ಇಚ್ಛಿಸಿದ್ದಲ್ಲಿ ಮನೆಯಲ್ಲಿಯೇ ಮತದಾನ ಮಾಡುವ ವ್ಯವಸ್ಥೆ ಕಲ್ಪಿಸುವುದಾಗಿ ಜಿಲ್ಲಾಧಿಕಾರಿ ಕೂರ್ಮರಾವ್ ಹೇಳಿದ್ದಾರೆ. ಐದು ವಿಧಾನಸಭಾ ಕ್ಷೇತ್ರಗಳ 20 ಕಡೆಗಳಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದ್ದು, ಎಲ್ಲಾ ಚೆಕ್ ಪೋಸ್ಟ್‌ಗಳಮೇಲೆ ಹದ್ದಿನಗಣ್ಣು ಇಡುವುದಾಗಿ ಜಿಲ್ಲಾಧಿಕಾರಿ ಕೂರ್ಮರಾವ್ ಹೇಳಿದ್ದಾರೆ.
ಧಾರವಾಡ ಜಿಲ್ಲೆಯ ಮತದಾರರ ವಿವರ
ರಾಜ್ಯ ವಿಧಾನಸಭಾ ಚನಾವಣೆಗೆ ಸಂಬಂಧಿಸಿದಂತೆ ಮಾರ್ಚ್ 29ರಿಂದ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು, ಧಾರವಾಡ ಜಿಲ್ಲೆಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗ್ಡೆ ಇತ್ತೀಗಷ್ಟೇ ತಿಳಿಸಿದ್ದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ ಜಿಲ್ಲೆಯಲ್ಲಿ ಒಟ್ಟು 15,07,414 ಮತದಾರರು ಇದ್ದಾರೆ. 7,57,522 ಪುರುಷ, 7,49,807 ಮಹಿಳಾ ಹಾಗೂ 85 ಜನ ಇತರೆ ಮತದಾರರು ಇದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಈ ಬಾರಿ 26,426 ಯುವ ಮತದಾರರಿದ್ದಾರೆ ಎಂದಿದ್ದರು.
21,036 ಜನ ವಿಕಲಚೇತನ ಮತದಾರರು, 32,301 ಜನ 80 ವರ್ಷ ಮೇಲ್ಪಟ್ಟ ಮತದಾರರಿದ್ದಾರೆ. ಜೊತೆಗೆ 400 ಜನ 100 ವರ್ಷ ಮೇಲ್ಪಟ್ಟ ಮತದಾರರಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 24 ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿದ್ದು, ತೀವ್ರ ಕಟ್ಟೆಚ್ಚರ ವಹಿಸಲಾಗಿದೆ ಎಂದಿದ್ದರು.
ಜಿಲ್ಲೆಯಲ್ಲಿ ಒಟ್ಟು 1636 ಮತಗಟ್ಟೆಗಳ ಸ್ಥಾಪನೆಯಾಗಲಿದ್ದು, ಇದರಲ್ಲಿ 944 ಮತಗಟ್ಟೆಗಳು ಗ್ರಾಮಾಂತರ ಪ್ರದೇಶದಲ್ಲಿ, 692 ಮತಗಟ್ಟೆಗಳು ನಗರ ಪ್ರದೇಶದಲ್ಲಿ ಇರಲಿವೆ. ಆ ಪೈಕಿ 216 ಸೂಕ್ಷ್ಮ ಹಾಗೂ 162 ಅತೀ ಸೂಕ್ಷ್ಮ ಮತಗಟ್ಟೆಗಳು ಇರಲಿವೆ ಎಂದಿದ್ದರು.
ಧಾರವಾಡ ಜಿಲ್ಲೆಯಲ್ಲಿ ಈವರೆಗೂ 80,32,070 ಅಕ್ರಮ ಹಣ ವಶಕ್ಕೆ ಪಡೆಯಲಾಗಿದೆ. 1061.75 ಲೀಟರ್ ಅಕ್ರಮ ಮದ್ಯ ವಶಕ್ಕೆ ಪಡೆಯಲಾಗಿದೆ. 4.49 ಕೆ.ಜಿ. ಗಾಂಜಾ, 12,562 ಅಕ್ರಮ ಸೀರೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು. ಒಬ್ಬ ರಾಜಕೀಯ ಅಭ್ಯರ್ಥಿ 40 ಲಕ್ಷದವರೆಗೆ ಖರ್ಚು ಮಾಡಬಹುದಾಗಿದೆ. ಅಲ್ಲದೇ ರಾಜಕೀಯ ವ್ಯಕ್ತಿಗಳು ನಿಗದಿತ ಸ್ಥಳದಲ್ಲಿ ಬ್ಯಾನರ್, ಹೋಲ್ಡಿಂಗ್ಸ್ ಹಾಕಬೇಕೆಂದರೆ ಪರವಾನಗಿ ಪಡೆಯಬೇಕು ಎಂದು ಸೂಚಿಸಿದ್ದರು.












Click it and Unblock the Notifications