ಉಡುಪಿ ಹಿಜಾಬ್ ವಿವಾದ: ಪರೀಕ್ಷೆಗೆ ಹಾಜರಾಗುವಂತೆ ವಿದ್ಯಾರ್ಥಿನಿಯರಿಗೆ ಪತ್ರ ಬರೆದ ಪ್ರಾಂಶುಪಾಲ
ಉಡುಪಿ, ಫೆಬ್ರವರಿ 22: ಉಡುಪಿ ಸೇರಿದಂತೆ ರಾಜ್ಯದಲ್ಲಿ ಹಿಜಾಬ್ ಹಕ್ಕಿಗಾಗಿ ಪ್ರತಿಭಟನೆ ನಡೆಯುತ್ತಿದ್ದು, ಉಡುಪಿಯ ಆರು ವಿದ್ಯಾರ್ಥಿನಿಯರು ಹಿಜಾಬ್‌ಗಾಗಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಪ್ರತಿದಿನ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ.
ಈ ಮಧ್ಯೆ ಪದವಿಪೂರ್ವ ಪ್ರಾಯೋಗಿಕ ಪರೀಕ್ಷೆಗಳು ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ಉಡುಪಿ ಸರಕಾರಿ ಪಿಯು ಕಾಲೇಜು ಪ್ರಾಂಶುಪಾಲ ರುದ್ರೇಗೌಡ ಅವರು ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗುವಂತೆ ಪ್ರತಿಭಟನಾನಿರತ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಪತ್ರ ಬರೆದಿದ್ದಾರೆ. ಹಿಜಾಬ್ ಧರಿಸಲು ಒತ್ತಾಯಿಸಿ ವಿದ್ಯಾರ್ಥಿನಿಯರು ತರಗತಿಗಳಿಗೆ ಗೈರುಹಾಜರಾಗಿದ್ದಾರೆ.
ಪ್ರಾಯೋಗಿಕ ಪರೀಕ್ಷೆಗಳಿಗೆ 30 ಅಂಕಗಳು ಮತ್ತು ಬರವಣಿಗೆ ಪರೀಕ್ಷೆಗೆ 70 ಅಂಕಗಳನ್ನು ನಿಗದಿಪಡಿಸಲಾಗಿದೆ. ಪ್ರಾಯೋಗಿಕ ಪರೀಕ್ಷೆಗಳು ಫೆಬ್ರವರಿ 25ರಂದು ಪ್ರಾರಂಭವಾಗುತ್ತವೆ. ಪದವಿಪೂರ್ವ ಶಿಕ್ಷಣ ಇಲಾಖೆಯ ನಿಯಮಗಳ ಪ್ರಕಾರ, ಪ್ರಾಯೋಗಿಕ ವಿಷಯಗಳಿಗೆ ಪೂರಕ ಪರೀಕ್ಷೆಯನ್ನು ನಡೆಸಲಾಗುವುದಿಲ್ಲ.

"ಉಡುಪಿ ಸರಕಾರಿ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ಮೂವರು ಧರಣಿ ನಿರತ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗುವಂತೆ ಪತ್ರ ಬರೆದಿದ್ದೇನೆ," ಎಂದು ಪ್ರಾಂಶುಪಾಲ ರುದ್ರೇಗೌಡ ಹೇಳಿದ್ದಾರೆ.
ಹಿಜಾಬ್ ಇಸ್ಲಾಂನ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ
ವಿದ್ಯಾರ್ಥಿಗಳ ನಡುವೆ ಹಿಜಾಬ್- ಕೇಸರಿ ಶಾಲು ಸಮವಸ್ತ್ರ ವಿವಾದ ತಾರಕಕ್ಕೇರಿದ್ದು, ವಿದ್ಯಾರ್ಥಿಗಳು ಹೋರಾಟ, ಪ್ರತಿಭಟನೆಗೆ ಇಳಿದಿದ್ದಾರೆ. ಸಮವಸ್ತ್ರ ಸಮರ ದಿನಕ್ಕೊಂದು ಸ್ವರೂಪ ಪಡೆಯುತ್ತಿದೆ. ಕರಾವಳಿ ಜಿಲ್ಲೆ ಉಡುಪಿಯಲ್ಲಿ ಹೊತ್ತಿಕೊಂಡ ಹಿಜಾಬ್ ಕಿಡಿ ರಾಜ್ಯಾದ್ಯಂತ ವಿಸ್ತರಿಸಿದೆ. ಈ ನಡುವೆ ಹಿಜಾಬ್ ವಿವಾದದ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ಮುಂದುವರಿದಿದೆ. ಸದ್ಯ ಸರ್ಕಾರದ ಪರ ವಾದ ಮಂಡಿಸಿರುವ ಎಜಿ ಪ್ರಭುಲಿಂಗ ನಾವದಗಿ, ಹಿಜಾಬ್ ಇಸ್ಲಾಂನ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂದು ವಾದಿಸಿದ್ದಾರೆ.
ಇಂದು ಮಧ್ಯಾಹ್ನ ಹೈಕೋರ್ಟ್ ವಿಚಾರಣೆ
ಸಮವಸ್ತ್ರದ ಜತೆ ಹಿಜಾಬ್‌ಗೆ ಅನುಮತಿ ಕೋರಿ ಅರ್ಜಿ ವಿಚಾರಕ್ಕೆ ಸಂಬಂಧಿಸಿ ಹೈಕೋರ್ಟ್‌ನಲ್ಲಿ ಇಂದು ಮಧ್ಯಾಹ್ನ 2.30ಕ್ಕೆ ವಿಚಾರಣೆ ಮುಂದುವರಿಯಲಿದೆ. ಹೈಕೋರ್ಟ್ ತ್ರಿಸದಸ್ಯ ಪೀಠ ಅರ್ಜಿ ವಿಚಾರಣೆ ನಡೆಸಲಿದೆ. ಸಿಜೆ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್, ನ್ಯಾ.ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್‌ರ ವಿಸ್ತೃತ ಪೀಠ ಅರ್ಜಿ ವಿಚಾರಣೆ ನಡೆಸಲಿದೆ.

82 ಸಾವಿರ ಮುಸ್ಲಿಂ ವಿದ್ಯಾರ್ಥಿನಿಯರ ಪೈಕಿ 500 ಮಂದಿ ಮಾತ್ರ ಪ್ರತಿಭಟನೆ
ರಾಜ್ಯದಲ್ಲಿ ಹಿಜಾಬ್ ವಿವಾದ ತಾರಕಕ್ಕೇರಿದ ಹಿನ್ನಲೆ ಹಿಜಾಬ್ ಸಂಘರ್ಷ ಶುರು ಮಾಡುತ್ತಿರುವವರ ಅಂಕಿ- ಸಂಖ್ಯೆಯ ಮಾಹಿತಿಯನ್ನು ಶಿಕ್ಷಣ ಇಲಾಖೆ ಕಲೆ ಹಾಕಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 82 ಸಾವಿರ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಪದವಿ ಪೂರ್ವ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದಾರೆ.
82 ಸಾವಿರ ಮುಸ್ಲಿಂ ವಿದ್ಯಾರ್ಥಿನಿಯರ ಪೈಕಿ 400- 500 ವಿದ್ಯಾರ್ಥಿನಿಯರು ಹಿಜಾಬ್‌ಗಾಗಿ ಫೈಟ್ ಮಾಡುತ್ತಿದ್ದಾರೆ. ಶೇ.1ಕ್ಕಿಂತ ಕಡಿಮೆ ಪ್ರತಿಶತ ವಿದ್ಯಾರ್ಥಿನಿಯರು ಹಿಜಾಬ್‌ಗಾಗಿ ಜಟಾಪಟಿ ನಡೆಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

82 ಸಾವಿರ ಮುಸ್ಲಿಂ ವಿದ್ಯಾರ್ಥಿನಿಯರಲ್ಲಿ 81,500 ವಿದ್ಯಾರ್ಥಿಗಳಿಂದ ಹಿಜಾಬ್ ಕಿರಿಕ್ ಇಲ್ಲ. ಪದವಿ ಪೂರ್ವ ಕಾಲೇಜಿನ 81,500 ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ತಗೆದು ತರಗತಿಗೆ ಬರುತ್ತಿದ್ದಾರೆ. ಕೇವಲ 500 ವಿದ್ಯಾರ್ಥಿನಿಯರದ್ದೇ ಹಿಜಾಬ್ ಹಠ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮಾಹಿತಿ ನೀಡಿದ್ದಾರೆ.
ಹಿಜಾಬ್ ಪರ ಅರ್ಜಿ ಸಲ್ಲಿಸಿದ್ದ ವಿದ್ಯಾರ್ಥಿನಿ ಸಹೋದರನ ಮೇಲೆ ಹಲ್ಲೆ
ಕರ್ನಾಟಕದ ಉಡುಪಿಯ ವಿದ್ಯಾರ್ಥಿನಿ ಮತ್ತು ಹಿಜಾಬ್ ಪ್ರಕರಣದ ಅರ್ಜಿದಾರರಲ್ಲಿ ಒಬ್ಬರಾದ ಹಜ್ರಾ ಶಿಫಾ, "ತನ್ನ ಸಹೋದರನ ಮೇಲೆ ಬಲಪಂಥೀಯ ಬೆಂಬಲಿಗರ ಗುಂಪೊಂದು ಹಲ್ಲೆ ನಡೆಸಿದೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಹಿಜಾಬ್ ಧರಿಸುವುದನ್ನು ಮುಂದುವರಿಸುವ ತನ್ನ ನಿರ್ಧಾರಕ್ಕೆ ಹಿಂಸಾಚಾರದ ಸಂಬಂಧವಿದೆ," ಎಂದಿದ್ದಾರೆ.
ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ಉಡುಪಿ ಜಿಲ್ಲೆ ಮಲ್ಪೆಯ ಬಂದರಿನಲ್ಲಿರುವ ಬಿಸ್ಮಿಲ್ಲಾ ಹೋಟೆಲ್‌ನಲ್ಲಿ ಆಕೆಯ ಸಹೋದರ ಸೈಫ್ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ.












Click it and Unblock the Notifications